ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಚೇತರಿಕೆ, ಅಭಿವೃದ್ಧಿಗೆ ವೇಗ: ಬಸವರಾಜ ಬೊಮ್ಮಾಯಿ

ಬದ್ಧ ವೆಚ್ಚ ಶೇ 89ಕ್ಕೆ ಇಳಿಕೆ l ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕಾಂಗ್ರೆಸ್ ನಾಯಕರು–ಸಿಎಂ
Last Updated 16 ಮಾರ್ಚ್ 2022, 22:03 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಬಳಿಕ ರಾಜ್ಯದಲ್ಲಿ ತ್ವರಿತಗತಿಯಲ್ಲಿ ಆರ್ಥಿಕ ಚೇತರಿಕೆ ಕಂಡಿದ್ದು, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗಿದೆ. ಆರ್ಥಿಕ ಶಿಸ್ತು ಕಾಪಾಡುವುದರ ಜತೆಗೆ ರಾಜ್ಯದ ಬೆಳವಣಿಗೆ ದರವೂ ಶೇ 9.5ಕ್ಕೆ ತಲುಪಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಬಜೆಟ್‌ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಬುಧವಾರ ಉತ್ತರ ನೀಡಿದ ಅವರು, ನಮ್ಮದು ಅಭಿವೃದ್ಧಿ ಮತ್ತು ಜನಪರವಾದ ಬಜೆಟ್‌. ಹಲವು ಸೂಕ್ಷ್ಮ ಚಿಂತನೆಗಳನ್ನೂ ಒಳಗೊಂಡಿದ್ದು, ಅದರ ಪ್ರಯೋಜನ ಮುಂದಿನ ದಿನಗಳಲ್ಲಿ ಕಾಣಬಹುದು ಎಂದು ಹೇಳಿದರು.

ಉತ್ತರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಸದಸ್ಯರು,‘ಸರ್ಕಾರದ ಉತ್ತರ ತೃಪ್ತಿ ತಂದಿಲ್ಲ. ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಜನ ವಿರೋಧಿ ಬಜೆಟ್‌’ ಎಂದು ಸಭಾತ್ಯಾಗ ನಡೆಸಿದರು.

ಕಳೆದ ಸಾಲಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ವೆಚ್ಚ ಸೇರಿ ಬದ್ಧ ವೆಚ್ಚ ಶೇ 98 ಆಗಿತ್ತು. ಈ ಸಾಲಿನಲ್ಲಿ ಅದನ್ನು ಶೇ 89ಕ್ಕೆ ಇಳಿಸಲಾಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಯನ್ನು ಬದ್ಧ ವೆಚ್ಚ ವ್ಯಾಪ್ತಿಯಿಂದ ಹೊರಕ್ಕೆ ಇಡಲಾಗುತ್ತಿದೆ ಎಂದು ಬೊಮ್ಮಾಯಿ ತಮ್ಮ ಸುದೀರ್ಘ ಉತ್ತರದಲ್ಲಿ ವಿವರಿಸಿದರು.

‘ಕೋವಿಡ್‌ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ನಿರೀಕ್ಷಿತ ಸಂಪನ್ಮೂಲ ಸಂಗ್ರಹ ಆಗಿರಲಿಲ್ಲ. ಕೋವಿಡ್‌ ನಿರ್ವಹಣೆಗೆ ಸರ್ಕಾರ ₹8 ಸಾವಿರ ಕೋಟಿಯಷ್ಟೇ ಖರ್ಚು ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಎರಡು ವರ್ಷಗಳಲ್ಲಿ ನಾವು ₹15 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಈಗ ಆರ್ಥಿಕ ಸ್ಥಿತಿ ಚೇತರಿಸಿಕೊಂಡಿದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುತ್ತಿದೆ’ ಎಂದರು.

‘ಕಳೆದ ಸಾಲಿನಲ್ಲಿ ವಾಣಿಜ್ಯ ತೆರಿಗೆಯಲ್ಲಿ ₹11,444 ಕೋಟಿ, ಮೋಟಾರು ವಾಹನ ತೆರಿಗೆ ₹2,072 ಕೋಟಿ, ನೋಂದಣಿ ಹಾಗೂ ಮುದ್ರಾಂಕ ₹1,500 ಕೋಟಿ, ಇತರ ತೆರಿಗೆ ₹540 ಕೋಟಿ, ಕೇಂದ್ರ ತೆರಿಗೆ ಪಾಲಿನಲ್ಲಿ ₹6,892 ಕೋಟಿ ಕಡಿಮೆ ಆಗಿತ್ತು. ಒಟ್ಟು ₹21,835 ಕೋಟಿ ತೆರಿಗೆ ಸಂಗ್ರಹ ಕಡಿಮೆಯಾಗಿತ್ತು. ಅಬಕಾರಿಯಿಂದ ಮಾತ್ರ ₹632 ಕೋಟಿ ಹೆಚ್ಚುವರಿ ವರಮಾನ ಬಂದಿತ್ತು. ಹೀಗಾಗಿ, ಸಾಲ ತೆಗೆದುಕೊಳ್ಳುವುದು ಅನಿವಾರ್ಯ’ ಎಂದು ಹೇಳಿದರು.

‘2021–22ರಲ್ಲಿ ರಾಜ್ಯದಲ್ಲಿ ವಿತ್ತೀಯ ಕೊರತೆ ₹15,134 ಕೋಟಿ ಎಂದು ಅಂದಾಜಿಸಲಾಗಿತ್ತು. ಸರ್ಕಾರ ಕೈಗೊಂಡ ಉಪಕ್ರಮಗಳಿಂದಾಗಿ ವಿತ್ತೀಯ ಕೊರತೆ ₹6,235 ಕೋಟಿ ಆಗಿದೆ. 2022–23ನೇ ಸಾಲಿನಲ್ಲಿ ವಿತ್ತೀಯ ಕೊರತೆ ₹14,699 ಕೋಟಿ ಎಂದು ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಬಿಗಿ ಕ್ರಮಗಳನ್ನು ಕೈಗೊಂಡು ಅದನ್ನು ಕನಿಷ್ಠ ಮಟ್ಟಕ್ಕೆ ಇಳಿಸಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಲ ಹೆಚ್ಚಿಸಿದ್ದ ಸಿದ್ದರಾಮಯ್ಯ: ‘ಒಟ್ಟು ಆಂತರಿಕ ಉತ್ಪನ್ನದ ಲೆಕ್ಕದ ಆಧಾರದಲ್ಲಿ 2020–21ನೇ ಸಾಲಿನಲ್ಲಿ ₹96,374 ಕೋಟಿ ಸಾಲ ಪಡೆಯಲು ಅವಕಾಶ ಇತ್ತು. ಆದರೆ, ₹72,121 ಕೋಟಿಯಷ್ಟೇ ಸಾಲ ಪಡೆಯಲಾಗಿದೆ. 21–22 ರಲ್ಲಿ ₹67,100 ಕೋಟಿ ಸಾಲ ಪಡೆಯಲು ಅವಕಾಶ ಇದ್ದರೂ ₹63,100 ಕೋಟಿಯಷ್ಟೇ ಪಡೆಯಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಗರಿಷ್ಠ ಸಾಲ ಪಡೆಯಲಾಗಿದೆ. ಅವರು ಅಧಿಕಾರ ಸ್ವೀಕರಿಸುವ ವೇಳೆಗೆ ರಾಜ್ಯದ ಸಾಲದ ಪ್ರಮಾಣ ₹1.38 ಲಕ್ಷ ಕೋಟಿ ಇತ್ತು. ಐದು ವರ್ಷಗಳಲ್ಲಿ ಅದನ್ನು ₹2.86 ಲಕ್ಷ ಕೋಟಿಗೆ ಏರಿತ್ತು. ಸಿದ್ದರಾಮಯ್ಯ ಅವರು ಸಾಲದ ಪ್ರಮಾಣವನ್ನು ಶೇ 107ರಷ್ಟು ಹೆಚ್ಚಿಸಿದರು. 60 ವರ್ಷಗಳಲ್ಲಿ ಮಾಡದ ಸಾಧನೆಯನ್ನು ಐದೇ ವರ್ಷಗಳಲ್ಲಿ ಮಾಡಿದರು’ ಎಂದು ವ್ಯಂಗ್ಯವಾಡಿದರು.

‘2019–20ರಲ್ಲಿ ಒಟ್ಟು ಸಾಲ ₹3.27 ಲಕ್ಷ ಕೋಟಿ ಇತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಸಾಲದ ಪ್ರಮಾಣ ಶೇ 58ರಷ್ಟೇ ಹೆಚ್ಚಾಗಿದೆ. ನಾವು ಇತಿಮಿತಿಯಲ್ಲಿ ಆರ್ಥಿಕ ನಿರ್ವಹಣೆ ಮಾಡಿದ್ದೇವೆ. ಆದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತು ಇರಲಿಲ್ಲ. ಸಾಲ ಪಡೆಯುವ ಅವಕಾಶವನ್ನು ಕಾಂಗ್ರೆಸ್‌ನವರು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡರು’ ಎಂದು ಬೊಮ್ಮಾಯಿ ಟೀಕಿಸಿದರು.

‘ಎನ್‌ಡಿಎ ಅವಧಿಯಲ್ಲಿ ಅನುದಾನ ಹೆಚ್ಚು’
‘ಯುಪಿಎ ಸರ್ಕಾರದ ಅವಧಿಗಿಂತ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ಹೆಚ್ಚು ಅನುದಾನ ನೀಡಿದೆ. 2009–14ರ ಅವಧಿಯಲ್ಲಿ ಸಹಾಯ ಅನುದಾನದ ರೂಪದಲ್ಲಿ ಯುಪಿಎ ಸರ್ಕಾರ ರಾಜ್ಯಕ್ಕೆ ₹39,828 ಕೋಟಿ ನೀಡಿತ್ತು. 2014–19 ರ ಅವಧಿಯಲ್ಲಿ ಎನ್‌ಡಿಎ ಸರ್ಕಾರ ₹74,373 ಕೋಟಿ ನೀಡಿದೆ. ಕಳೆದ ಎರಡು ವರ್ಷಗಳಲ್ಲೇ ₹52,761 ಕೋಟಿ ನೀಡಿದೆ. 15ನೇ ಹಣಕಾಸು ಆಯೋಗದ ಮಧ್ಯವಾರ್ಷಿಕ ವರದಿಯಲ್ಲಿ ರಾಜ್ಯದ ಪಾಲಿನ ಮೊತ್ತವಾದ ₹5,495 ಕೋಟಿಯನ್ನು ಕೈಬಿಡಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ. ಅದರ ಬದಲು ಕೇಂದ್ರ ಸರ್ಕಾರ ಪೆರಿಫೆರಲ್‌ ವರ್ತುಲ ರಸ್ತೆಗೆ ₹6 ಸಾವಿರ ಕೋಟಿ ಅನುದಾನ ನೀಡಿದೆ’ ಎಂದು ಬೊಮ್ಮಾಯಿ ಹೇಳಿದರು.

‘ಜಿಎಸ್‌ಟಿ ಪರಿಹಾರ ರೂಪದಲ್ಲಿ ಒಟ್ಟು ₹97,688 ಕೋಟಿ ಬರಬೇಕಿದೆ. ಇದುವರೆಗೆ ₹54,264 ಕೋಟಿ ಬಂದಿದೆ. ₹30,514 ಕೋಟಿ ಸಾಲ ಪಡೆಯಲು ಕೇಂದ್ರ ಒಪ್ಪಿಗೆ ನೀಡಿದೆ. ಇನ್ನು ₹12,909 ಕೋಟಿ ಬರಬೇಕಿದೆ. ಅದು ಈ ವರ್ಷದಲ್ಲಿ ಬರುವ ವಿಶ್ವಾಸ ಇದೆ. ಆದರೆ, ತಪ್ಪು ಮಾಹಿತಿಗಳನ್ನು ನೀಡಿ ಕಾಂಗ್ರೆಸ್‌ ನಾಯಕರು ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಹೇಳಿದರು.

‘ಶಾಲಾ ಮೂಲಸೌಕರ್ಯಕ್ಕೆ ನರೇಗಾ ಹಣ’
‘ನರೇಗಾ ಅನುದಾನ ಬಳಸಿ ಶಾಲೆಗಳಲ್ಲಿ ಮೂಲಸೌಕರ್ಯ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಬೊಮ್ಮಾಯಿ ಹೇಳಿದರು.

‘ಈ ಸಾಲಿನ ಬಜೆಟ್‌ನಲ್ಲಿ ಶಾಲಾ ಮೂಲಸೌಕರ್ಯಕ್ಕೆ ₹500 ಕೋಟಿ ಮೀಸಲಿಡಲಾಗಿದೆ. ಅದು ಸಾಲದು. ಅದಕ್ಕಾಗಿ ನರೇಗಾ ಅನುದಾನ ಬಳಸಿಕೊಳ್ಳಲು ಯೋಜಿಸಲಾಗಿದೆ. ಈ ವರೆಗೆ ಅಂಗನವಾಡಿ ಕಟ್ಟಡ ನಿರ್ಮಾಣ, ಕಾಂಪೌಂಡ್‌ ನಿರ್ಮಾಣಕ್ಕಷ್ಟೇ ನರೇಗಾ ಹಣ ಬಳಸಿಕೊಳ್ಳಲಾಗುತ್ತಿತ್ತು’ ಎಂದು ಅವರು ಹೇಳಿದರು.

ಕೋವಿಡ್‌ ನಿರ್ವಹಣೆಗೆ ₹15 ಸಾವಿರ ಕೋಟಿ!
ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ಗಾಗಿ ಸುಮಾರು ₹15,000 ಕೋಟಿ ಖರ್ಚು ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೋವಿಡ್‌ ಅವಧಿಯಲ್ಲಿ ಸತ್ತವರೆಲ್ಲ ಕೋವಿಡ್‌ನಿಂದ ಸತ್ತವರಲ್ಲ. ಬೇರೆ ಬೇರೆ ಕಾರಣಕ್ಕೆ ಸತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಕೋವಿಡ್‌ ಸಾವಿನ ಬಗ್ಗೆ ಸಮಿತಿಯೊಂದನ್ನು ರಚಿಸಲಾಗುವುದು. ಕೋವಿಡ್‌ನಿಂದ ಸತ್ತವರಿಗೆಲ್ಲ ಸರ್ಕಾರದಿಂದ ಪರಿಹಾರ ಸಿಗಲಿದೆ ಎಂದರು.

*

ಜನಸಾಮಾನ್ಯನಿಂದ ಜನಸಾಮಾನ್ಯರಿಗಾಗಿ ಮಂಡಿಸಿದ ಅಭಿವೃದ್ಧಿ ಪರವಾದ ಆತ್ಮ ನಿರ್ಭರ್‌ ಬಜೆಟ್‌ ನಮ್ಮದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT