ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ದೋಷ ಪರಿಶೀಲಿಸಿ: ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶನ

Last Updated 14 ಮಾರ್ಚ್ 2023, 23:00 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿವಾಜಿನಗರ ಮತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಥಳಾಂತರಗೊಂಡಿರುವ ಹಾಗೂ ಮರಣ ಹೊಂದಿರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಕೋರಲಾದ ಆಕ್ಷೇಪಣೆಗೆ ಸಂಬಂಧಿಸಿದಂತೆ 12 ದಿನಗಳಲ್ಲಿ ಕಾಯ್ದೆ ಮತ್ತು ನಿಯಮಗಳ ಅನುಸಾರ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ’ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತು ಶಿವಾಜಿನಗರದ ಬಿಜೆಪಿಯ ಬೂತ್‌ ಮಟ್ಟದ ಅಧಿಕಾರಿ ಎಂ.ಜಿ.ಪ್ರದೀಪ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಆದೇಶಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್‌ ರೆಡ್ಡಿ, ‘ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯೊಂದರಲ್ಲೇ 26 ಸಾವಿರದಷ್ಟು ಪ್ರಮಾಣದಲ್ಲಿ ಸ್ಥಳಾಂತರಗೊಂಡಿರುವ ಹಾಗೂ ಮರಣ ಹೊಂದಿರುವ ಮತದಾರರ ಹೆಸರುಗಳು ಪಟ್ಟಿಯಲ್ಲಿವೆ. ಅಂತೆಯೇ, ಶಾಂತಿನಗರ ಕ್ಷೇತ್ರ ವ್ಯಾಪ್ತಿಯಲ್ಲಿ 8 ಸಾವಿರದಷ್ಟು ಇಂತಹ ಮತದಾರರ ಹೆಸರುಗಳಿವೆ. ಈ ಕುರಿತ ಮನವಿಗಳನ್ನು ಪರಿಗಣಿಸಿ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸದ್ಯದಲ್ಲೇ ನಡೆಯಲಿದ್ದು, ಈ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ನಿರ್ದೇಶಿಸಬೇಕು’ ಎಂದು ಕೋರಿದರು.

ಪ್ರತಿವಾದಿ ರಿಜ್ವಾನ್‌ ಅರ್ಷದ್‌ ಪರ ಹಾಜರಿದ್ದ ಹಿರಿಯ ವಕೀಲ ಶಶಿಕಿರಣ ಶೆಟ್ಟಿ, ‘2023ರ ಜನವರಿ 15ರಂದು ಮತದಾರರ ಪಟ್ಟಿಯನ್ನು ಆಖೈರುಗೊಳಿಸಲಾಗಿದೆ. ನಿಯಮಗಳು ಮತ್ತು ಕಾಯ್ದೆಯ ಅನುಸಾರ ಆರು ತಿಂಗಳಿಗೂ ಮುನ್ನ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಬರುವುದಿಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಉಭಯತ್ರರ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರ, ನಿಯಮಗಳು ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯ ಅನುಸಾರ ಸೂಕ್ತ ಪರಿಶೀಲನೆ ನಡೆಸಿ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಿ. ಈ ಕುರಿತ ನಿರ್ಧಾರವನ್ನು ಇದೇ 26ರಂದು ಅಥವಾ ಅದಕ್ಕೂ ಮೊದಲು ತೆಗೆದುಕೊಳ್ಳಿ’ ಎಂದು ಆದೇಶಿಸಿ ಅರ್ಜಿ ವಿಲೇವಾರಿ ಮಾಡಿದೆ.

ಶಾಂತಿನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2022ರ ಡಿಸೆಂಬರ್‌ನಲ್ಲಿ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಿದ್ದ ಅರ್ಜಿದಾರರು, ‘ಇಲ್ಲಿ ಸ್ಥಳಾಂತರಗೊಂಡಿರುವ ಹಾಗೂ ಮರಣ ಹೊಂದಿರುವ ಮತದಾರರ ಸಂಖ್ಯೆ ಒಟ್ಟು 8 ಸಾವಿರದಷ್ಟಿದೆ’ ಎಂದು ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ‘8 ಸಾವಿರ ಮತದಾರರ ಪೈಕಿ 2,773 ಮತದಾರರು ವರ್ಗಾವಣೆ ಅಥವಾ ಮರಣ ಹೊಂದಿರುವುದು ಕಂಡುಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ’ ಎಂದು ತಿಳಿಸಿತ್ತು.

ಅಂತೆಯೇ, ‘ಶಿವಾಜಿನಗರದಲ್ಲಿ ಪಟ್ಟಿ ಮಾಡಲಾಗಿರುವ 26 ಸಾವಿರದಷ್ಟು ಮತದಾರರು ಸ್ಥಳಾಂತರಗೊಂಡಿದ್ದಾರೆ ಅಥವಾ ಮರಣ ಹೊಂದಿದ್ದಾರೆ ಎನ್ನಲಾದ ಆಕ್ಷೇಪಣೆಯಲ್ಲಿ; 914 ಮತದಾರರನ್ನು ಉಳಿಸಿಕೊಳ್ಳಲಾಗಿದೆ. ಉಳಿದಂತೆ 8,158 ಮತದಾರರ ವಿವರವನ್ನು ಕಾಯ್ದೆ ಮತ್ತು ನಿಯಮಗಳ ಅನುಸಾರ ಪರಿಶೀಲಿಸಬೇಕಿದೆ’ ಎಂದು ಆಯೋಗವು ಪ್ರತಿಕ್ರಿಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT