ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕೆ ಮುಜುಗರವಾಗದಂತೆ ನೋಡಿಕೊಳ್ಳಿ: ಕತ್ತಿ, ಸವದಿ, ಜಾರಕಿಹೊಳಿಗೆ ಸಿಎಂ ಸೂಚನೆ

Last Updated 7 ಡಿಸೆಂಬರ್ 2021, 15:43 IST
ಅಕ್ಷರ ಗಾತ್ರ

ಬೆಳಗಾವಿ: ವಿಧಾನಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿಗೆ ಮಂಗಳವಾರ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಉಮೇಶ ಕತ್ತಿ, ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೊಳಿ‌ ಜೊತೆ ಪ್ರತ್ಯೇಕವಾಗಿ ಮತ್ತು ಗುಪ್ತವಾಗಿ ಸಭೆ ನಡೆಸಿದರು.

ಅವರು ಮಧ್ಯಾಹ್ನದವರೆಗೆ ಇಲ್ಲಿರುತ್ತಾರೆ ಎಂದು ತಿಳಿಸಲಾಗಿತ್ತು. ಆದರೆ, ಸಂಜೆವರೆಗೂ ಮುಖಂಡರೊಂದಿಗೆ ಸಭೆ ನಡೆಸಿ ಚುನಾವಣಾ ಕಣದ ಚಿತ್ರಣವನ್ನು ಪಡೆದುಕೊಂಡರು.

‘ಬಿಜೆಪಿ ಅಭ್ಯರ್ಥಿ ಜೊತೆಗೆ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಅಧಿಕೃತವಾಗಿ ಬೆಂಬಲಿಸಲು ಸೂಚಿಸಬೇಕು ಎಂದು ರಮೇಶ ಕೋರಿದರು’ ಎಂದು ಮೂಲಗಳು ತಿಳಿಸಿವೆ.

‘ಪಕ್ಷಕ್ಕೆ ಮುಜುಗರ ಆಗುವಂತಹ ಫಲಿತಾಂಶ ಬಾರದಂತೆ ಎಲ್ಲರೂ ನೋಡಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸೂಚಿಸಿದರು ಎನ್ನಲಾಗಿದೆ.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ರಮೇಶ, ‘ಏನೂ ಅಂತಿಮವಾಗಿಲ್ಲ. ಇನ್ನೊಂದು ಸುತ್ತು ಸಭೆ ಆಗುತ್ತದೆ. ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ’ ಎಂದಷ್ಟೆ ತಿಳಿಸಿದರು.

ಬಾಲಚಂದ್ರ ಮಾತನಾಡಿ, ‘ಇದು ಬಿಜೆಪಿ ವರ್ಸಸ್ ಜಾರಕಿಹೊಳಿ ಕುಟುಂಬ ಅಲ್ಲ. ಬಿಜೆಪಿ ವರ್ಸಸ್‌ ಕಾಂಗ್ರೆಸ್ ಚುನಾವಣೆ. ಇದರಲ್ಲಿ ಕುಟುಂಬದ ವಿಚಾರಗಳನ್ನು ತರುವುದು ಬೇಡ. ದೇವರ ಆಶೀರ್ವಾದ ಇದ್ದವರು ಗೆಲ್ಲುತ್ತಾರೆ. ನಾವೆಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದೇವೆ; ಗೆಲ್ಲುತ್ತೇವೆ’ ಎಂದರು.

‘ಮತಗಟ್ಟೆಗಳಲ್ಲಿ ವಿಡಿಯೊ ಮಾಡುವಂತೆ ನಾವೂ ಹೇಳಿದ್ದೇವೆ. ಪೊಲೀಸ್ ಭದ್ರತೆ ಒದಗಿಸಲಿದ್ದಾರೆ. ಕಾಂಗ್ರೆಸ್‌ನವರಿಗೆ ಅದು ಇಷ್ಟವಾಗದಿದ್ದರೆ ಸೈನ್ಯವನ್ನೆ ತಂದು ನಿಲ್ಲಿಸಲಿ’ ಎಂದು ವ್ಯಂಗ್ಯವಾಡಿದರು.

‘ಲಖನ್ ಜಾರಕಿಹೊಳಿ ಬಂಡಾಯ ಅಭ್ಯರ್ಥಿಯಲ್ಲ. ಸ್ವತಂತ್ರ ಅಭ್ಯರ್ಥಿ ಎಂದು ಅವರೇ ಹೇಳಿಕೊಂಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT