ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ ಶಿಕ್ಷಕರ ನೇಮಕಾತಿ ಅಕ್ರಮ: ₹10 ಲಕ್ಷಕ್ಕೆ ಶಿಕ್ಷಕ ಹುದ್ದೆ ಮಾರಾಟ

ಎಫ್‌ಡಿಎ ಕೆ.ಎಸ್. ಪ್ರಸಾದ್ ಸಿಐಡಿ ಕಸ್ಟಡಿಗೆ
Last Updated 15 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೌಢಶಾಲೆಗಳ ಗ್ರೇಡ್–2 ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ರಾಜ್ಯದ ಮೂರು ಜಿಲ್ಲೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದನ್ನು ದಾಖಲೆ ಸಮೇತ ಪತ್ತೆ ಮಾಡಿದ್ದಾರೆ.

ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 12 ಸಹ ಶಿಕ್ಷಕರನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಅಧಿಕಾರಿಗಳು, ಅವರೆಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 13ನೇ ಆರೋಪಿಯನ್ನಾಗಿ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗ ಸಹ ನಿರ್ದೇಶಕ ಕಚೇರಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಕೆ.ಎಸ್. ಪ್ರಸಾದ್ ಅವರನ್ನು ಬಂಧಿಸಲಾಗಿದ್ದು, ಇವರು ಸದ್ಯ ಸಿಐಡಿ ಕಸ್ಟಡಿಯಲ್ಲಿದ್ದಾರೆ.

‘ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇದ್ದ ಗ್ರೇಡ್–2 ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ನೇಮಕಾತಿಗಾಗಿ 2012–13 ಹಾಗೂ 2014–15ನೇ ಸಾಲಿನಲ್ಲಿ ಪ್ರಕ್ರಿಯೆ ನಡೆಸಲಾಗಿತ್ತು. ಜಿಲ್ಲಾವಾರು ಹುದ್ದೆಗಳಿಗೆ ತಕ್ಕಂತೆ ನೇಮಕಾತಿ ನಡೆದಿತ್ತು’ ಎಂದು ಸಿಐಡಿ ಮೂಲಗಳು ಹೇಳಿವೆ. ‘ತುಮಕೂರು, ವಿಜಯಪುರ ಹಾಗೂ ಕೋಲಾರ ಜಿಲ್ಲೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ದಾಖಲೆಗಳಿಂದ ಗೊತ್ತಾಗಿದೆ' ಎಂದಿವೆ.

‘ ಈ ಜಿಲ್ಲೆಯಲ್ಲಿ ಅಕ್ರಮವಾಗಿ ಹುದ್ದೆಗೆ ಆಯ್ಕೆಯಾಗಲು ಸಹ ಶಿಕ್ಷಕರು, ತಲಾ ₹ 5 ಲಕ್ಷದಿಂದ ₹ 10 ಲಕ್ಷ ನೀಡಿರುವುದು ಪತ್ತೆಯಾಗಿದೆ. ಈ ಹಣವನ್ನು ಹಂತ ಹಂತವಾಗಿ ಪಾವತಿಸಲಾಗಿದೆ. ಈ ಬಗ್ಗೆ ಬಂಧಿತ ಸಹ ಶಿಕ್ಷಕರು ಹೇಳಿಕೆ ನೀಡಿದ್ದು, ಹಣದ ವಹಿವಾಟಿನ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿವೆ.

ಮಂಡಳಿ ಜೊತೆಯೇ ಒಪ್ಪಂದ?: ‘ಬಹುತೇಕ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದಂತೆ ನೇಮಕಾತಿ ಮಂಡಳಿಯಲ್ಲಿ ಕೆಲಸ ಮಾಡುವವರನ್ನು ಸಂಪರ್ಕಿಸಿದ್ದರು. ಅಕ್ರಮವಾಗಿ ಆಯ್ಕೆಯಾಗಲು ಅವರ ಜೊತೆಯೇ ಹಣದ ಒಪ್ಪಂದ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಮೂರು ಜಿಲ್ಲೆಗಳ ಉಪನಿರ್ದೇಶಕರ ಕಚೇರಿಯಲ್ಲಿರುವ ದಾಖಲೆಗಳು ಹಾಗೂ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳ ಬಳಿ ಇರುವ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಎರಡೂ ದಾಖಲೆಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಬಂಧಿತ ಆರೋಪಿಗಳೆಲ್ಲರೂ ಅಕ್ರಮವಾಗಿ ಆಯ್ಕೆಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದು ತಿಳಿಸಿವೆ.

ಪಟ್ಟಿ ಸಿದ್ಧಪಡಿಸುತ್ತಿದ್ದ ಎಫ್‌ಡಿಎ: ‘ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದಡಿ ಶಿಕ್ಷಣ ಇಲಾಖೆಯ ಎಫ್‌ಡಿಎ ಕೆ.ಎಸ್. ಪ್ರಸಾದ್‌ನನ್ನು ಬಂಧಿಸಿ, ಕಸ್ಟಡಿಗೆ ಪಡೆಯಲಾಗಿದೆ. ಈತನ ಮೂಲಕವೇ ಅಕ್ರಮ ನಡೆದಿರುವ ಮಾಹಿತಿಯಿದ್ದು, ವಿಚಾರಣೆ ಮುಂದುವರಿದಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಸಹ ಶಿಕ್ಷಕರ ನೇಮಕಾತಿ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ್, ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದ. ಹಣ ನೀಡಿದ್ದ ಕೆಲವರ ಹೆಸರುಗಳನ್ನು ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಿದ್ದ. ಈ ಕೆಲಸಕ್ಕಾಗಿ ಲಕ್ಷ ಲಕ್ಷ ಪಡೆದಿದ್ದನೆಂದು ಗೊತ್ತಾಗಿದೆ. ಈತನ ಜೊತೆಯಲ್ಲಿ ಮತ್ತಷ್ಟು ಮಂದಿ ಅಕ್ರಮದಲ್ಲಿ ಭಾಗಿಯಾಗಿರುವ ಮಾಹಿತಿಯೂ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿವೆ.

‘ಉಪನಿರ್ದೇಶಕರು, ಮಂಡಳಿ ಸದಸ್ಯರ ವಿಚಾರಣೆ’: ‘ಸದ್ಯ ಮೂರು ಜಿಲ್ಲೆಗಳ ನೇಮಕಾತಿ ಅಕ್ರಮ ಬಗ್ಗೆ ತನಿಖೆ ನಡೆಯುತ್ತಿದೆ. ಉಳಿದ ಜಿಲ್ಲೆಗಳ ನೇಮಕಾತಿ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಉಪನಿರ್ದೇಶಕರು, ನೇಮಕಾತಿ ಮಂಡಳಿ ಸದಸ್ಯರು ಹಾಗೂ ಇತರರ ವಿಚಾರಣೆಯೂ ಮುಂದುವರಿದಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಉಪನಿರ್ದೇಶಕರು, ಮಂಡಳಿ ಸದಸ್ಯರ ವಿಚಾರಣೆ’

‘ಸದ್ಯ ಮೂರು ಜಿಲ್ಲೆಗಳ ನೇಮಕಾತಿ ಅಕ್ರಮ ಬಗ್ಗೆ ತನಿಖೆ ನಡೆಯುತ್ತಿದೆ. ಉಳಿದ ಜಿಲ್ಲೆಗಳ ನೇಮಕಾತಿ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಉಪನಿರ್ದೇಶಕರು, ನೇಮಕಾತಿ ಮಂಡಳಿ ಸದಸ್ಯರು ಹಾಗೂ ಇತರರ ವಿಚಾರಣೆಯೂ ಮುಂದುವರಿದಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT