ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ: ಹೆಚ್ಚು ಪರಿಹಾರಕ್ಕೆ ಪ್ರಧಾನಿಗೆ ಬಿಎಸ್‌ವೈ ಮನವಿ

ಯುಕೆಪಿ–3, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಲು ಕೋರಿಕೆ
Last Updated 18 ಸೆಪ್ಟೆಂಬರ್ 2020, 18:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನೆರೆ, ಇತರ ನೈಸರ್ಗಿಕ ದುರಂತದ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್‌ ಅಡಿ ನೀಡುತ್ತಿರುವ ಪರಿಹಾರ ಸಾಲದು. ಆದಷ್ಟು ಬೇಗ ಮಾರ್ಗಸೂಚಿಯನ್ನು ಬದಲಿಸಿ ಹೆಚ್ಚು ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರುಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದರು.

ನವದೆಹಲಿಯ ಸಂಸತ್‌ ಭವನದಲ್ಲಿ ಪ್ರಧಾನಿಯವರನ್ನು ಶುಕ್ರವಾರ ಬೆಳಿಗ್ಗೆ ಭೇಟಿ ಮಾಡಿದ ಯಡಿಯೂರಪ್ಪ, ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಪರಿಹಾರ ಕೈಗೊಳ್ಳಲು ಬೇಗನೆ ಹಣಕಾಸಿನ ನೆರವು ನೀಡಬೇಕು ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ–3 ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಬೇಕು. ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಾದ ಮೇಕೆದಾಟು ಮತ್ತು ಕಳಸಾ ಬಂಡೂರಿ ನಾಲಾ ಯೋಜನೆಗಳಿಗೆ ಅನುಮತಿ ನೀಡಲು ಆದಷ್ಟು ಬೇಗ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ಅವರು ಮನವಿ ಮಾಡಿದರು.

ನವೆಂಬರ್‌ನಲ್ಲಿ ನಡೆಯುವ ‘ಬೆಂಗಳೂರು ಟೆಕ್‌ ಸಮಿಟ್‌’ ಅನ್ನು ಉದ್ಘಾಟಿಸುವಂತೆಯೂ ಯಡಿಯೂರಪ್ಪ ಆಹ್ವಾನ ನೀಡಿದರು. ಆ ಬಳಿಕ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು, ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದರು.

ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರನ್ನು ಭೇಟಿ ಮಾಡಿ, ಮೇಕೆದಾಟು ಹಾಗೂ ಕಳಸಾ ಬಂಡೂರಿ ಯೋಜನೆಗಳನ್ನು ಆರಂಭಿಸಲು ಪರಿಸರ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ನಿರ್ವಹಣಾ ನಿಧಿ ಬಿಡುಗಡೆಗೆ ಒತ್ತಾಯ

ಕೇಂದ್ರ ನಾಗರಿಕ ವಿಮಾನಯಾನ ಮತ್ತು ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನಗರ ಸ್ಥಳೀಯ ಸಂಸ್ಥೆಗಳಿಗೆ ₹29.52 ಕೋಟಿ ನಿರ್ವಹಣಾ ನಿಧಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.ಬಳ್ಳಾರಿ, ಕಲಬುರ್ಗಿ, ಮೈಸೂರು ಮತ್ತು ವಿಜಯಪುರ ನಗರಪಾಲಿಕೆಗಳನ್ನು ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಎಂದರು.

ವಿಎಸ್‌ಎನ್‌ಎಲ್‌ ಹೂಡಿಕೆ ಹಿಂತೆಗೆತ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ನಿಯಮಿತದ (ವಿಐಎಸ್‌ಎಲ್‌) ಹೂಡಿಕೆ ಹಿಂತೆಗೆತ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ಯಡಿಯೂರಪ್ಪಕೇಂದ್ರ ಪೆಟ್ರೋಲಿಯಂ, ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT