ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ನಲ್ಲಿ ಗದ್ದಲ, ಮುಂದುವರಿದ ಧರಣಿ

ಜ್ವಲಂತ ಸಮಸ್ಯೆಗಳ ಚರ್ಚೆಗೆ ಜೆಡಿಎಸ್‌ ಪಟ್ಟು * ಆರನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್‌ ಧರಣಿ
Last Updated 21 ಫೆಬ್ರುವರಿ 2022, 16:06 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಸೋಮವಾರವೂ ಕಾಂಗ್ರೆಸ್‌ ಸದಸ್ಯರುವಿಧಾನಪರಿಷತ್‌ನಲ್ಲಿ ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ನಿಧನರಾದ ನಟ ರಾಜೇಶ್ ಅವರಿಗೆ ಸಂತಾಪ ಸೂಚಿಸಲಾಯಿತು. ಬಳಿಕ, ಕಾಂಗ್ರೆಸ್‌ ಸದಸ್ಯರು ಧರಣಿ ಮುಂದುವರಿಸಿದರು.‌

ಧರಣಿಗೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ‘ಐದು ದಿನಗಳಿಂದ ಕಲಾಪ ನಡೆದಿಲ್ಲ. ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎನ್ನುವುದನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಅರಿತುಕೊಳ್ಳಬೇಕು’ ಎಂದರು.

ಕಾಂಗ್ರೆಸ್‌ನ ಆರ್.ಬಿ. ತಿಮ್ಮಾಪುರ, ‘ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕಾರ್ಯ ನಡೆಯುತ್ತಿದೆ. ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಸರ್ಕಾರಕ್ಕೆ ರಾಷ್ಟ್ರಧ್ವಜ ಮುಖ್ಯವೋ, ಮಂತ್ರಿ ಮುಖ್ಯವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದರು.

ಬಿಜೆಪಿಯ ಲೆಹರ್‌ ಸಿಂಗ್‌, ‘ಈಶ್ವರಪ್ಪ ಅವರು ಭಾವನಾತ್ಮಕ ವ್ಯಕ್ತಿ. ಅವರ ಪ್ರತಿಯೊಂದು ಹೇಳಿಕೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ. ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿದೆ’ ಎಂದರು.

ಧರಣಿ ನಡುವೆಯೇ ಪ್ರಶ್ನೋತ್ತರ ಮುಗಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಕಲಾಪವನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದರು. ಮಧ್ಯಾಹ್ನ ಮತ್ತೆ ಕಲಾಪ ಆರಂಭ ಆಗುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಧರಣಿ ಮುಂದುವರಿಸಿದರು.

ಆಗ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ‘ವಿರೋಧ ಪಕ್ಷದ ಸದಸ್ಯರು ಅಹೋರಾತ್ರಿ ಧರಣಿ ನಡೆಸುವ ಬದಲು, ಹಗಲು ರಾತ್ರಿ ಕಲಾಪ ನಡೆಸಿ ಎಂದು ಸವಾಲು ಹಾಕಿದರೆ ಅದಕ್ಕೆ ನಾವು ಸಿದ್ಧರಿದ್ದೇವೆ’ ಎಂದರು.

ಬಿಜೆಪಿಯ ಎಂ.ಕೆ. ಪ್ರಾಣೇಶ್, ‘ನಿಲುವಳಿಯನ್ನು ಸಭಾಪತಿ ತಿರಸ್ಕರಿಸಿದ ಬಳಿಕವೂ ಅದೇ ವಿಷಯ ಚರ್ಚೆ ಮಾಡಲು ಅವಕಾಶ ಇದೆಯೇ. ಇಲ್ಲಿ ವೈಯಕ್ತಿಕ ನಿಂದನೆ, ಮಾನಹಾನಿಯಾಗುವಂಥ ಟೀಕೆ ಬಂದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲು ಅವಕಾಶ ಇದೆಯೇ. ನಿಯಮ ಪಾಲಿಸದ ಸದಸ್ಯರನ್ನು ಸದನದಿಂದ ಹೊರಹಾಕಲು ಪೀಠಕ್ಕೆ ಅಧಿಕಾರ ಇದ್ದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಸಭಾಪತಿ, ‘ನಿಲುವಳಿ ಸೂಚನೆ ತಿರಸ್ಕರಿಸಿದ ಬಳಿಕ ಅದೇ ವಿಷಯ ಪ್ರಸ್ತಾಪಿಸಲು ಅವಕಾಶ ಇಲ್ಲ. ಅಲ್ಲದೆ, ನಿಲುವಳಿ ಸೂಚನೆಯಲ್ಲಿ ಈಶ್ವರಪ್ಪ ಅವರ ಹೆಸರು ಇರಲಿಲ್ಲ. ಆದರೂ ಚರ್ಚೆಯಲ್ಲಿ ಪ್ರಸ್ತಾಪವಾಗಿದೆ. ಸದಸ್ಯರನ್ನು ಹೊರಹಾಕಿ ಕಲಾಪ ನಡೆಸುವುದು ಸರಿಯಲ್ಲ ಎನ್ನುವುದು ನನ್ನ ನಿಲುವು’ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ‘ಈಶ್ವರಪ್ಪ ಅವರ ಹೇಳಿಕೆ ರಾಷ್ಟ್ರದ್ರೋಹ ಎಂಬುವುದು ಮನವರಿಕೆಯಾಗಿಲ್ಲ. ಹೀಗಾಗಿ, ಅವರ ರಾಜೀನಾಮೆ ಪಡೆಯುವುದಿಲ್ಲ ಎಂಬ ನಿಲುವು ತೆಗೆದುಕೊಂಡಿದ್ದೇವೆ. ನೀವು ಎಷ್ಟು ದಿನ ಪ್ರತಿಭಟನೆ ನಡೆಸಿದರೂ ಈಶ್ವರಪ್ಪ ಅವರನ್ನು ಕೈ ಬಿಡುವುದಿಲ್ಲ. ವಿರೋಧ ಪಕ್ಷದ ಸದಸ್ಯರು ಪೀಠಕ್ಕೆ ಅಗೌರವ ತೋರಿಸಿದ್ದಾರೆ’ ಎಂದು ದೂರಿದರು.

ಅದಕ್ಕೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಸಲಿಂ ಅಹ್ಮದ್, ಪ್ರಕಾಶ್ ರಾಥೋಡ್ ತಿರುಗೇಟು ನೀಡಲು ಮುಂದಾದಾಗ ಗದ್ದಲ ಉಂಟಾಯಿತು. ಬಿಜೆಪಿಯ ಆಯನೂರು ಮಂಜುನಾಥ್, ಭಾರತಿ ಶೆಟ್ಟಿ ಮಾತನಾಡಲು ಎದ್ದಾಗ ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ಬಳಿಕ, ಜೆಡಿಎಸ್‌ನ ಮರಿತಿಬ್ಬೇಗೌಡ ಮಾತನಾಡಲು ಮುಂದಾದಾಗ ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದರು.

ಈ ವೇಳೆ ಪೀಠದಿಂದ ಎದ್ದುನಿಂತ ಸಭಾಪತಿ, ‘ನನ್ನ ಸಹನೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ಕ್ರಮ ಜರುಗಿಸಲು ಅವಕಾಶ ನೀಡಬೇಡಿ’ ಎಂದರು. ಗದ್ದಲ ಮುಂದುವರಿದ ಕಾರಣ ಅವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT