ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಹೆಚ್ಚಳ: ಅಪಸ್ವರಕ್ಕೆ ಹೆದರುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಾನ್ಶಿರಾಮ್ ನಗರದಲ್ಲಿ ಅಂಬೇಡ್ಕರ್ ಭವನ, ಲೇಕ್ ಪಾರ್ಕ್ ಉದ್ಘಾಟನೆ
Last Updated 6 ನವೆಂಬರ್ 2022, 14:41 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ವಿಷಯದಲ್ಲಿ ಕೆಲವರು ಅಪಸ್ವರ ಎತ್ತುತ್ತಿದ್ದು, ಅದಕ್ಕೆ ಹೆದರುವುದಿಲ್ಲ. ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರೂ ದಲಿತರ ಪರ ಸಮರ್ಥ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ಲಕ್ಷೀಪುರ ಕಾನ್ಶಿರಾಮ್ ನಗರದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನ, ಬಿಬಿಎಂಪಿಯಿಂದ ಅಭಿವೃದ್ಧಿಪಡಿಸುತ್ತಿರುವ ಭಗವಾನ್ ಬುದ್ಧ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಲೇಕ್‌ ಪಾರ್ಕ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮೀಸಲಾತಿ ಹೆಚ್ಚಿಸುವ ಕ್ರಾಂತಿಕಾರಕ ನಿರ್ಣಯ ಕೈಗೊಂಡಿರುವುದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಆದ್ದರಿಂದಲೇ ಅಪಸ್ವರ ಎತ್ತುತ್ತಿದ್ದಾರೆ. ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಸಂವಿಧಾನ ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ. ಮೀಸಲಾತಿ ವಿಷಯದಲ್ಲಿ ಯಾವುದೇ ಸಂದರ್ಭದಲ್ಲೂ ದಲಿತರ ಪರವಾಗಿಯೇ ಇರುತ್ತೇನೆ. ಅಗತ್ಯ ಬಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧ’ ಎಂದು ಹೇಳಿದರು.

‘ಕೇವಲ ಭಾಷಣ ಮಾಡುವುದರಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಸಾಮಾಜಿಕ ನ್ಯಾಯದ ಪರ ಭಾಷಣ ಮಾಡಿದವರಿಗೆ ನ್ಯಾಯ ಸಿಕ್ಕಿದೆಯೇ ಹೊರತು ಶೋಷಿತರಿಗೆ ನ್ಯಾಯ ಸಿಕ್ಕಿಲ್ಲ. 60 ವರ್ಷ ರಾಜಕಾರಣ ಮಾಡಿದವರು ಕೇವಲ ಭಾಷಣದಲ್ಲೇ ಕಾಲ ಕಳೆದಿದ್ದಾರೆ’ ಎಂದು ಟೀಕಿಸಿದರು.

‘ಕಾನ್ಶಿರಾಮ್ ಅವರು ನನ್ನ ತಂದೆಯ ಆಪ್ತರು. ಅವರಿಂದ ನಾನು ಸಾಕಷ್ಟು ಸ್ಪೂರ್ತಿ ಪಡೆದಿದ್ದೇನೆ. ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ಬಡಾವಣೆ ಅಭಿವೃದ್ಧಿ ಸರ್ಕಾರ ಬದ್ಧವಾಗಿದೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೂ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಶೋಷಿತರ ಪರವಾದ ಕಾಳಜಿ ಇರುವ ಮುಖ್ಯಮಂತ್ರಿಯನ್ನು ನಾವು ಪಡೆದಿದ್ದೇವೆ. ರಾಜ್ಯದ 40 ಸಾವಿರ ಪೌರ ಕಾರ್ಮಿಕರನ್ನೂ ಕಾಯಂಗೊಳಿಸಲು ಅವರು ಆಲೋಚನೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.

ಶಾಸಕ ಆರ್.ಮಂಜುನಾಥ್, ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಮಾತನಾಡಿದರು. ಕಾನ್ಶಿರಾಮ್‌ನಗರ ಮತ್ತು ಲಕ್ಷ್ಮೀಪುರದ 50 ಅಡ್ಡರೆಸ್ತೆ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ, ಕಾವೇರಿ ನೀರಿನ ಸೌಕರ್ಯ, ಸರ್ಕಾರಿ ಆಸ್ಪತ್ರೆ, ಪದವಿ ಕಾಲೇಜು, ಬಸ್ ನಿಲ್ದಾಣ, ವಲಸೆ ಕಾರ್ಮಿಕರಿಗೆ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಾಣ ಸೇರಿ ಬಡಾವಣೆ ಅಭಿವೃದ್ಧಿಗೆ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಗೆ ಮುಖಂಡರು ಮನವಿ ಸಲ್ಲಿಸಿದರು.

ಪೌರ ಕಾರ್ಮಿಕರ ಕಾಯಂ
11,136 ಪೌರಕಾರ್ಮಿಕರ ನೌಕರಿ ಕಾಯಂಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉಳಿದ ಪೌರ ಕಾರ್ಮಿರಕನ್ನು ಹಂತ– ಹಂತವಾಗಿ ಕಾಯಂ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು ಮಾತ್ರವಲ್ಲ ಬೇರೆ ನಗರಗಳ ಪೌರ ಕಾರ್ಮಿಕರನ್ನೂ ಕಾಯಂ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT