ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸ್ವಚ್ಛತೆಗಿಳಿದ ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ

2 ತಿಂಗಳಲ್ಲಿ ಕಾಲೇಜು ಕಟ್ಟಡ ಪೂರ್ಣ: ತಪ್ಪಿದಲ್ಲಿ ಪಿಐಎಲ್ ಎಚ್ಚರಿಕೆ
Last Updated 7 ಜನವರಿ 2023, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸರ್, ನಮ್ಮ ಕಾಲೇಜಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದೆ. ವಾತಾವರಣ ಅನೈರ್ಮಲ್ಯದಿಂದ ಕೂಡಿದ್ದು ಸ್ವಚ್ಛತೆ ಇಲ್ಲ. ಸಮರ್ಪಕ ಶೌಚಾಲಯವಿಲ್ಲ. ಸಮಸ್ಯೆ ಪರಿಹರಿಸಿ’

– ಹೀಗೆಂದು ಚಿಕ್ಕಬಳ್ಳಾಪುರ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಕೆಲವು ದಿನಗಳ ಹಿಂದೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಬರೆದಿದ್ದ ಪತ್ರ ಕಾಲೇಜಿನ ವಾತಾವರಣ ಬದಲಿಸುವಂತೆ ಮಾಡಿದೆ.

ವಿದ್ಯಾರ್ಥಿನಿಯರು ಕಾಲೇಜಿನ ಸಮಸ್ಯೆಗಳ ಕುರಿತು ಇತ್ತೀಚೆಗೆ ಪತ್ರ ಚಳವಳಿ ನಡೆಸಿದ್ದರು. ಕಾನೂನು ಸೇವಾ ಪ್ರಾಧಿಕಾರಕ್ಕೂ ಪತ್ರ ಬರೆದಿದ್ದರು. ಪತ್ರ ಆಧರಿಸಿ ಪ್ರಾಧಿಕಾರದ ರಾಜ್ಯ ಘಟಕದ ಅಧ್ಯಕ್ಷರಾದ ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ಶನಿವಾರ ಕಾಲೇಜಿಗೆ ಭೇಟಿ ನೀಡಿದರು.

ದನದ ಕೊಟ್ಟಿಗೆಗಿಂತ ಅಧ್ವಾನ: ಕಾಲೇಜು ತಾತ್ಕಾಲಿಕವಾಗಿ ನಡೆಯುತ್ತಿರುವ ಸಿಟಿಜನ್ ‌ಕ್ಲಬ್
ಆವರಣ ಪ್ರವೇಶಿಸುತ್ತಿದ್ದಂತೆ ನ್ಯಾಯಮೂರ್ತಿಗಳು ಕೆಂಡಾ
ಮಂಡಲರಾದರು. ‘ದನದ ಕೊಟ್ಟಿಗೆಗಿಂತ ಕಾಲೇಜು ಅಧ್ವಾನವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ನಾನೂ ರೈತ ಕುಟುಂಬದಿಂದ ಬಂದವನು. ಇಲ್ಲಿ ಸ್ವಚ್ಛತೆಯನ್ನು ನಾನೇ ಮಾಡುತ್ತೇವೆ. ಅಗತ್ಯ ಸಲಕರಣೆ ತರಿಸಿ’ ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಸೂಚಿಸಿದರು.

ನಂತರ ಅಲ್ಲಿಂದ ಹೊಸದಾಗಿ ನಿರ್ಮಾಣವಾಗುತ್ತಿರುವ ಕಾಲೇಜು ಕಟ್ಟಡಕ್ಕೆ ಭೇಟಿ ನೀಡಿದರು. ಒಂಬತ್ತು ವರ್ಷಗಳಿಂದ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎನ್ನುವುದನ್ನು ತಿಳಿದು ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಎಂಜಿನಿಯರ್‌ಗಳು ಈ ವೇಳೆ ಭರವಸೆ ನೀಡಿದರು.

‘ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣವಾಗದಿದ್ದರೆ ವಿದ್ಯಾರ್ಥಿಗಳ ಪರವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲಾಗುವುದು. ಎರಡು ತಿಂಗಳು ನೋಡೋಣ. ಕೆಲಸ ಆಗದಿದ್ದರೆ ಪಿಐಎಲ್ ದಾಖಲಿಸಿ ಇಲ್ಲಿಯೇ ಸತ್ಯಾಗ್ರಹ ಕುಳಿತುಕೊಳ್ಳೋಣ’ ಎಂದು ನ್ಯಾಯಮೂರ್ತಿ ಹೇಳಿದರು.

ನಂತರ ತರಗತಿಗಳು ನಡೆಯುತ್ತಿದ್ದ ಸಿಟಿಜನ್ ಕ್ಲಬ್ ಆವರಣಕ್ಕೆ ಬಂದು ಕುಡುಗೋಲು ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ವಕೀಲರು, ಜಿಲ್ಲೆಯ ನ್ಯಾಯಾಧೀಶರು ಸಹ ಸ್ವಚ್ಛತೆಯಲ್ಲಿ ತೊಡಗಿದರು. ಅಷ್ಟರಲ್ಲಿ ಎಚ್ಚೆತ್ತ ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರು, ಯಂತ್ರವನ್ನು ತಂದು ಇಡೀ ಆವರಣ ಸ್ವಚ್ಛಗೊಳಿಸಿದರು. ಕಾಲೇಜು ಆವರಣ ಪೂರ್ಣವಾಗಿ ಸ್ವಚ್ಛವಾಗುವವರೆಗೂ ನ್ಯಾಯಮೂರ್ತಿಗಳು ಅಲ್ಲಿಂದ ಕದಲಲಿಲ್ಲ.

ಇಲ್ಲೇನೊ ಉತ್ಸವವಂತೆ. ಅಪ್ಪ, ಅಮ್ಮನಿಗೆ ಊಟ ಹಾಕದಿದ್ದರೂ ಉತ್ಸವ ಮಾಡುತ್ತಾರೆ. ಮಕ್ಕಳಿಗೆ ಶಿಕ್ಷಣ ನೀಡುವ ಶಕ್ತಿ ಇಲ್ಲ. ಸರ್ಕಾರ ಇದನ್ನು ಗಮನಿಸಲಿ.

-ಬಿ. ವೀರಪ್ಪ, ಹೈಕೋರ್ಟ್‌ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT