ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌ ಗುಲಾಬಿಗಳು ಅರುಳುವಾಗ ಜಗಳವೇಕೆ?

ನಿವೃತ್ತ ಡಿಎಸ್‌ಪಿ– ಮಕ್ಕಳ ಮಧ್ಯದ ಸ್ಥಿರಾಸ್ತಿ ವ್ಯಾಜ್ಯ
Last Updated 2 ಡಿಸೆಂಬರ್ 2021, 16:22 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಸ್ಮಸ್ ಗುಲಾಬಿಗಳು ಅರಳುತ್ತಿರುವ ಈ ರಮಣೀಯ ಋತುಮಾನದಲ್ಲಿ ಬದುಕನ್ನು ಮಧುರವಾಗಿ ಆಸ್ವಾದಿಸುವುದರ ಬದಲಿಗೆ ಅಹಂಕಾರಗಳ ಗೋಡೆ ಕಟ್ಟಿಕೊಂಡು ಯಾಕೆ ಜಗಳದ ಜೀವನ ನಡೆಸುತ್ತಿದ್ದೀರಿ...? ಸ್ಥಿರಾಸ್ತಿ ಸಂಬಂಧ ವೃದ್ಧ ತಂದೆ-ತಾಯಿ ಮತ್ತು ಮಕ್ಕಳ ಮಧ್ಯದ ವ್ಯಾಜ್ಯಕ್ಕೆ ಹೈಕೋರ್ಟ್ ಬುದ್ಧಿವಾದ ಹೇಳಿದ ಪರಿಯಿದು!

ಬೆಂಗಳೂರು ಉತ್ತರ ವಿಭಾಗದ ವಿಭಾಗಾಧಿಕಾರಿ ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ42 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಕರಣದ ಸಂತ್ರಸ್ತರೂ ಆದ ನಿವೃತ್ತ ಪೊಲೀಸ್ ಅಧಿಕಾರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಕುಮಾರ್ ಎಸ್‌.ಪಾಟೀಲ, ‘ಅರ್ಜಿದಾರರು ನಿವೃತ್ತ ಡಿಎಸ್‌ಪಿ ಅವರ ಜೇಷ್ಠ ಪುತ್ರ. ತಂದೆಯ ಆಸ್ತಿಗಾಗಿ ಅವರ ಮೇಲೆ ದೈಹಿಕ ಹಲ್ಲೆ ನಡೆಸಿ ಅವರು ಪ್ರತ್ಯೇಕವಾಗಿ ವಾಸಿಸುವಂತೆ ಮಾಡಿ ಹಿಂಸೆ ನೀಡುತ್ತಿದ್ದಾರೆ’ ಎಂದು ಪ್ರಕರಣವನ್ನು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರಕರಣವನ್ನು ಗಮನಿಸಿದಾಗಮೊಮ್ಮಕ್ಕಳ ಮೇಲೆ ಅಜ್ಜ–ಅಜ್ಜಿಗೆ ಅಪಾರ ಕಕ್ಕುಲತೆ, ಮಮತೆ ಇದೆ, ಅಂತೆಯೇ ಮೊಮ್ಮಕ್ಕಳಿಗೂ ಅಜ್ಜ–ಅಜ್ಜಿ ಮೇಲೆ ಅಷ್ಟೇ ಪ್ರೀತಿ ಇರುವುದು ಕಂಡು ಬರುತ್ತಿದೆ. ಹೀಗಿರುವಾಗ ಅಪ್ಪ ಮಕ್ಕಳು ಆಸ್ತಿಗಾಗಿ ಜಗಳ ಕಾಯುತ್ತಾ ಕೋರ್ಟ್‌ ಕಚೇರಿ ಅಲೆಯುವುದು ಎಷ್ಟು ಸೂಕ್ತ' ಎಂದು ಪ್ರಶ್ನಿಸಿತಲ್ಲದೆ, 'ಸೌಹಾರ್ದಯುತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಿ’ ಎಂದು ಅರ್ಜಿದಾರರಿಗೆ ಸಲಹೆ ನೀಡಿದೆ.

ಪ್ರಕರಣವೇನು?: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಹುಟ್ಟಿ ಬೆಳೆದು ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಡಿಎಸ್‌ಪಿ ಹುದ್ದೆಯಿಂದ ನಿವೃತ್ತರಾಗಿರುವ ಅರ್ಜಿದಾರರ ತಂದೆಗೆ ಈಗ 72 ವರ್ಷ. ತಾಯಿಗೆ 62 ವರ್ಷ.

ಸಂತ್ರಸ್ತ ತಂದೆ 1987 ಮತ್ತು 1994ರಲ್ಲಿ ಎರಡು ಬಾರಿ ಮುಖ್ಯಮಂತ್ರಿಗಳ ಪೊಲೀಸ್ ಪದಕ ಪಡೆದು ಸೇವೆಯಲ್ಲಿ ಶಹಬ್ಬಾಸ್‌ಗಿರಿ ಪಡೆದಿದ್ದವರು. ಪತಿ, ಪತ್ನಿ ಇಬ್ಬರೂ ವಯೋಸಹಜ ದಂತದ ಕೊಲೆಸ್ಟ್ರಾಲ್‌, ಮಧುಮೇಹ, ಥೈರಾಯಿಡ್‌, ರಕ್ತದೊತ್ತಡ ಮತ್ತು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

‘ಇವರು ಪೊಲೀಸ್‌ ಸೇವೆಯಲ್ಲಿದ್ದಾಗ ಬೆಂಗಳೂರಿನ ವಿಜಯನಗರದ ಚಂದ್ರ ಲೇಔಟ್‌ನಲ್ಲಿ 66x43 ರ ಅಳತೆಯ ನಿವೇಶನವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ. ಇದು ಇವರ ಸ್ವಯಾರ್ಜಿತ ಸ್ಥಿರಾಸ್ತಿಯಾಗಿದ್ದು, ಈ ನಿವೇಶನದಲ್ಲಿ ಮೂರು ಮಹಡಿಯ ಮನೆ ಇದೆ. ಇದನ್ನು ಬಿಟ್ಟುಕೊಂಡುವಂತೆ ಪುತ್ರ ಸತಾಯಿಸುತ್ತಿದ್ದರೆ’ ಎಂಬುದು ಸಂತ್ರಸ್ತ ತಂದೆಯ ಅರ್ಜಿಯಲ್ಲಿನ ಸಾರಾಂಶ.

ಮಗನ ಕಾಟ ತಾಳಲಾರದೆ ತಂದೆಯು, ‘ಪೋಷಕರು–ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ–2007’ರ ಕಲಂ 5 ಮತ್ತು 23ರ ಅನುಸಾರ ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ತಮಗೆ ರಕ್ಷಣೆ ನೀಡುವಂತೆ ಕೋರಿದ್ದರು.

ಪ್ರಕರಣವನ್ನು ವಿಚಾರಣೆ ನಡೆಸಿದ್ದ ಅರೆನ್ಯಾಯಿಕ ನ್ಯಾಯಮಂಡಳಿಯ ಕೆಎಎಸ್‌ ಅಧಿಕಾರಿ ಕೆ.ರಂಗನಾಥ್ 2021ರ ಮಾರ್ಚ್‌ 31ರಂದು ಆದೇಶ ನೀಡಿ, ವೃದ್ಧಾಪ್ಯದಲ್ಲಿರುವ ಪೋಷಕರಿಗೆ ಆಸ್ತಿ ಬಿಟ್ಟುಕೊಡುವಂತೆ ಆದೇಶಿಸಿದ್ದರು. ಇದನ್ನು ಮಗ ಈಗ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT