ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿನಗರ ಠಾಣೆಯಲ್ಲಿ ನೀರವ ಮೌನ: PSI ಅವಿನಾಶ್‌ಗೆ ಮದುವೆ ಸಿದ್ಧತೆ ನಡೆದಿತ್ತು

ಅಪಘಾತದಲ್ಲಿ ಪೊಲೀಸರ ಸಾವು
Last Updated 24 ಜುಲೈ 2022, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿರುವ ಪಿಎಸ್‌ಐ ಕೆ. ಅವಿನಾಶ್, 10 ದಿನಗಳ ಹಿಂದೆಯಷ್ಟೇ ಶಿವಾಜಿನಗರ ಠಾಣೆ ಕರ್ತವ್ಯಕ್ಕೆ ಹಾಜರಾಗಿದ್ದರು. ಡ್ರಗ್ಸ್ ಜಾಲ ಭೇದಿಸಲು ಹೋಗಿ ಜೀವ ಕಳೆದುಕೊಂಡಿದ್ದಾರೆ’ ಎಂದು ಅವಿನಾಶ್ ಅವರನ್ನು ನೆನೆದು ಸಹೋದ್ಯೋಗಿಗಳು ಕಣ್ಣೀರಿಟ್ಟರು.

ಪಿಎಸ್‌ಐ ಅವಿನಾಶ್ ಹಾಗೂ ಕಾನ್‌ಸ್ಟೆಬಲ್ ಅನಿಲ್ ಮುಳಿಕ್ ಸಾವಿನಿಂದಾಗಿ ಶಿವಾಜಿನಗರ ಠಾಣೆಯಲ್ಲಿ ಭಾನುವಾರ ನೀರವ ಮೌನ ಆವರಿಸಿತ್ತು. ಅಪಘಾತದ ಸುದ್ದಿ ತಿಳಿದು ಠಾಣೆಗೆ ಬಂದಿದ್ದ ಪಶ್ಚಿಮ ವಿಭಾಗದ ಡಿಸಿಪಿ ಭೀಮಾಶಂಕರ್, ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಗಾಯಾಳುಗಳ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು.

‘2017ನೇ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್ಐ) ಬ್ಯಾಚ್‌ನ ಅವಿನಾಶ್, ಜ್ಞಾನಭಾರತಿ ಹಾಗೂ ಪೀಣ್ಯ ಸಂಚಾರ ಠಾಣೆಯಲ್ಲಿ ಕೆಲಸ ಮಾಡಿದ್ದರು. ಇತ್ತೀಚೆಗಷ್ಟೇ ಅವರನ್ನು ಶಿವಾಜಿನಗರ ಠಾಣೆಗೆ ವರ್ಗಾಯಿಸಲಾಗಿತ್ತು. 10 ದಿನಗಳ ಹಿಂದೆಯಷ್ಟೇ ಅವಿನಾಶ್, ಠಾಣೆಗೆ ಬಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಶಿವಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ಆರೋಪಿಯೊಬ್ಬನನ್ನು ಶನಿವಾರ ಬೆಳಿಗ್ಗೆ ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ, ಆಂಧ್ರಪ್ರದೇಶದಿಂದ ಗಾಂಜಾ ಸಾಗಣೆಯಾಗುತ್ತಿದ್ದ ಮಾಹಿತಿ ಲಭ್ಯವಾಗಿತ್ತು. ಪ್ರಕರಣದ ತನಿಖೆ ಹೊಣೆ ಹೊತ್ತುಕೊಂಡಿದ್ದ ಅವಿನಾಶ್, ಸಿಬ್ಬಂದಿಗಳ ಜೊತೆ ಶನಿವಾರ ರಾತ್ರಿಯೇ ಆಂಧ್ರಪ್ರದೇಶಕ್ಕೆ ಹೊರಟಿದ್ದರು. ಮಾರ್ಗಮಧ್ಯೆಯೇ ಈ ಅವಘಡ ಸಂಭವಿಸಿದೆ’ ಎಂದರು.

‘ಅವಿನಾಶ್ ಅವರಿಗೆ ಮದುವೆ ಮಾಡಲೆಂದು ಕುಟುಂಬದವರು ಸಿದ್ಧತೆ ನಡೆಸಿದ್ದರು’ ಎಂದೂ ಅಧಿಕಾರಿ ಭಾವುಕರಾದರು.

ತರಬೇತಿ ಮುಗಿಸಿ 6 ತಿಂಗಳು: ‘ಕಾನ್‌ಸ್ಟೆಬಲ್ ಅನಿಲ್, ಕಳೆದ ವರ್ಷವಷ್ಟೇ ಕೆಲಸಕ್ಕೆ ಸೇರಿದ್ದರು. ತರಬೇತಿ ಮುಗಿಸಿ, ಆರು ತಿಂಗಳ ಹಿಂದೆಯಷ್ಟೇ ಶಿವಾಜಿನಗರ ಠಾಣೆಗೆ ನಿಯೋಜನೆಗೊಂಡು ವೃತ್ತಿ ಆರಂಭಿಸಿದ್ದರು. ಅವಿವಾಹಿತರಾಗಿದ್ದ ಅನಿಲ್ ಸಹ ಮದುವೆಗೆ ತಯಾರಿ ನಡೆಸುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಅವಿನಾಶ್ ಹಾಗೂ ಕಾನ್‌ಸ್ಟೆಬಲ್ ಅನಿಲ್, ಇಬ್ಬರೂ ಬಡತನದಲ್ಲಿ ಬೆಳೆದವರು. ಚಾಲಕ ಮ್ಯಾಕ್ಸ್‌ವೆಲ್ ಸಹ ಪೊಲೀಸರ ಕೆಲಸಕ್ಕೆ ನೆರವಾಗಲು ಹೋಗಿ ಪ್ರಾಣ ಬಿಟ್ಟಿದ್ದಾರೆ. ಇವರನ್ನು ಕಳೆದುಕೊಂಡು ಕುಟುಂಬಗಳು ಕಂಗಾಲಾಗಿವೆ. ಅವರಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದೂ ತಿಳಿಸಿದರು.

‘ಅತ್ಯುತ್ತಮ ಚಿಕಿತ್ಸೆಗೆ ಕ್ರಮ’

‘ಅಪಘಾತದಲ್ಲಿ ಪೊಲೀಸರು ಹಾಗೂ ಚಾಲಕ ಮೃತಪಟ್ಟಿರುವುದು ನೋವು ತಂದಿದೆ. ಮೃತರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲು ವ್ಯವಸ್ಥೆ ಮಾಡಲಾಗಿದೆ. ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ದೊರಕಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT