ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7,500 ಮೆಟ್ರೊ ನಿರ್ಮಾಣ ಕಾರ್ಮಿಕರಿಗೆ ಲಸಿಕೆ: ಯಡಿಯೂರಪ್ಪ

Last Updated 27 ಮೇ 2021, 15:09 IST
ಅಕ್ಷರ ಗಾತ್ರ

ಬೆಂಗಳೂರು:‘ನ್ಯಾಷನಲ್‌ ಕಾಲೇಜು, ಎಂ.ಜಿ.ರಸ್ತೆ, ಬೈಯಪ್ಪನಹಳ್ಳಿ ಹಾಗೂ ವಿಜಯನಗರ ಮೆಟ್ರೊ ನಿಲ್ದಾಣಗಳಲ್ಲಿ ಒಟ್ಟು ಎರಡು ದಿನ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ನಿಲ್ದಾಣದಲ್ಲಿ 6 ಕೇಂದ್ರಗಳನ್ನು ತೆರೆಯಲಾಗಿದೆ.ಒಂದೊಂದು ನಿಲ್ದಾಣದಲ್ಲಿ ದಿನಕ್ಕೆ ಸುಮಾರು 900ರಂತೆ ಮೊದಲ ಹಂತದಲ್ಲಿ ಒಟ್ಟು 7,500 ಮೆಟ್ರೊ ನಿರ್ಮಾಣ ಕಾರ್ಮಿಕರಿಗೆ ಲಸಿಕೆ ಹಾಕುವ ಗುರಿ ಇದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಎ.ಸಿ.ಟಿ. ಗ್ರಾಂಟ್ಸ್‌, ದಿ ಯುನೈಟೆಡ್‌ ಬೆಂಗಳೂರು ಹಾಗೂ ಸತ್ವ ಕನ್ಸಲ್ಟಿಂಗ್‌ ಸಹಭಾಗಿತ್ವದಲ್ಲಿ ಗುರುವಾರ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೆಟ್ರೊ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಮೆಟ್ರೊ ನಿರ್ಮಾಣ ಕಾರ್ಮಿಕರಿಗೆ ಲಸಿಕೆ ಉಚಿತವಾಗಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹಲವಾರು ಕಂಪನಿಗಳುಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಕಾರ್ಯಕ್ರಮದ ಅಡಿಯಲ್ಲಿ ಹಣ, ಅತ್ಯಾಧುನಿಕ ಉಪಕರಣಗಳನ್ನು ಒದಗಿಸಿವೆ. ಆಸ್ಪತ್ರೆಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕೋವಿಡ್‌ ನಿರ್ವಹಣೆ ಕಾರ್ಯದಲ್ಲಿ ಸರ್ಕಾರದ ಕೈ ಬಲಪಡಿಸಿವೆ’ ಎಂದರು.

ಕೊಳೆಗೇರಿಗಳಲ್ಲಿ ಸೋಂಕು ಹರಡುವ ಅಪಾಯ ಹೆಚ್ಚು: ವಿಲ್ಸನ್‌ಗಾರ್ಡನ್‌ನ ರೆಡ್‌ ಫೀಲ್ಡ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕೊಳೆಗೇರಿ ನಿವಾಸಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಲ್ಲಿ ಭಾಗಿಯಾಗಿ ‘ಕೊಳೆಗೇರಿಗಳಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ. ಇದನ್ನು ಮನಗಂಡುಎಸಿಟಿ ಗ್ರಾಂಟ್ಸ್‌, ಅಮೆಜಾನ್‌ ಇಂಡಿಯಾ, ಜೊಮ್ಯಾಟೊ, ಪೇಟಿಎಂ, ಸತ್ವ ಕನ್ಸಲ್ಟಿಂಗ್‌ ಸೇರಿದಂತೆ ಹಲವು ಕಂಪನಿಗಳು ಸಿಎಸ್‌ಆರ್‌ ನಿಧಿ ಮೂಲಕ ಇಲ್ಲಿನ ನಿವಾಸಿಗಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಕೋವಿಡ್‌ ನಿಯಂತ್ರಣದ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆ’ ಎಂದರು.

‌‘ಲಸಿಕೆ ನೀಡುವ ಮೂಲಕ ಕೋವಿಡ್‌ನಿಂದ ತೀವ್ರವಾಗಿ ಬಾಧಿತವಾಗಿರುವ ಸಮುದಾಯಗಳನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಆದ್ಯತೆಯ ಮೇರೆಗೆ ಲಸಿಕೆಯನ್ನು ಉಚಿತವಾಗಿ ನೀಡಲೂ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ಸಾಲ ಒದಗಿಸಲು ಕ್ರಮ’: ‘ಗುರುತಿನ ಚೀಟಿ ಹೊಂದಿರದ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದಲೇ ಆನ್‌ಲೈನ್‌ ಮೂಲಕ ಶಿಫಾರಸು ಪತ್ರ (ಎಲ್‌ಒಆರ್‌) ನೀಡಿ ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಒದಗಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಯಡಿಯೂರಪ್ಪ ಹೇಳಿದರು.

ಬಿಬಿಎಂಪಿ ವತಿಯಿಂದ ಬಸವನಗುಡಿ ನ್ಯಾಷನಲ್‌ ಕಾಲೇಜು ಆವರಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆಲಸಿಕೆ ನೀಡಲಾಗುತ್ತಿದ್ದು ಇಲ್ಲಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

‘ಸುಮಾರು4 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ವಿವಿಧ ಬ್ಯಾಂಕ್‌ಗಳಿಂದ ತಲಾ₹10 ಸಾವಿರ ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದೆ.53 ಸಾವಿರ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಲಸಿಕೆ ಉಚಿತವಾಗಿ ನೀಡಲು ಮುಂದಾಗಿದ್ದೇವೆ. ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ತಲಾ₹2 ಸಾವಿರ ನೆರವು ಘೋಷಿಸಿದ್ದು ಅದು ಎಲ್ಲರಿಗೂ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಕೋವಿಡ್‌ ಪ್ರಕರಣಗಳ ಇಳಿಕೆ ಖುಷಿಯ ವಿಷಯ’: ‘ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳು ಇಳಿಕೆ ಕಾಣುತ್ತಿರುವುದು ಖುಷಿಯ ವಿಷಯ. ಹಾಗಂತ ಮೈಮರೆಯಬಾರದು. ತುರ್ತು ಚಿಕಿತ್ಸಾ ವ್ಯವಸ್ಥೆ ಹೆಚ್ಚಿಸುವ ಮೂಲಕ ಜನರಲ್ಲಿ ಸುರಕ್ಷತೆಯ ಭಾವ ಮೂಡಿಸಲು ಮುಂದಾಗಬೇಕು’ ಎಂದು ತಿಳಿಸಿದರು.

ಜಯನಗರ 4ನೇ ಬ್ಲಾಕ್‌ನಲ್ಲಿರುವ ಗಾರ್ಡನ್‌ ಸಿಟಿ ಆಸ್ಪತ್ರೆಯನ್ನು ಪುನರುಜ್ಜೀವನಗೊಳಿಸಲಾಗಿದ್ದು, ಇಲ್ಲಿ ಕೋವಿಡ್‌ ಪೀಡಿತರ ಚಿಕಿತ್ಸೆಗೆ 70 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಈ ಆಸ್ಪತ್ರೆಯಲ್ಲಿ ಆಶೀರ್ವಾದ ಪೈಪ್ಸ್‌ ವತಿಯಿಂದ10 ಐಸಿಯು ಹಾಸಿಗೆ, ಅಜೀಂ ಪ್ರೇಮ್‌ಜೀ ಫೌಂಡೇಷನ್‌ ಹಾಗೂ ಡಾಕ್ಟರ್ಸ್‌ ಫಾರ್‌ ಯೂ ಸಂಸ್ಥೆಗಳ ಸಹಕಾರದೊಂದಿಗೆ10 ಎಚ್‌ಜಿಯು ಹಾಗೂ ಆಮ್ಲಜನಕ ಸೌಲಭ್ಯದ 50 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಜಯನಗರ ಜನರಲ್‌ ಆಸ್ಪತ್ರೆಯ ವಿಸ್ತರಣಾ ಘಟಕವಾಗಿ ಈ ಆಸ್ಪತ್ರೆ ಕೆಲಸ ಮಾಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT