ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಕ್ರಮ: ಆರ್‌.ಡಿ.ಪಾಟೀಲ, ಮೇಳಕುಂದಿ ಅಕ್ರಮದ ಸೂತ್ರಧಾರರು; ದೋಷಾರೋಪ ಪಟ್ಟಿ

Last Updated 6 ಜುಲೈ 2022, 18:56 IST
ಅಕ್ಷರ ಗಾತ್ರ

ಕಲಬುರಗಿ: ‘ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರಿಗೆ ಸೇರಿದ ನಗರದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಅಫಜಲಪುರದ ಆರ್‌.ಡಿ. ಪಾಟೀಲ, ನೀರಾವರಿ ಇಲಾಖೆಯ ಎಂಜಿನಿಯರ್ ಆಗಿದ್ದ ಮಂಜುನಾಥ ಮೇಳಕುಂದಿ ಮತ್ತು ಶಾಲೆಯ ಪ್ರಾಂಶುಪಾಲ ಕಾಶಿನಾಥ ಚಿಲ್ ಪ್ರಮುಖ ಆರೋಪಿಗಳು’ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ 1974 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಪೂರಕ ದಾಖಲೆಗಳೊಂದಿಗೆ ತಿಳಿಸಿದ್ದಾರೆ.

‘ಭೌತಿಕ ಮತ್ತು ಡಿಜಿಟಲ್‌ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಅಕ್ರಮವಾಗಿ ಪರೀಕ್ಷೆ ನಡೆಸುವುದನ್ನೇ ದಂದೆ ಆಗಿಸಿಕೊಂಡಿದ್ದ ಇಬ್ಬರೂ ಆರೋಪಿಗಳು ಇದಕ್ಕಾಗಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಮೇಲ್ವಿಚಾರಕರು ಹಾಗೂ ಪೊಲೀಸ್ ಇಲಾಖೆಯಲ್ಲಿನ ಡಿವೈಎಸ್ಪಿ, ಸಿಪಿಐ ಹಂತದ ಅಧಿಕಾರಿಗಳ ನೆರವು ಪಡೆದಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಇಲ್ಲಿನ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ 34 ಆರೋಪಿಗಳ ವಿರುದ್ಧಸಿಐಡಿ ಅಧಿಕಾರಿಗಳು ದೋಷಾರೋಪ ಹೊರಿಸಿದ್ದಾರೆ. ಅದರಲ್ಲಿ ಆರ್‌.ಡಿ.ಪಾಟೀಲ, ಮಂಜುನಾಥ ಮೇಳಕುಂದಿ ತನ್ನ ಸಹಚರರನ್ನು ಬಳಸಿಕೊಂಡು ಬ್ಲೂಟೂತ್ ಸಾಧನ ಬಳಸಿ ಉತ್ತರ ಹೇಳಿಸಿದ್ದು ಮತ್ತು ಒಎಂಆರ್‌ ಉತ್ತರ ಪತ್ರಿಕೆಯನ್ನು ತಿದ್ದುಪಡಿ ಮಾಡುವ ಮೂಲಕ ಅಕ್ರಮ ಎಸಗಿದ ಬಗ್ಗೆ ವಿವರಗಳಿವೆ.

‘ಅಕ್ರಮದ ಮಾಹಿತಿ ಇದ್ದ ಶಾಲೆಯ ಪ್ರಾಂಶುಪಾಲ ಕಾಶಿನಾಥ ಚಿಲ್ ಪರೀಕ್ಷೆಗೆ ಗೈರು ಆದ ಅಭ್ಯರ್ಥಿಗಳಿಗೆ ನೀಡಬೇಕಿದ್ದ ಪ್ರಶ್ನೆಪತ್ರಿಕೆಗಳನ್ನು ಹೊರಗೆ ತಂದು ಆರ್‌.ಡಿ. ಪಾಟೀಲ, ಮೇಳಕುಂದಿಗೆ ತಲುಪಿಸಿ ಅಕ್ರಮಕ್ಕೆ ಸಾಥ್ ನೀಡಿದ್ದಾರೆ’ ಎಂದು ಆರೋಪ ಹೊರಿಸಲಾಗಿದೆ.

ಮಂಜುನಾಥ ಮೇಳಕುಂದಿ
ಮಂಜುನಾಥ ಮೇಳಕುಂದಿ

‘ಡಿವೈಎಸ್ಪಿಯಾಗಿದ್ದ ಮಲ್ಲಿಕಾರ್ಜುನ ಸಾಲಿ, ಕೆಎಸ್‌ಆರ್‌‍ಪಿ ಸಹಾಯಕ ಕಮಾಂಡೆಂಟ್ ಆಗಿದ್ದ ವೈಜನಾಥ ಕಲ್ಯಾಣಿ ರೇವೂರ, ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರಿ ಹೇಗೆ ಅಕ್ರಮದಲ್ಲಿ ಶಾಮೀಲಾಗಿದ್ದರು’ ಎಂಬ ಬಗ್ಗೆಯೂ ದಾಖಲೆಗಳನ್ನು ಸಲ್ಲಿಸಲಾಗಿದೆ.

ಒಬ್ಬನಿಗಷ್ಟೇ ಜಾಮೀನು: ಬಂಧಿತ 34 ಆರೋಪಿಗಳು ಜಾಮೀನಿಗಾಗಿ ಇಲ್ಲಿನ ಮೂರನೇ ಜೆಎಂಎಫ್‌ ನ್ಯಾಯಾಲಯ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.

ಆದರೆ, ಪ್ರಕರಣ ಗಂಭೀರವಾಗಿರುವ ಕಾರಣ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ 33 ಜನರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಪ್ರಕರಣದ ಕಿಂಗ್‌ಪಿನ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತು ಸಹಚರರಿಗೆ ಆಶ್ರಯ ನೀಡಿದ ಕಾರಣಕ್ಕೆ ಬಂಧಿತನಾಗಿದ್ದ ಸೊಲ್ಲಾಪುರದ ಸುರೇಶ ಕಾಟೆಗಾಂವ್‌ಗೆ ಮಾತ್ರ ಇತ್ತೀಚೆಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT