ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆಯಿಂದ ಎದ್ದು ಕೆಲಸ ಮಾಡಿ: ಸಿಎಂ ಚಾಟಿ- ಹಿರಿಯ ಅಧಿಕಾರಿಗಳ ಜತೆ ತುರ್ತುಸಭೆ

Last Updated 17 ಮೇ 2022, 15:47 IST
ಅಕ್ಷರ ಗಾತ್ರ

ಬೆಂಗಳೂರು: ‘ಅಭಿವೃದ್ಧಿ ಕುರಿತ ನಿಮ್ಮ ಧೋರಣೆ ಬದಲಿಸಿಕೊಳ್ಳಿ. ನಿದ್ದೆಯಿಂದ ಎದ್ದು ಕೆಲಸ ಮಾಡಿ, ಆಡಳಿತದಲ್ಲಿ ತ್ವರಿತಗತಿಯಲ್ಲಿ ಸುಧಾರಣೆ ತನ್ನಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.

ಸರ್ಕಾರದ ಮುಖ್ಯಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳ ಜತೆ ಮಂಗಳವಾರ ಸಂಜೆ ತುರ್ತುಸಭೆ ನಡೆಸಿದ ಅವರು, ಕೆಲವು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಬಡವರು, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಯೋಜನೆಗಳ ಬಗ್ಗೆ ನಿಷ್ಕಾಳಜಿ ಮಾಡಬಾರದು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಜಾರಿಗೆ ಆದ್ಯತೆ ನೀಡಿ. ಮಕ್ಕಿಕಾಮಕ್ಕಿ ಕೆಲಸ ಮಾಡಬೇಡಿ. ಈಗ ಕಾಲ ಬದಲಾಗಿದೆ, ಅದಕ್ಕೆ ತಕ್ಕಂತೆ ಕೆಲಸ ಮಾಡದಿದ್ದರೆ, ರಾಜ್ಯವು ಸಂಕಷ್ಟಕ್ಕೆ ಸಿಲುಕುತ್ತದೆ’ ಎಂದೂ ಸಭೆಯಲ್ಲಿ ಎಚ್ಚರಿಕೆ ನೀಡಿದರೆಂದು ಮೂಲಗಳು ಹೇಳಿವೆ.

ಗಂಗಾ ಕಲ್ಯಾಣ ಯೋಜನೆಯಲ್ಲಿ ಏನು ಆಗುತ್ತಿದೆ? ಕೊಳವೆಬಾವಿಗಳನ್ನು ಕೊರೆಸುತ್ತಿಲ್ಲ. ವಿದ್ಯುತ್‌ ಸಂಪರ್ಕ ನೀಡುತ್ತಿಲ್ಲ. ಈ ಯೋಜನೆಯ ಪ್ಯಾಕೇಜ್‌ ವ್ಯವಸ್ಥೆಯನ್ನು ಸರಿಯಾಗಿ ಜಾರಿ ಮಾಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಜಮೀನು ಬೇಕಾಗುತ್ತದೆ. ಮುಂದಿನ ತಿಂಗಳಿನೊಳಗೆ ಜಮೀನು ಪಡೆದು, ಟೆಂಡರ್‌ ಪ್ರಕ್ರಿಯೆ ನಡೆಸಬೇಕು ಎಂಬ ಸೂಚನೆ ನೀಡಲಾಗಿದೆ’ ಎಂದರು.

ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಇಲ್ಲದ ಕಾರಣ ಹಲವು ಯೋಜನೆಗಳ ಜಾರಿ ತಡವಾಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ಏನು ಮಾಡಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು ಎಂದು ಹೇಳಿದರು.

‘ಜಿಲ್ಲಾಧಿಕಾರಿಗಳಿಂದ ಬಂದ ಕಡತಗಳು ಮತ್ತೆ ಕೆಳಗಿನ ಹಂತದ ಅಧಿಕಾರಿಗಳಿಗೆ ಹೋಗಬಾರದು, ಮೇಲಿನ ಹಂತದ ಅಧಿಕಾರಿಗಳಿಗೆ ಹೋಗಿ ಕೆಲಸ ಪೂರ್ಣಗೊಳ್ಳಬೇಕು. ಆಡಳಿತ ಸುಧಾರಣಾ ಸಮಿತಿ ನೀಡಿರುವ ಶಿಫಾರಸುಗಳನ್ನು ಪಾಲನೆ ಮಾಡಬೇಕೆಂದು ಸೂಚನೆ ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT