ಗುರುವಾರ , ಮೇ 26, 2022
23 °C

ಪಿಎಸ್‌ಐ ನೇಮಕಾತಿ ಅಕ್ರಮ: ಡಿವೈಎಸ್ಪಿ ಶಾಂತಕುಮಾರ್ 12 ದಿನ ಕಸ್ಟಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ 12 ದಿನಗಳವರೆಗೆ ಸಿಐಡಿ ಅಧಿಕಾರಿಗಳ ಕಸ್ಟಡಿಗೆ ನೀಡಲಾಗಿದೆ.

2011 ರಿಂದ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಗುರುವಾರ ಬಂಧಿಸಿದ್ದರು. ಅವರನ್ನು ಶುಕ್ರವಾರ ಮಧ್ಯಾಹ್ನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

'ಅಕ್ರಮ ಪ್ರಕರಣದಲ್ಲಿ ಶಾಂತಕುಮಾರ್ ಭಾಗಿಯಾಗಿರುವುದಕ್ಕೆ ಕೆಲ ಪುರಾವೆಗಳು ಸಿಕ್ಕಿವೆ. ಅವುಗಳನ್ನು ಆಧರಿಸಿ ಮತ್ತಷ್ಟು ಮಂದಿಯನ್ನು ಬಂಧಿಸಬೇಕಿದೆ. ಹೀಗಾಗಿ, ಶಾಂತಕುಮಾರ್ ಅವರನ್ನು ವಿಚಾರಣೆಗಾಗಿ ಕಸ್ಟಡಿಗೆ ನೀಡಬೇಕು’ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯವನ್ನು ಕೋರಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಆನಂದ್ ಟಿ. ಚವ್ಹಾಣ್, ಆರೋಪಿ ಶಾಂತಕುಮಾರ್ ಅವರನ್ನು 12 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಿದರು.

ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಂಧಿಸಲಾಗಿದ್ದ ಕಾನ್‌ಸ್ಟೆಬಲ್ ಸೋಮನಾಥ್ ಹಿರೇಮಠ ಹಾಗೂ ಯಶವಂತ್ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಸಿಐಡಿ ಕಚೇರಿಯಲ್ಲಿ ವಿಚಾರಣೆ: ‘ಆಂತರಿಕ ಭದ್ರತಾ ವಿಭಾಗದಲ್ಲಿದ್ದ ಶಾಂತಕುಮಾರ್, ನಿಯೋಜನೆ ಮೇರೆಗೆ 2011 ರಿಂದ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಪಿಎಸ್ಐ ಅಕ್ರಮ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಮಾತೃ ವಿಭಾಗವಾದ ಆಂತರಿಕ ಭದ್ರತಾ ವಿಭಾಗಕ್ಕೆ ರಾಜ್ಯ ಸರ್ಕಾರ ವಾಪಸು ಕಳುಹಿಸಿತ್ತು. ಇದೀಗ ಪ್ರಕರಣದಲ್ಲಿ ಶಾಂತಕುಮಾರ್ ಅವರನ್ನು ಬಂಧಿಸಿ, ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಸಿಐಡಿ ಕಚೇರಿ ಇರುವ ಕಟ್ಟಡದಲ್ಲೇ ಪೊಲೀಸ್ ನೇಮಕಾತಿ ವಿಭಾಗವಿದೆ. ಇದೇ ಸ್ಥಳದಲ್ಲಿ ಅಕ್ರಮ ನಡೆದಿದ್ದು, ಇದೆಲ್ಲವೂ ಶಾಂತಕುಮಾರ್ ಅವರಿಗೆ ಗೊತ್ತಿದೆ. ಅಕ್ರಮ ಹೇಗಾಯಿತು? ಎಂಬುದನ್ನು ತಿಳಿಯಲು ವಿಚಾರಣೆ ಮುಂದುವರಿಸಲಾಗಿದೆ. ವಿಭಾಗ ಹಾಗೂ ಇತರೆ ಸ್ಥಳಗಳಿಗೂ ಆರೋಪಿಯನ್ನು ಕರೆದೊಯ್ದು ಮಾಹಿತಿ ಪಡೆಯಲಾಗುವುದು’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು