ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಅದ್ದೂರಿ ಮೈಸೂರು ದಸರಾ: ಸಿಎಂ ನೇತೃತ್ವದ ಉನ್ನತಮಟ್ಟದ ಸಭೆಯಲ್ಲಿ ನಿರ್ಧಾರ

Last Updated 19 ಜುಲೈ 2022, 16:22 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿರುವುದರಿಂದ, ಹಿಂದಿನ ವರ್ಷಗಳಂತೆ ಈ ವರ್ಷ ನಾಡಹಬ್ಬ ಮೈಸೂರು ದಸರಾ ಉತ್ಸವನ್ನು ಅದ್ದೂರಿಯಾಗಿ ಆಚರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ.

ದಸರಾ ಉತ್ಸವಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ದೆಹಲಿ, ಮುಂಬೈ, ಚೆನ್ನೈ ಮತ್ತಿತರ ಮಹಾನಗರಗಳು ಹಾಗೂ ವಿದೇಶಗಳಲ್ಲಿ ಪ್ರಚಾರ ಅಭಿಯಾನ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಮೈಸೂರು ದಸರಾ ಜತೆಯಲ್ಲೇ ಶ್ರೀರಂಗಪಟ್ಟಣ ಮತ್ತು ಚಾಮರಾಜನಗರಗಳಲ್ಲೂ ದಸರಾ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಸರಳ ದಸರಾ ಆಚರಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಿಸಬೇಕೆಂಬುದು ರಾಜ್ಯದ ಜನರ ಬೇಡಿಕೆಯಾಗಿದೆ. ಅದಕ್ಕೆ ಮನ್ನಣೆ ನೀಡಿ ನಿರ್ಧಾರ ಕೈಗೊಂಡಿದ್ದೇವೆ’ ಎಂದರು.

ದಸರಾ ಸಿದ್ಧತೆಯ ಕಾಮಗಾರಿಗಳಿಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ₹ 10 ಕೋಟಿ ವೆಚ್ಚ ಮಾಡಲಾಗುವುದು. ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಡಿಯಲ್ಲಿ ಹೆಚ್ಚಿನ ಮೊತ್ತ ಸಂಗ್ರಹಿಸಿ, ಬಳಕೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಕೆಲಸ ಆರಂಭಿಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದಸರಾ ಉತ್ಸವ ಕುರಿತು ವ್ಯಾಪಕ ಪ್ರಚಾರ ನೀಡುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ದಸರಾ ಆರಂಭಕ್ಕೂ 15 ದಿನಗಳ ಮೊದಲು ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಗಜಪಯಣ ಸೇರಿದಂತೆ ಎಲ್ಲ ಸಾಂಪ್ರದಾಯಿಕ ಆಚರಣೆಗಳೂ ಈ ಬಾರಿ ನಡೆಯಲಿವೆ ಎಂದರು.‌

ಈ ಬಾರಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ನೀಡಲಾಗುವುದು. ಪ್ರತಿದಿನ ಒಬ್ಬರು ರಾಷ್ಟ್ರೀಯ ಮಟ್ಟದ ಕಲಾವಿದರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ವಾರದೊಳಗೆ ಆದೇಶ: ಮೈಸೂರು ಮತ್ತು ಹಂಪಿ ಪ್ರವಾಸೋದ್ಯಮ ಸರ್ಕೀಟ್‌ ರಚನೆ ಕುರಿತು ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಮೈಸೂರು ಪ್ರವಾಸೋದ್ಯಮ ಸರ್ಕೀಟ್‌ ಆರಂಭಕ್ಕೆ ವಾರದೊಳಗೆ ಆದೇಶ ಹೊರಡಿಸಲಾಗುವುದು. ಪ್ರವಾಸಿಗರು ಒಂದೇ ಟಿಕೆಟ್‌ ಪಡೆದು ಮೈಸೂರು, ಬೇಲೂರು, ಹಳೆಬೀಡು ಮತ್ತಿತರ ಪ್ರವಾಸಿ ತಾಣಗಳಿಗೆ ಭೇಟಿನೀಡಲು ಅನುಕೂಲವಾಗಲಿದೆ ಎಂದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ. ರಾಮದಾಸ್‌, ತನ್ವೀರ್‌ ಸೇಠ್, ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಸಭೆಯಲ್ಲಿದ್ದರು.

2021ರಲ್ಲೇ ಉಳಿದ ಸರ್ಕಾರ: ಟೀಕೆ

ಮೈಸೂರು ದಸರಾ ಸಿದ್ಧತೆ ಕುರಿತು ಮಂಗಳವಾರ ನಡೆದ ಸಭೆಯ ಕಾರ್ಯಸೂಚಿಯಲ್ಲಿ ‘ದಿನಾಂಕ: 19–07–2021’ ಎಂದು ಮುದ್ರಿಸಲಾಗಿತ್ತು. ವರ್ಷದ ಹಿಂದಿನ ದಿನಾಂಕ ಮುದ್ರಿಸಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಹಲವರು, ಸರ್ಕಾರದ ಕಾರ್ಯವೈಖರಿ ಕುರಿತು ಟೀಕಿಸಿದ್ದಾರೆ.

‘ಕರ್ನಾಟಕದ ಬಿಜೆಪಿ ಸರ್ಕಾರ 2021ರಲ್ಲೇ ಉಳಿದುಬಿಟ್ಟಿದೆ. ಟೇಕ್‌ ಆಫ್‌ ಆಗಿಯೇ ಇಲ್ಲ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT