ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕೆ ವಾಪಸಾಗಲು ಆಹ್ವಾನ: ನಾಯಕರ ಭಿನ್ನಧ್ವನಿ

ಸಿದ್ಧಾಂತ ಒಪ್ಪಿದರೆ ಸ್ವಾಗತ: ಡಿ.ಕೆ. ಶಿವಕುಮಾರ್‌
Last Updated 3 ಜುಲೈ 2021, 19:51 IST
ಅಕ್ಷರ ಗಾತ್ರ

ಬೆಂಗಳೂರು: ಭಾವಿ ಮುಖ್ಯಮಂತ್ರಿ ಹೇಳಿಕೆ, ಬಳಿಕ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಗೊಂದಲ, ನಂತರ ಪದಾಧಿಕಾರಿಗಳ ಬದಲಾವಣೆಯ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯೆ ಭಿನ್ನಧ್ವನಿ ಎದ್ದಿರುವ ಬೆನ್ನಲ್ಲೇ, ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದ ಶಾಸಕರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ.

‘ಕಾಂಗ್ರೆಸ್‌ನ ಸಿದ್ಧಾಂತ, ನಾಯಕತ್ವ ಒಪ್ಪಿ, ಕೆಲಸ ಮಾಡಲು ಇಚ್ಛಿಸುವ ಯಾರೇ ಆದರೂ ಪಕ್ಷ ಸೇರಲು ಅರ್ಜಿ ಹಾಕಬಹುದು. ನಾನು ಕೇವಲ 17 ಜನರನ್ನು (ಕಾಂಗ್ರೆಸ್‌, ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿದ ಶಾಸಕರು) ಉದ್ದೇಶಿಸಿ ಈ ಮಾತು ಹೇಳುತ್ತಿಲ್ಲ. ಯಾರೇ ಅರ್ಜಿ ಹಾಕಿದರೂ ಅದನ್ನು ಪರಿಶೀಲಿಸಿ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಪ್ರಳಯ ಆದರೂ 14 ಜನರನ್ನು (ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕರು) ಸೇರಿಸಿಕೊಳ್ಳುವುದಿಲ್ಲ ಎಂದು ಸದನದಲ್ಲಿ ಹೇಳಿದ್ದೆ. ಈ ಬಗ್ಗೆ ಶಿವಕುಮಾರ್‌ಜೊತೆ ನಾನು ಮಾತನಾಡುತ್ತೇನೆ’ ಎಂದರು.

ಅರ್ಜಿ ಹಾಕಲಿ: ‘ಯಾರು ಕಾಂಗ್ರೆಸ್ ಸಿದ್ಧಾಂತ, ನಾಯಕತ್ವ ನಂಬಿ ಪಕ್ಷ ಸೇರಲು ಬಯಸುತ್ತಾರೊ ಅವರು ಅಲ್ಲಂ ವೀರಭದ್ರಪ್ಪ ನೇತೃತ್ವದ ಸಮಿತಿಗೆ ಅರ್ಜಿ ಹಾಕಲಿ. ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ತೆಗೆದುಕೊಳ್ಳಬಾರದು ಎಂಬುದನ್ನು ಸಮಿತಿ ಪರಿಶೀಲಿಸಿ ನಿರ್ಧರಿಸಲಿದೆ. ಬಳಿಕ ಯಾವುದೇ ಗೊಂದಲ ಉದ್ಭವಿಸಬಾರದು ಎಂಬ ಕಾರಣಕ್ಕೆ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ರಾಜ್ಯಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾರಿಗೆ ಇಚ್ಛೇ ಇದೆಯೊ ಅವರು ಅರ್ಜಿ ಹಾಕಲಿ, ಆ ಮೇಲೆ ಆ ಬಗ್ಗೆ ತೀರ್ಮಾನ ಮಾಡೋಣ’ ಎಂದು ಶಿವಕುಮಾರ್‌ ಶನಿವಾರ ಹೇಳಿದರು.

‘ಪಕ್ಷದಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಅಭಿಪ್ರಾಯ ಇರುತ್ತದೆ. ಈ ವಿಷಯದಲ್ಲಿ ವೈಯಕ್ತಿಕ ಅಭಿಪ್ರಾಯ ಮುಖ್ಯ ಅಲ್ಲ. ಪಕ್ಷದ ಒಟ್ಟಾರೆ ಅಭಿಪ್ರಾಯ ಮುಖ್ಯ. ಪಕ್ಷ ತೊರೆದು ಮಂತ್ರಿಯಾಗಿರುವ ಯಾರೂ ಪಕ್ಷ ಸೇರುವ ಬಗ್ಗೆ ಈವರೆಗೆ ಸಂಪರ್ಕ ಮಾಡಿಲ್ಲ. ನಾನು ಕೇವಲ ಅವರನ್ನು ಉದ್ದೇಶಿಸಿ ಮಾತ್ರ ಈ ಮಾತು ಹೇಳುತ್ತಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು’ ಎಂದು ಸ್ಪಷ್ಟಪಡಿಸಿದರು.

‘ರಾಜಕೀಯದಲ್ಲಿ ಬೆನ್ನಿಗೆ ಚೂರಿ ಹಾಕುವ ಕೆಲಸ ನಿತ್ಯ ನಡೆಯುತ್ತಿರುತ್ತದೆ. ಇದು ಕೇವಲ ಡಿ.ಕೆ. ಶಿವಕುಮಾರ್ ಅಥವಾ ಕಾಂಗ್ರೆಸ್ ಪಕ್ಷ ಎಂದಲ್ಲ, ಎಲ್ಲ ಪಕ್ಷಗಳಲ್ಲೂ ಇಂಥ ಉದಾಹರಣೆಗಳನ್ನು ನೋಡಿದ್ದೇವೆ. ಪ್ರತಾಪಗೌಡ ಪಾಟೀಲ ಅವರನ್ನು ನಾವು ಬಿಜೆಪಿಯಿಂದಲೇ ಕರೆ ತಂದಿದ್ದೆವು. ಹೀಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು, ವಾಪಸ್ ಆಗುವುದು ರಾಜಕೀಯದಲ್ಲಿ ಸಾಮಾನ್ಯ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT