ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌‌ಕಾಯಿನ್‌ ಪ್ರಕರಣದಲ್ಲಿ ಯಾರನ್ನೂ ಬಿಡುವುದಿಲ್ಲ,ಬಲಿ ಹಾಕುತ್ತೇವೆ– ಬೊಮ್ಮಾಯಿ

Last Updated 14 ನವೆಂಬರ್ 2021, 10:58 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ. ಬಲಿ ಹಾಕುತ್ತೇವೆ. ಈ ವಿಚಾರದಲ್ಲಿ ಹಿಂದೆಮುಂದೆ ನೋಡುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನೀವು (ಕಾಂಗ್ರೆಸ್‌) ಸುಮ್ಮನೆ, ನಿಮ್ಮದ್ದನ್ನು ಮುಚ್ಚಿಟ್ಟುಕೊಳ್ಳಲು ಇಲ್ಲದವರ ಹೆಸರನ್ನು ತೇಲಿ ಬಿಡುವ ಪ್ರಯತ್ನ ಮಾಡುತ್ತಿದ್ದೀರಿ. ಈ ಪ್ರಕರಣದಲ್ಲಿ ರಾಜ್ಯಕ್ಕೆ, ರಾಷ್ಟ್ರಕ್ಕೆ ಕೆಲವು ವ್ಯಕ್ತಿಗಳಿಗೆ ಏನಾದರೂ ಮೋಸ ಆಗಿದ್ದರೆ ಯಾರು ಮಾಡಿದ್ದಾರೆ, ಯಾರು ಪ್ರಭಾವಿಗಳು ಎಂಬುದನ್ನು ಪತ್ತೆ ಹಚ್ಚಿ, ಅವರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ. ಇದನ್ನು ನಾನು ಈಗಾಗಲೇ ಹಲವು ಬಾರಿ ಹೇಳಿದ್ದೇನೆ’ ಎಂದರು.

‘ಬಿಟ್‌ ಕಾಯಿನ್‌ ಪ್ರಕರಣವನ್ನು ಭೇದಿಸಿದವರೇ ನಾವು. ನಾವೇ ಅವನನ್ನು (ಶ್ರೀಕಿ) ಬಂಧಿಸಿ ಎಫ್‌ಐಆರ್‌ ದಾಖಲಿಸಿದ್ದೇವೆ. ದೋಷಾರೋಪ ಪಟ್ಟಿ ಸಲ್ಲಿಸಿದ್ದೇವೆ. ಹೀಗಿರುವಾಗ ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ಪ್ರಕರಣವನ್ನು ಇ.ಡಿ, ಸಿಬಿಐಗೆ ಶಿಫಾರಸು ಮಾಡಿದ್ದು ನಾವು. ಇ.ಡಿ ತನಿಖೆ ನಡೆಯುತ್ತಿದೆ. ಸಿಬಿಐ, ಇಂಟರ್‌ಪೋಲ್‌ನವರು ಹಲವಾರು ಮಾಹಿತಿಗಳನ್ನು ಕೇಳಿದ್ದಾರೆ. ಅದನ್ನೂ ಕೊಟ್ಟಿದ್ದೇವೆ. ಆಧಾರರಹಿತ ಮಾತುಗಳನ್ನಾಡುವ ಬದಲು, ತನಿಖೆ ನಡೆಸುವ ಇ.ಡಿ ಅಧಿಕಾರಿಗಳಿಗೆ ಅಥವಾ ನಮ್ಮ ಪೊಲೀಸರಿಗೆ ದಾಖಲೆಗಳನ್ನು ನೀಡಲಿ’ ಎಂದೂ ಬೊಮ್ಮಾಯಿ ಸವಾಲು ಹಾಕಿದರು.

‘ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ಸುರ್ಜೇವಾಲಾ ಅವರ ಆರು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇವೆ. 2016ರಿಂದ ಈ ಪ್ರಕರಣ ಇದೆ ಎಂದು ಅವರು ಹೇಳುತ್ತಾರೆ. ಅಂದಿನಿಂದಲೇ ಈ ಪ್ರಕರಣಕ್ಕೂ ಕರ್ನಾಟಕಕ್ಕೂ ಸಂಬಂಧ ಇದ್ದರೆ, ನೀವು ಯಾಕೆ ತನಿಖೆ ನಡೆಸಲಿಲ್ಲ. ಆಗ ನಿಮ್ಮದೇ ಸರ್ಕಾರ ಇತ್ತಲ್ಲವೇ. ನೀವು ಯಾಕೆ ಆಗ ಗಮನಹರಿಸಲಿಲ್ಲ. ಆಗ ಅಧಿಕಾರದಲ್ಲಿದ್ದ ಅವರ ಪಕ್ಷದ ಸಚಿವರು, ಮುಖ್ಯಮಂತ್ರಿಯನ್ನೇ ಸುರ್ಜೇವಾಲಾ ಅವರು ಕೇಳಬೇಕಿತ್ತು’ ಎಂದು ಪ್ರಶ್ನಿಸಿದರು.

‘2018ರಲ್ಲಿ ನೀವು ಆರೋಪಿಯನ್ನು ಬಿಟ್ಟು ಕಳುಹಿಸಿದಿರಿ. ಅವತ್ತೇ ಹಿಡಿದು ಹಿನ್ನೆಲೆ ತಿಳಿದುಕೊಳ್ಳಬೇಕಿತ್ತು. ನಿರೀಕ್ಷಣಾ ಜಾಮೀನು ಪಡೆದ ಬಳಿಕವೂ ವಿಚಾರಣೆ ಮಾಡಲಿಲ್ಲ. 2020ರಲ್ಲಿ ನಾವು ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ಮಾಡಿದಾಗ ಹ್ಯಾಕಿಂಗ್‌ ಪ್ರಕರಣ ಗೊತ್ತಾಗಿದೆ. ನೀವು ಅಧಿಕಾರದಲ್ಲಿದ್ದಾಗ ಇವೆಲ್ಲವಕ್ಕೂ ಅವಕಾಶ ನೀಡಿ, ಈಗ ನಾವು ಬಂಧಿಸಿ ತನಿಖೆ ಕೈಗೊಂಡು ಬಹಿರಂಗಪಡಿಸಿದಾಗ ನಮಗೇ ಪ್ರಶ್ನೆ ಕೇಳುತ್ತೀರಾ’ ಎಂದೂ ಮರು ಪ್ರಶ್ನೆ ಹಾಕಿದರು.

‘5 ಸಾವಿರ ಬಿಟ್‌ ಕಾಯಿನ್‌ ಪ್ರಕರಣ ಎಂದು ಹೇಳಿದ್ದೀರಿ. ಯಾವ ಆಧಾರದಲ್ಲಿ ಹೇಳಿದ್ದೀರಿ. ಒಂದು ಟ್ವಿಟರ್‌ ಹ್ಯಾಂಡಲ್‌ ಮೇಲಿನ ಆಧಾರದಲ್ಲಿ ಹೇಳಿದ್ದೀರಿ. ಹೀಗೆ ಹೇಳುವ ಮೂಲಕ ನಿಮ್ಮ ಚಿಂತನೆ ಎಷ್ಟು ದಿವಾಳಿ ಆಗಿದೆ ಎನ್ನುವುದು ಗೊತ್ತಾಗುತ್ತದೆ. ಯಾರು ಬೇಕಾದರು ಟ್ವಿಟರ್‌ನಲ್ಲಿ ಆರೋಪಿಸಬಹುದು. ಆದರೆ, ಅದಕ್ಕೆ ಪುರಾವೆ, ಸಾಂದರ್ಭಿಕ ಸಾಕ್ಷ್ಯಗಳನ್ನು ಇಟ್ಟುಕೊಂಡು ಮಾತನಾಡಬೇಕಿತ್ತು. ರಾಷ್ಟ್ರೀಯ ಪಕ್ಷದ ವಕ್ತಾರರಾಗಿ ಇದು ಸರಿಯಲ್ಲ‘ ಎಂದು ಸುರ್ಜೇವಾಲಾ ಅವರನ್ನು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT