ಭಾನುವಾರ, ಸೆಪ್ಟೆಂಬರ್ 27, 2020
26 °C
ಚಿಕ್ಕಮಗಳೂರು, ಉಡುಪಿ

'ರಸ್ತೆ, ಸೇತುವೆ ಏಕೆ ನಿರ್ಮಿಸಿಲ್ಲ?'–ಸಂಸದರು, ಸಚಿವರಿಗೆ ನಾಗರಿಕರ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಂಕೇನಹಳ್ಳಿಯಲ್ಲಿ ಶನಿವಾರ ಸಂಸದೆ ಶೋಭಾ ಅವರನ್ನು ಗ್ರಾಮಸ್ಥರು ಪ್ರಶ್ನಿಸಿದರು. ಶಾಸಕ ಎಂ.ಪಿ.ಕುಮಾರಸ್ವಾಮಿ ಇದ್ದಾರೆ

ಚಿಕ್ಕಮಗಳೂರು: ಸೇತುವೆ ನಿರ್ಮಾಣ, ರಸ್ತೆ ರಿಪೇರಿ ಕುರಿತಂತೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ ಸಾರ್ವಜನಿಕರು ಶನಿವಾರ ಅತಿವೃಷ್ಟಿ ಹಾನಿ ವೀಕ್ಷಣೆಗೆ ತೆರಳಿದ್ದ ಸಚಿವರು ಹಾಗೂ ಸಂಸದರನ್ನು ತರಾಟೆ ತೆಗೆದುಕೊಂಡಿದ್ದಾರೆ.

‘ಕಳೆದ ವರ್ಷ ಮಳೆಗೆ ರಸ್ತೆ, ಸೇತುವೆ ಹಾಳಾಗಿದ್ದರೂ ಈವರೆಗೂ ಯಾಕೆ ಕ್ರಮ ವಹಿಸಿಲ್ಲ. ಕಾಮಗಾರಿಗೆ ₹4 ಕೋಟಿ ಬಿಡುಗಡೆಯಾಗಿದೆ ಎನ್ನಲಾಗುತ್ತಿದೆ. ಆದರೆ,ಕಾಮಗಾರಿ ಏಕೆ ಮಾಡಿಲ್ಲ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮೂಡಿಗೆರೆಯ ಬಂಕೇನಹಳ್ಳಿಯ ಕೆಲ ಯುವಕರು ಮತ್ತು ಗ್ರಾಮಸ್ಥರೊಬ್ಬರು ಖಾರವಾಗಿ ಪ್ರಶ್ನಿಸಿದರು. ‘ಇಂಥ ಪ್ರದೇಶದಲ್ಲಿ ಸ್ಥಳೀಯರಿಂದ ಕಾಮಗಾರಿ ಮಾಡಿಸಿದರೆ ಅವರು ಬಿಲ್‌ ಮಾಡಿಕೊಂಡು ಹೋಗುತ್ತಾರಷ್ಟೇ. ಇಲ್ಲಿ ಮಿಲಿಟರಿಯವರಿಂದ ಕಾಮಗಾರಿ ಮಾಡಿಸಲು ಕ್ರಮ ವಹಿಸುತ್ತೇವೆ’ ಎಂದು ಶೋಭಾ ಪ್ರತಿಕ್ರಿಯಿಸಿದರು.

ಕಾರು ತಡೆದು ಆಕ್ರೋಶ: ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆ ಖಂಡಿಸಿ ಹೆದ್ದಾರಿ ಹೋರಾಟ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗೆ ಕರೆ ಮಾಡಿದ ಸಚಿವರು ಶೀಘ್ರ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ವಾಗ್ವಾದ

ಚಿಕ್ಕಮಗಳೂರು: ಅಯ್ಯನಕೆರೆಯಲ್ಲಿ ಸಾಹಸ ಕ್ರೀಡೆ ತರಬೇತಿ ಚಟುವಟಿಕೆಗೆ ಅವಕಾಶ ನೀಡಿದರೆ ರೈತರಿಗೆ ಸಮಸ್ಯೆಯಾಗುತ್ತದೆ’ ಎಂದು ಆಕ್ಷೇಪ ವ್ಯಕ್ತಪಡಿಸಿ ಕೆಲ ಅಚ್ಚುಕಟ್ಟುದಾರರು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರೊಂದಿಗೆ ಶನಿವಾರ ವಾಗ್ವಾದ ಮಾಡಿದರು.

ಸಾಹಸ ಕ್ರೀಡಾ ತರಬೇತಿ ಚಟುವಟಿಕೆಗೆ ಚಾಲನೆ ಸಮಾರಂಭ ಶುರುವಾಗುತ್ತಿದ್ದಂತೆ ಅಲ್ಲಿಗೆ ಬಂದ ಅಚ್ಚುಕಟ್ಟುದಾರರು ತಗಾದೆ ತೆಗೆದರು.

ಸ್ಪಷ್ಟನೆ: ‘ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಗೆ ಅಯ್ಯನಕೆರೆ ನೀರಿನ ವಿಚಾರದಲ್ಲಿ ಹಕ್ಕು, ಅಧಿಕಾರ ನೀಡಿಲ್ಲ. ತರಬೇತಿಗೆ ಅವರ ವ್ಯಾಪ್ತಿ ಸೀಮಿತ. ಡೀಸೆಲ್‌ ಚಾಲಿತ ಯಂತ್ರ ಬಳಸಲು ಅವಕಾಶ ನೀಡಿಲ್ಲ’ ಎಂದು ರವಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು