ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ

ಮದ್ಯ ನಿಷೇಧ ಆಂದೋಲನದ ಪ್ರತಿನಿಧಿಗಳಿಗೆ ಸಿ.ಎಂ ಭರವಸೆ
Last Updated 25 ಮಾರ್ಚ್ 2021, 15:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಮದ್ಯ ನಿಷೇಧ ಆಂದೋಲನದ ರಾಜ್ಯ ಸಂಚಾಲಕಿ ಸ್ವರ್ಣಾ ಭಟ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರನ್ನು ಗುರುವಾರ ಭೇಟಿ ಮಾಡಿದ ಮದ್ಯ ನಿಷೇಧ ಆಂದೋಲನದ ಸದಸ್ಯರು, ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಮನವಿಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಸ್ವರ್ಣಾ ಭಟ್‌, ‘ಅಕ್ರಮ ಮದ್ಯ ಮಾರಾಟ ತಡೆಯುವ ಸಂಬಂಧ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್, ಗೃಹ, ಕಂದಾಯ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಮದ್ಯ ನಿಷೇಧ ಆಂದೋಲನದ ಐದರಿಂದ ಆರು ಪ್ರತಿನಿಧಿಗಳನ್ನು ಒಳಗೊಂಡಂತೆ ಉನ್ನತಮಟ್ಟದ ಸಭೆ ನಡೆಸಬೇಕೆಂಬ ನಮ್ಮ ಬೇಡಿಕೆಗೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ’ ಎಂದರು.

ಸಭೆಯ ದಿನಾಂಕ ನಿಗದಿಯಾಗಿ ಸಂಘಟನೆಯ ಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಅಥವಾ ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದ ಪತ್ರ ಬರುವವರೆಗೂ ರಾಯಚೂರಿನಲ್ಲಿ ನಡೆಸುತ್ತಿರುವ ಹೋರಾಟವನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

ಅಕ್ರಮ ಮದ್ಯ ಮಾರಾಟ ತಡೆಗೆ ಅರೆ ನ್ಯಾಯಾಂಗ ಅಧಿಕಾರವುಳ್ಳ ಮಹಿಳಾ ಕಾವಲು ಸಮಿತಿಗಳ ರಚನೆ, ಮಹಾರಾಷ್ಟ್ರ ಮಾದರಿಯಲ್ಲಿ ಶೇಕಡ 10ರಷ್ಟು ಜನರು ವಿರೋಧ ದಾಖಲಿಸುವ ಸ್ಥಳಗಳಲ್ಲಿ ಮದ್ಯದಂಗಡಿ ಪರವಾನಗಿ ನೀಡದಿರುವುದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಅಪಾಯಕಾರಿ ಚಟುವಟಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂಬ ಬೇಡಿಕೆಗಳನ್ನು ಸಂಘಟನೆಯು ಮುಂದಿಟ್ಟಿದೆ.

ಸಂಘಟನೆಯ ಪ್ರತಿನಿಧಿಗಳಾದ ಮೋಕ್ಷಮ್ಮ, ನಿಂಗಮ್ಮ, ಸ್ವಪ್ನಾ, ಸುಶೀಲಾ, ಕೊಟ್ರಮ್ಮ, ಗಂಗಮ್ಮ, ವಿದ್ಯಾ ಪಾಟೀಲ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT