ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಕರ್ನಾಟಕ ಶೃಂಗ | ದೇಶದ ಅಭಿವೃದ್ಧಿಗೆ ಕರ್ನಾಟಕವೇ ಅಡಿಪಾಯ: ಬಸವರಾಜ ಬೊಮ್ಮಾಯಿ

Last Updated 10 ಮಾರ್ಚ್ 2023, 19:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದೇಶದ ಅಭಿವೃದ್ಧಿಗೆ ಕರ್ನಾಟಕವೇ ಅಡಿಪಾಯವಾಗಿದೆ. ಇಲ್ಲಿರುವ ಕೈಗಾರಿಕಾ ನೀತಿಗಳು, ನೈಸರ್ಗಿಕ ಸಂಪನ್ಮೂಲ, ಮಾನವ ಸಂಪನ್ಮೂಲ ಹಾಗೂ ಶ್ರಮಜೀವಿಗಳು ಇದಕ್ಕೆ ಕಾರಣವಾಗಿದ್ದಾರೆ. ಅಭಿವೃದ್ಧಿಯ ಗತಿಯನ್ನು ಬದಲಿಸಿ ಮತ್ತಷ್ಟು ಪ್ರಗತಿ ಸಾಧಿಸುವ ಸಾಮರ್ಥ್ಯ ರಾಜ್ಯಕ್ಕಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದರು.

ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಉತ್ತರ ಕರ್ನಾಟಕ ಅಭಿವೃದ್ಧಿಗೆ ಆವಿಷ್ಕಾರ, ಪ್ರಗತಿ ಹಾಗೂ ಪರಿವರ್ತನೆಯ ಆಶಯದ ‘ನವಕರ್ನಾಟಕ ಶೃಂಗ’ವನ್ನು ಉದ್ಘಾಟಿಸಿ ಅವರು ಆಶಯ ನುಡಿಗಳನ್ನಾಡಿದರು. ರಾಜ್ಯ ಸರ್ಕಾರದ ಸಹಯೋಗದಲ್ಲಿ ‘ಪಿವಿ ಮತ್ತು ಡಿಎಚ್‌ ಬ್ರ್ಯಾಂಡ್‌ ಸ್ಪಾಟ್’ ಶೃಂಗವನ್ನು ಪ್ರಸ್ತುತಪಡಿಸಿದೆ.

‘ಅಭಿವೃದ್ಧಿಗೆ ದೂರದೃಷ್ಟಿ ಮುಖ್ಯ. ಪ್ರಧಾನಿ ನರೇಂದ್ರ ಮೋದಿ ಅವರು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯ ಗುರಿಯನ್ನು ಹೊಂದಿದ್ದಾರೆ. ಕರ್ನಾಟಕ ರಾಜ್ಯವೊಂದೇ 1 ಲಕ್ಷ ಕೋಟಿ ಡಾಲರ್‌ ಕೊಡುಗೆ ನೀಡುವಷ್ಟು ಸಮರ್ಥವಿದೆ. 2026ರೊಳಗೆ ಗುರಿ ಸಾಧಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಿ, ಯೋಜನೆಗಳಿಗೆ ಚಾಲನೆ ನೀಡಲಾಗಿದೆ’ ಎಂದರು.

‘ನವ ಕರ್ನಾಟಕ ನಿರ್ಮಾಣಕ್ಕೆ ಬೇಕಾದ ನೈಸರ್ಗಿಕ ಸಂಪನ್ಮೂಲ, ಮಾನವ ಸಂಪನ್ಮೂಲ ಸೇರಿದಂತೆ ಎಲ್ಲವೂ ನಮ್ಮಲ್ಲಿದೆ. ಅದಕ್ಕೆ ಒಂದು ರೂಪ ಕೊಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ’ ಎಂದು ತಮ್ಮ ನವ ಕರ್ನಾಟಕದ ಪರಿಕಲ್ಪನೆಯನ್ನು ಬಿಚ್ಚಿಟ್ಟರು.

‘ಅವಕಾಶಗಳನ್ನು ನಾವೇ ಬಾಚಿಕೊಳ್ಳಬೇಕು. ಇಲ್ಲವೇ ಸೃಷ್ಟಿಸಬೇಕು. ಕಳೆದ ಏಳು ತ್ರೈಮಾಸಿಕಗಳಿಂದ ರಾಜ್ಯವು ಜಿಎಸ್‌ಟಿ ಸಂಗ್ರಹದಲ್ಲಿ ಮುಂದಿದೆ. ದೇಶದಲ್ಲೇ ಅತಿ ಹೆಚ್ಚು ಎಫ್‌ಡಿಐ (ವಿದೇಶಿ ನೇರ ಬಂಡವಾಳ) ರಾಜ್ಯಕ್ಕೆ ಹರಿದು ಬಂದಿದೆ. ದಾವೋಸ್ ಸಭೆಯಲ್ಲಿ ₹2.5 ಲಕ್ಷ ಕೋಟಿ ಹೂಡಿಕೆಗೆ ಸಹಿ ಮಾಡಿದ್ದೇನೆ. ದೇಶದಲ್ಲೇ ಉದ್ಯೋಗ ನೀತಿ ಮೊದಲ ಸಲ ಜಾರಿಗೆ ತರಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜನವರಿ ಅಂತ್ಯಕ್ಕೆ ಶೇ 91ರಷ್ಟು ಆದಾಯ ಸಂಗ್ರಹವಾಗಿದೆ’ ಎಂದು ಹೇಳಿದರು.

‘‌ಹೊಸ ನೀತಿಗಳು, ಹೊಸಉದ್ಯೋಗಾವಕಾಶಗಳು, ಹೊಸ ಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿರಲಿದೆ. ವಿಜಯಪುರದಲ್ಲಿ ದ್ರಾಕ್ಷಿ ರಫ್ತು ಕೇಂದ್ರ ಉದ್ಘಾಟನೆಯಾಗಲಿದೆ. ಹಾಸನ, ವಿಜಯಪುರದಲ್ಲಿ ವಿಮಾನ ನಿಲ್ದಾಣ, ರಾಜ್ಯದ 12 ಬಂದರುಗಳ ಅಭಿವೃದ್ಧಿ, ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ, ರಾಜ್ಯದ 6 ಸಾವಿರ ಉದ್ದದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನವ ಕರ್ನಾಟಕಕ್ಕೆ ಪೂರಕವಾಗಿವೆ. ಮುಂದಿನ ದಶಕದಲ್ಲಿ ಕರ್ನಾಟಕವು ಅಭಿವೃದ್ಧಿಯಲ್ಲಿ ನಂಬರ್ ಒನ್ ರಾಜ್ಯವಾಗುವುದಷ್ಟೇ ಅಲ್ಲ, ಏಷ್ಯಾದ ಗಮನ ಸೆಳೆಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಾಜಧಾನಿ ಬೆಂಗಳೂರನ್ನು ಮೀರಿಸುವಂತೆ ಹುಬ್ಬಳ್ಳಿ ಬೆಳೆಯಬೇಕು. ಇಲ್ಲಿಯವರು ಕಿರಾಣಿ, ಅರಿವೆ ಬಿಟ್ಟು ಬೇರೆ ಉದ್ಯಮಗಳತ್ತ ಗಮನ ಹರಿಸಬೇಕು. ಆಗ ತಾನಾಗೇ ಅವಕಾಶಗಳು ತೆರೆದುಕೊಳ್ಳುತ್ತವೆ. ರಾಜ್ಯದ ಪಶ್ಚಿಮ ಘಟ್ಟಗಳು ನಮ್ಮ ಪಾಲಿಗೆ ವರ. ಅವುಗಳಿಲ್ಲದಿದ್ದರೆ, ಇಡೀ ದಕ್ಷಿಣ ಭಾರತ ಮರುಭೂಮಿಯಾಗಿರುತ್ತಿತ್ತು. ಅವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಕರೆ ನೀಡಿದರು.

*
ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್ ರಾಜ್ಯದ ಚಿಂತನಶೀಲ ಪತ್ರಿಕೆಗಳು. ಬದಲಾದ ಸ್ಥಿತಿ ಮತ್ತು ಅಭಿವೃದ್ಧಿಯನ್ನು ಓದುಗರಿಗೆ ಸಶಕ್ತವಾಗಿ ತಲುಪಿಸುತ್ತಿವೆ. ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿವೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT