ಶುಕ್ರವಾರ, ಏಪ್ರಿಲ್ 16, 2021
27 °C
ನೀತಿ ಆಯೋಗದ ಸಭೆಯಲ್ಲಿ ಹಲವು ವಿಷಯಗಳ ಪ್ರಸ್ತಾಪ

ಆರ್ಥಿಕ ನೆರವು: ಬೇಡಿಕೆ ಸಲ್ಲಿಸಿದ ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಭದ್ರಾ ಮೇಲ್ದಂಡೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು. ನದಿ ತಿರುವು ಯೋಜನೆಗಳಿಗೆ ಅನುದಾನ ಒದಗಿಸಬೇಕು. ಕಾಲುವೆಗಳ ಆಧುನೀಕರಣ ಯೋಜನೆಯಡಿ ಸಲ್ಲಿಸಲಾಗಿರುವ ₹ 6,673 ಕೋಟಿ ಮೊತ್ತದ ಪ್ರಸ್ತಾವನೆಗೆ ಮಂಜೂರಾತಿ ನೀಡಬೇಕು’ ಎಂದು ಕೇಂದ್ರ ಸರ್ಕಾರದ ಎದುರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬೇಡಿಕೆ ಇಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ಆರನೇ ಸಭೆಯಲ್ಲಿ ವರ್ಚುವಲ್‌ ಮೂಲಕ ಭಾಗವಹಿಸಿದ ಮುಖ್ಯಮಂತ್ರಿ, ‘ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಿಗೆ ಇಂಟರ್ನೆಟ್ ಸೌಲಭ್ಯ ಒದಗಿಸಲು ಒಪ್ಟಿಕಲ್ ಫೈಬರ್ ನೆಟ್ ವರ್ಕ್ ರೂಪಿಸಲು ನಿರ್ಧರಿಸಲಾಗಿದೆ. ಅದಕ್ಕೆ ₹ 4,300 ಕೋಟಿ ನೆರವು ನೀಡಬೇಕು’ ಎಂದೂ ಮನವಿ ಮಾಡಿದರು.

‘ಕಾನೂನು ತೊಡಕು ಮತ್ತು ಪರಿಸರ ಹೋರಾಟಗಳ ಕಾರಣಕ್ಕೆ ಮೂಲಸೌಕರ್ಯ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿವೆ. ನ್ಯಾಯಾಲಯಗಳಲ್ಲಿ ಇಂಥ ವ್ಯಾಜ್ಯಗಳ ತ್ವರಿತ ವಿಲೇವಾರಿಗೆ ವ್ಯವಸ್ಥೆ ರೂಪಿಸಬೇಕು. ನೂತನ ಶಿಕ್ಷಣನೀತಿ ಅನುಷ್ಠಾನಕ್ಕೆ ಕೈಗೊಳ್ಳಬೇಕಾಗಿರುವ ಹಲವು ಉಪಕ್ರಮಗಳಿಗೂ ನೆರವು ಒದಗಿಸಬೇಕು’ ಎಂದು ಕೋರಿದರು.

ರಾಜ್ಯದ ಕೆಲವು ಪ್ರಮುಖ ಅಂಶಗಳ ಬಗ್ಗೆ ಪ್ರಧಾನಿಯ ಗಮನಸೆಳೆದ ಮುಖ್ಯಮಂತ್ರಿ, ‘ಖಾಸಗಿ ಸಹಭಾಗಿತ್ವದಲ್ಲಿ ಮೂರು ಬಂದರುಗಳ ಅಭಿವೃದ್ಧಿ, ರೈಲ್ವೆ ಪಾಲುದಾರಿಕೆಯಲ್ಲಿ ಬೆಂಗಳೂರು ಉಪ ನಗರ ರೈಲು ಅಭಿವೃದ್ಧಿ ಯೋಜನೆ, ಅಟಲ್ ಭೂ ಜಲ ಯೋಜನೆಯಡಿ ಅಂತರ್ಜಲ ಕೊರತೆ ಇರುವ 41 ತಾಲ್ಲೂಕುಗಳಲ್ಲಿ ಜಲ ಸಂರಕ್ಷಣೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 114 ಹಿಂದುಳಿದ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಯನ್ನು ನೀತಿ ಆಯೋಗದ 49 ಮಹತ್ವಾಕಾಂಕ್ಷೆಯ ಮಾನದಂಡಗಳ ಅನ್ವಯ ಕೈಗೊಳ್ಳಲಾಗುತ್ತಿದೆ’ ಎಂದರು.

‘ಆತ್ಮನಿರ್ಭರ್ ಯೋಜನೆಯಡಿ ಜಿಲ್ಲಾ ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಪರ್-ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ₹ 2,753 ಕೋಟಿ ವೆಚ್ಚದಲ್ಲಿ 13 ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದೆ. ಆಯುಷ್ ಪದ್ಧತಿಗೆ ಉತ್ತೇಜನ ನೀಡುವ ಸಮಗ್ರ ಸಾರ್ವಜನಿಕ ಆರೋಗ್ಯ ನೀತಿ ಜಾರಿಗೆ ತರಲಾಗಿದೆ. ಪೌಷ್ಟಿಕತೆ ಕಡಿಮೆ ಇರುವ 16 ಜಿಲ್ಲೆಗಳ 67 ತಾಲ್ಲೂಕುಗಳಲ್ಲಿ ಪೌಷ್ಟಿಕತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು’ ಎಂದೂ ಮುಖ್ಯಮಂತ್ರಿ ಮನವಿ ಮಾಡಿದರು.

ಈ ವೇಳೆ ಪ್ರಧಾನಿ, ‘ಸುಲಲಿತ ವಹಿವಾಟಿ’ಗೆ ಆದ್ಯತೆ ನೀಡಿದಂತೆ, ‘ಸುಲಲಿತ ಜೀವನ’ಕ್ಕೂ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು