ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ₹100 ಕೋಟಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶ್ರೀರಾಮ ಸೇವಾ ಮಂಡಳಿಯ ಸಂಗೀತೋತ್ಸವಕ್ಕೆ ಮುಖ್ಯಮಂತ್ರಿ ಚಾಲನೆ
Last Updated 4 ಏಪ್ರಿಲ್ 2022, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹನುಮನ ಜನ್ಮಸ್ಥಳವಾದ ಹಂಪಿ ಬಳಿಯ ಅಂಜನಾದ್ರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ₹100 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ. ಇದೇ ವರ್ಷ ಯೋಜನೆ ಸಿದ್ಧಪಡಿಸಿ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶ್ರೀರಾಮ ಸೇವಾ ಮಂಡಳಿ ಆಯೋಜಿಸಿರುವ ಸಂಗೀತೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಅಂಜನಾದ್ರಿ ಬೆಟ್ಟವನ್ನುವಿಶಿಷ್ಟ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗು
ವುದು’ ಎಂದರು.

‘ಶ್ರೀರಾಮ ಸೇವಾ ಮಂಡಳಿ ಸ್ಥಾಪಿಸಲು ಉದ್ದೇಶಿಸಿರುವ ಕಲಾ ಸಾಕೇತ್ ಯೋಜನೆಗೆ ಸರ್ಕಾರ ನೆರವು ಒದಗಿಸಲಿದೆ’ ಎಂದು ಭರವಸೆ ನೀಡಿದರು.

ಸಂಗೀತ ಅವಿಭಾಜ್ಯ ಅಂಗ: ‘ಪ್ರತಿ ಶಬ್ದವೂ ತನ್ನದೇ ರಾಗ- ತಾಳವನ್ನು ಹೊಂದಿರುತ್ತದೆ. ಸಂಗೀತ ಮನುಷ್ಯನ ಉತ್ಸಾಹ, ಆನಂದ, ಸಮಾಧಾನ, ಭಾವನೆಗಳನ್ನು ಅಭಿವ್ಯಕ್ತಪಡಿಸುವ ಮಾಧ್ಯಮವೂ ಹೌದು. ದಣಿದಾಗ ಸಂಗೀತ ಕೇಳಿದರೆ ಆಹ್ಲಾದ ಉಂಟಾಗುತ್ತದೆ’ ಎಂದರು.

‘ಸಂಗೀತದಿಂದ ಭಕ್ತಿಯ ಅಭಿವ್ಯಕ್ತಿಯಾಗುತ್ತದೆ. ಕೆಲವು ಭಕ್ತಿಗೀತೆಗಳು ಅತ್ಯಂತ ಪ್ರಭಾವಶಾಲಿಯಾಗಿರುತ್ತವೆ. ನಾನು ಶ್ರೀರಾಮ ಹಾಗೂ ಹನುಮನ ಭಕ್ತ. ಅದರೊಂದಿಗೆ ಸಂಗೀತದ ಭಕ್ತನೂ ಹೌದು’ ಎಂದರು.

‘ಕನ್ನಡ ನಾಡಿನ ಸಂಸ್ಕೃತಿ ಶ್ರೀಮಂತವಾದದ್ದು. ಸಂಗೀತದ ಶ್ರೀಮಂತಿಕೆಯೂ ಕನ್ನಡ ನಾಡಿನಲ್ಲಿದೆ. ವಚನ, ದಾಸರ ಪದಗಳು ಸಂಗೀತದ ಮೂಲಕಮನಸ್ಸಿಗೆ ನೇರವಾಗಿ ಮುಟ್ಟುತ್ತವೆ. ಕರ್ನಾಟಕ ಸಂಗೀತ ಭಕ್ತಿ ಪ್ರಧಾನವಾಗಿದೆ. ಭಕ್ತಿ ಎಂದರೆ ಉತ್ಕೃಷ್ಟವಾದ, ಪ್ರತಿಫಲಾಪೇಕ್ಷೆ ಇಲ್ಲದ ಪ್ರೀತಿ. ಇದು ಇದ್ದಲ್ಲಿ ಸಂಗೀತ ಇದ್ದೇ ಇರುತ್ತದೆ. ಶುದ್ಧವಾದುವೆಲ್ಲವೂ ಸಂಗೀತಮಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT