ಅನುಷ್ಠಾನಗೊಳಿಸಲಾಗದ ಭರವಸೆ ನೀಡುತ್ತಿರುವ ಕಾಂಗ್ರೆಸ್: ಸಿಎಂ ಬೊಮ್ಮಾಯಿ ಟೀಕೆ

ಮೈಸೂರು: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭೀತಿಗೆ ಒಳಗಾಗಿರುವ ಕಾಂಗ್ರೆಸ್ ನಾಯಕರು, ಯಾವುದನ್ನು ಅನುಷ್ಠಾನಕ್ಕೆ ತರುವುದು ಸಾಧ್ಯವಿಲ್ಲವೋ ಅಂತಹ ಭರವಸೆಗಳನ್ನು ನೀಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಭಾನುವಾರ ಆಗಮಿಸಿದ ವೇಳೆ ಹೆಲಿಪ್ಯಾಡ್‌ನಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಕಾಂಗ್ರೆಸ್‌ನವರಿಗೆ ಸೋಲಿನ ಭೀತಿ ಕಾಡುತ್ತಿರುವುದರ ಸ್ಪಷ್ಟ ಚಿತ್ರಣ ಅವರ ಮುಖದಲ್ಲಿ ಕಾಣುತ್ತಿದೆ’ ಎಂದು ಲೇವಡಿ ಮಾಡಿದರು.
‘ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯೇ ಬರಲಿದೆ. ಏಕೆಂದರೆ, ಎಸ್ಕಾಂಗಳ ಪರಿಸ್ಥಿತಿ ಅವರಿಗೂ ಗೊತ್ತಿದೆ. ಅವರ ಕಾಲದಲ್ಲಿ ಇನ್ನಷ್ಟು ಹದಗೆಟ್ಟಿತ್ತು. ನಾವು ಬಂದ ಮೇಲೆ ₹ 8ಸಾವಿರ ಕೋಟಿ ನೇರವಾಗಿ ಹಾಗೂ ₹13ಸಾವಿರ ಕೋಟಿ ಸಾಲ ನೀಡಿ ಎಸ್ಕಾಂಗಳನ್ನು ಉಳಿಸಿಕೊಂಡಿದ್ದೇವೆ. ಹೀಗಾಗಿ, ಎಲ್ಲೂ ವಿದ್ಯುತ್‌ಗೆ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ. ಹೀಗಿರುವಾಗ, 200 ಯೂನಿಟ್ ವಿದ್ಯುತ್ ಉಚಿತ ಪೂರೈಕೆ ಅಸಾಧ್ಯವಾದುದು’ ಎಂದರು.
‘ನಾವು ಪರಿಶಿಷ್ಟರಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ಕೊಟ್ಟಿದ್ದೇವೆ. ಆ ಮಾದರಿ ಅನುಸರಿಸಿ ಲೆಕ್ಕಾಚಾರವಿಲ್ಲದೆ ಕಾಂಗ್ರೆಸ್‌ನವರು ಭರವಸೆ ನೀಡುತ್ತಿದ್ದಾರೆ. ಅವರ ಟ್ರ್ಯಾಕ್ ರೆಕಾರ್ಡ್ ಎಲ್ಲರಿಗೂ ಗೊತ್ತಿದೆ. ಹೇಳುವುದೊಂದು–ಮಾಡುವುದೊಂದು. ಇದೆಲ್ಲವೂ ಜನರಿಗೆ ಗೊತ್ತಿದೆ’ ಎಂದು ಹೇಳಿದರು.
ಕೀಳುಮಟ್ಟದ ಟೀಕೆ ಶೋಭೆ ತರದು
‘ಹೇಳಿಕೆಗೂ ಒಂದು ಮಿತಿ ಇದೆ. ನಾಯಿ ಎನ್ನುವುದು, ಮನೆ ಹಾಳಾಗಲಿ ಎನ್ನುವುದು ಕರ್ನಾಟಕದ ಹಾಗೂ ಇಲ್ಲಿನ ರಾಜಕಾರಣದ ಸಂಸ್ಕೃತಿಯಲ್ಲ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಬಿ.ಕೆ.ಹರಿಪ್ರಸಾದ್ ಇಂತಹ ಹೇಳಿಕೆಗಳನ್ನು ನನ್ನ ವಿರುದ್ಧ ನೀಡುತ್ತಲೇ ಬಂದಿದ್ದಾರೆ. ಅಂಥದ್ದಕ್ಕೆಲ್ಲಾ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಟೀಕೆಯು ಆರೋಗ್ಯಕರವಾಗಿರಬೇಕು’ ಎಂದು ಪ್ರತಿಕ್ರಿಯಿಸಿದರು.
‘ಅವರ ಸರ್ಕಾರವಿದ್ದಾಗ ಮಾಡಿರುವ ಭ್ರಷ್ಟಾಚಾರ, ಅವ್ಯವಹಾರ ಹಾಗೂ ದೌರ್ಭಾಗ್ಯಗಳ ಬಗ್ಗೆ ನಾವೂ ಟೀಕಿಸುತ್ತೇವೆ. ಆದರೆ, ವೈಯಕ್ತಿಕವಾಗಿ ಕೀಳುಮಟ್ಟದ, ಕೀಳು ಅಭಿರುಚಿಯ ಟೀಕೆ ಅವರ ಹಿರಿತನಕ್ಕೆ ಶೋಭೆಯಲ್ಲ’ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.