ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ನೋಂದಣಿ ಅಕ್ರಮ: ಸಿಐಡಿ ತನಿಖೆಗೆ

Last Updated 25 ಮಾರ್ಚ್ 2022, 19:53 IST
ಅಕ್ಷರ ಗಾತ್ರ

ಬೆಂಗಳೂರು: ದುಬಾರಿ ಬೆಲೆಯ ಐಷಾರಾಮಿ ಕಾರುಗಳ ನೋಂದಣಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಿಐಡಿ ತನಿಖೆಗೆ ಆದೇಶಿಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ ಸದಸ್ಯ ಸಿ.ಎಸ್‌. ಮಂಜೇಗೌಡ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ಅವರು, ‘ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 124 ದುಬಾರಿ ದರದ ಕಾರುಗಳ ನೋಂದಣಿಯಲ್ಲಿ ತೆರಿಗೆ ವಂಚಿಸಿರುವುದು ಇಲಾಖಾ ಮಟ್ಟದ ತನಿಖೆಯಲ್ಲಿ ಪತ್ತೆಯಾಗಿದೆ. ಕೆಲವು ವಾಹನಗಳ ನೋಂದಣಿಗೆ ಸಂಬಂಧಿಸಿದ ದಾಖಲೆಗಳೇ ಕಚೇರಿಯಿಂದ ನಾಪತ್ತೆಯಾಗಿವೆ. ಈ ಕಾರಣದಿಂದ ತನಿಖೆಗೆ ಅಡಚಣೆ ಉಂಟಾಗಿದೆ’ ಎಂದರು.‌

ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಐಷಾರಾಮಿ ವಾಹನಗಳ ನೋಂದಣಿಯಲ್ಲಿ ತೆರಿಗೆ ವಂಚನೆ ಆಗುತ್ತಿರುವ ದೂರುಗಳು ಬಂದಿದ್ದವು. 2015ರಿಂದ 2021ರವರೆಗಿನ ನೋಂದಣಿ ಕುರಿತು ತನಿಖೆ ನಡೆಸಲಾಗಿದೆ. ಈ ಅವಧಿಯಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ 13 ವಾಹನಗಳನ್ನು ವಶಪಡಿಸಿಕೊಂಡು, ₹ 1.64 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.

ತನಿಖೆಗೆ ಆಗ್ರಹ: ‘ಕಡತಗಳೇ ನಾಪತ್ತೆಯಾಗಿವೆ ಎಂದರೆ ಯಾರು ಹೊಣೆ? ಇಲಾಖೆಯ ಅಧಿಕಾರಿಗಳಿಂದಲೇ ತನಿಖೆ ನಡೆಸಿದರೆ ಸತ್ಯ ಹೊರಬರಲು ಸಾಧ್ಯವೆ? ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಮಂಜೇಗೌಡ ಆಗ್ರಹಿಸಿದರು.

ಎಚ್‌ಎಸ್‌ಆರ್‌ಪಿ ತ್ವರಿತ ವಿತರಣೆಗೆ ಕ್ರಮ: ಬಿಜೆಪಿಯ ಎನ್‌. ರವಿಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ‘ರಾಜ್ಯದಲ್ಲಿ ಮೂರು ವರ್ಷಗಳ ಅವಧಿಯಲ್ಲಿ 26.65 ಲಕ್ಷ ಅತಿ ಭದ್ರತಾ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ವಿತರಿಸಲಾಗಿದೆ. 61,509 ಎಚ್‌ಎಸ್‌ಆರ್‌ಪಿ ನೋಂದಣಿ ಫಲಕಗಳ ವಿತರಣೆ ಬಾಕಿ ಇದೆ’ ಎಂದು ತಿಳಿಸಿದರು.

ಎಚ್‌ಎಸ್‌ಆರ್‌ಪಿ ಅಳವಡಿಕೆಯಲ್ಲಿ ಸಾರಿಗೆ ಇಲಾಖೆಗೆ ಯಾವುದೇ ಪಾತ್ರವಿಲ್ಲ. ವಾಹನ ತಯಾರಕರು ಮತ್ತು ವಿತರಕರ ಮೂಲಕವೇ ನೋಂದಣಿ ಫಲಕದ ಅಳವಡಿಕೆಯೂ ನಡೆಯುತ್ತಿದೆ. ಕೆಲವರಿಗೆ ವಿಳಂಬವಾಗಿ ನೋಂದಣಿ ಫಲಕ ದೊರಕುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸಭೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

‘ಕ್ರೀಡಾ ತರಬೇತುದಾರರ ಕಾಯಂ ಅಸಾಧ್ಯ’
ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ತರಬೇತುದಾರರ ಸೇವೆಯನ್ನು ಕಾಯಂಗೊಳಿಸಲು ಸಾಧ್ಯವಿಲ್ಲ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಕೆ.ಸಿ. ನಾರಾಯಣ ಗೌಡ ಹೇಳಿದರು.

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಮತ್ತು ಬಿಜೆಪಿಯ ಎಸ್‌.ವಿ. ಸಂಕನೂರ ಪ್ರಶ್ನೆಗೆ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಉತ್ತರಿಸಿದ ಅವರು, ‘ಗುತ್ತಿಗೆ ನೌಕರರ ಸೇವೆ ಕಾಯಮಾತಿ ಕುರಿತು ಸುಪ್ರೀಂಕೋರ್ಟ್‌ ತೀರ್ಪು ಪಾಲಿಸುವುದು ಕಡ್ಡಾಯ. ಕ್ರೀಡಾ ತರಬೇತುದಾರರ ಸೇವೆಯನ್ನು ಕಾಯಂಗೊಳಿಸುವುದು ತೀರ್ಪಿನ ಉಲ್ಲಂಘನೆಯಾಗುತ್ತದೆ’ ಎಂದರು.

ಇಲಾಖೆಯಲ್ಲಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಲಾಗುತ್ತಿದೆ. ಜಿಲ್ಲೆ ಮತ್ತು ತಾಲ್ಲೂಕು ಹಂತದಲ್ಲಿ 211 ಕೋಚ್‌ ಕಂ ವಾರ್ಡನ್‌ಗಳ ಕಾಯಂ ಹುದ್ದೆಗಳನ್ನು ಸೃಜಿಸಲಾಗುವುದು. ಶೀಘ್ರದಲ್ಲೇ ಈ ಕುರಿತು ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ವಿಜಯನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ 29 ಜಿಲ್ಲೆಗಳಲ್ಲಿ ಜಿಲ್ಲಾ ಕ್ರೀಡಾಂಗಣಗಳಿವೆ. 120 ತಾಲೂಕುಗಳಲ್ಲೂ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಆರು ತಾಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಾಣ ಪ್ರಗತಿಯಲ್ಲಿದೆ ಎಂದರು.

ಕ್ರೀಡಾ ಪ್ರಾಧಿಕಾರದಲ್ಲಿ ಕಾಯಂ ತರಬೇತುದಾರರು ಇಲ್ಲ. ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ 48 ಮತ್ತು ಮಾಸಿಕ ಸಂಚಿತ ವೇತನದ ಆಧಾರದಲ್ಲಿ 48 ತರಬೇತುದಾರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT