ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತೂರಿನಲ್ಲಿ ಅಪಘಾತ: ಪಿಎಸ್‌ಐ ಸೇರಿ ಮೂವರ ಸಾವು

ಗಾಂಜಾ ಆರೋಪಿ ಬಂಧಿಸಲು ಹೋಗಿದ್ದ ಶಿವಾಜಿನಗರ ಠಾಣೆಯ ಪಿಎಸ್‌ಐ, ಕಾನ್‌ಸ್ಟೆಬಲ್‌, ಚಾಲಕ ದಾರುಣ ಅಂತ್ಯ
Last Updated 24 ಜುಲೈ 2022, 19:08 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರಪ್ರದೇಶದ ಚಿತ್ತೂರು ಬಳಿ ಭಾನುವಾರ ಬೆಳಿಗ್ಗೆ ‌ಅಪಘಾತ ಸಂಭವಿಸಿದ್ದು, ಬೆಂಗಳೂರಿನ ಶಿವಾಜಿನಗರ ಠಾಣೆ ಪಿಎಸ್ಐ ಹಾಗೂ ಕಾನ್‌ಸ್ಟೆಬಲ್ ಸೇರಿ ಮೂವರು ಮೃತಪಟ್ಟಿದ್ದಾರೆ.

‘ಗಾಂಜಾ ಸಾಗಣೆ ಹಾಗೂ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲೆಂದು ಶಿವಾಜಿನಗರ ಠಾಣೆ ಪೊಲೀಸರ ತಂಡ, ಆಂಧ್ರಪ್ರದೇಶಕ್ಕೆ ಹೋಗಿತ್ತು. ಇದೇ ಸಂದರ್ಭದಲ್ಲೇ ಅಪಘಾತ ಸಂಭವಿಸಿದೆ. ಪಿಎಸ್ಐ ಕೆ. ಅವಿನಾಶ್ (29), ಕಾನ್‌ಸ್ಟೆಬಲ್ ಅನಿಲ್ ಮುಳಿಕ್ (26) ಹಾಗೂ ಚಾಲಕ ಮ್ಯಾಕ್ಸ್‌ವೆಲ್ (28) ಮೃತಪಟ್ಟಿದ್ದಾರೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು. ‘ಅಪಘಾತದಲ್ಲಿ ಪ್ರೊಬೇಷನರಿ ಪಿಎಸ್‌ಐ ದೀಕ್ಷಿತ್ (28) ಹಾಗೂ ಕಾನ್‌ಸ್ಟೆಬಲ್ ಶರಣ ಬಸವ (29) ತೀವ್ರ ಗಾಯಗೊಂಡಿದ್ದಾರೆ. ಇವರನ್ನು ವೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದೂ ಹೇಳಿದರು.

‘ಅವಿನಾಶ್, ಬೀದರ್ ಜಿಲ್ಲೆಯ ಬಸವ ಕಲ್ಯಾಣದವರು. ಅನಿಲ್ ಮುಳಿಕ್, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕೆರೆ ಗ್ರಾಮದವರು. ಇವರ ಕುಟುಂಬಕ್ಕೆ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದೂ ತಿಳಿಸಿದರು.

ತಡೆಗೋಡೆಗೆ ಗುದ್ದಿರುವ ಕಾರು: ‘ಟ್ರಾವೆಲ್‌ ಏಜೆನ್ಸಿಯೊಂದರಿಂದ ಬಾಡಿಗೆ ಪಡೆದಿದ್ದ ಎರಡು ಕಾರುಗಳಲ್ಲಿ ಪೊಲೀಸರ ತಂಡಗಳು, ಶನಿವಾರ ರಾತ್ರಿ ಬೆಂಗಳೂರು ಬಿಟ್ಟಿದ್ದವು. ಪಿಎಸ್‌ಐ ಅವಿನಾಶ್‌ ನೇತೃತ್ವದ ತಂಡವಿದ್ದ ಇನೋವಾ ಕಾರನ್ನು ಮ್ಯಾಕ್ಸ್‌ವೆಲ್ ಚಲಾಯಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬೆಳಿಗ್ಗೆ 4.30ರ ಸುಮಾರಿಗೆ ಚಿತ್ತೂರು ತಲುಪಿದ್ದ ಕಾರು, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ತಿರುಪತಿಯತ್ತ ಹೊರಟಿತ್ತು. ಚಾಲಕ, ಅತಿ ವೇಗವಾಗಿ ಕಾರು ಚಲಾಯಿಸಿದ್ದರು. ನಿಯಂತ್ರಣ ತಪ್ಪಿದ ಕಾರು, ಹೆದ್ದಾರಿಯ ಕೆಳಸೇತುವೆಯ ತಡೆಗೋಡೆಗೆ ಗುದ್ದಿತ್ತು. ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿತು. ಪಿಎಸ್‌ಐ, ಕಾನ್‌ಸ್ಟೆಬಲ್ ಹಾಗೂ ಚಾಲಕ ಸ್ಥಳದಲ್ಲೇ ಮೃತಪಟ್ಟರೆಂದು ಆಂಧ್ರಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT