ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು – ಮೈಸೂರು ದಶಪಥ ಕಾಮಗಾರಿ ಲೋಪದ ಬಗ್ಗೆ ಗಡ್ಕರಿಗೆ ಸಿಎಂ ದೂರು

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಅವಾಂತರ
Last Updated 9 ಸೆಪ್ಟೆಂಬರ್ 2022, 13:40 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಮತ್ತು ರಾಜ್ಯಗಳ ಮಹತ್ವಾಕಾಂಕ್ಷಿ ಯೋಜನೆಯಾದ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿಯಲ್ಲಿ ಸಾಕಷ್ಟು ಲೋಪಗಳಿವೆ ಎಂದು ವಿರೋಧ ಪಕ್ಷಗಳು, ಸಾರ್ವಜನಿಕರು ಆಕ್ಷೇಪ ಎತ್ತಿದ್ದ ಬೆನ್ನಲ್ಲೇ, ಈ ಕಾಮಗಾರಿಯಿಂದಾದ ಅವಾಂತರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ದೂರು ಕೊಟ್ಟಿದ್ದಾರೆ.

‘ರಸ್ತೆ, ಚರಂಡಿ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ಗುತ್ತಿಗೆದಾರರಿಗೆ ಖಡಕ್‌ ಸೂಚನೆ ನೀಡಬೇಕು’ ಎಂದೂ ಅವರು ಅಹವಾಲು ಸಲ್ಲಿಸಿದ್ದಾರೆ.

ಕೇಂದ್ರ ಭೂಸಾರಿಗೆ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುವಾರ ಇಲ್ಲಿ ಆಯೋಜಿಸಿದ್ದ ‘ಮಂಥನ’ ಕಾರ್ಯಕ್ರಮದ ವೇಳೆ ಬೊಮ್ಮಾಯಿ ಅವರು ಗಡ್ಕರಿ ಜತೆ ಪ್ರತ್ಯೇಕವಾಗಿ ಈ ಕುರಿತು ಮಾತುಕತೆ ನಡೆಸಿದರು. ಈ ಹೆದ್ದಾರಿಯ ಕಾಮಗಾರಿಗಳ ಬಗ್ಗೆ ಎದ್ದಿರುವ ತಕರಾರುಗಳ ಕುರಿತು ಗಮನ ಸೆಳೆದರು.

‘ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜೀ ಇಲ್ಲ. ಲೋಪಗಳನ್ನು ಸರಿಪಡಿಸಿ, ಅತ್ಯುತ್ತಮ ಹೆದ್ದಾರಿಯನ್ನೇ ನಿರ್ಮಿಸುತ್ತೇವೆ’ ಎಂದು ಗಡ್ಕರಿ ಭರವಸೆ ನೀಡಿದರು.

‘ಈ ಹೆದ್ದಾರಿಯು ರಾಜ್ಯದ ಪ್ರತಿಷ್ಠಿತ ಯೋಜನೆಯಾಗಿದೆ. ಹೆದ್ದಾರಿ ನಿರ್ಮಾಣದಲ್ಲಿ ಯಾವುದೇ ಲೋಪವಾಗಿದ್ದರೂ ಅದನ್ನು ಈಗಲೇ ಸರಿಪಡಿಸಬೇಕು. ಇತ್ತೀಚೆಗೆ ಬಿದ್ದ ಮಳೆಯಿಂದ ಕೆಲವು ಸಮಸ್ಯೆಗಳು ಬೆಳಕಿಗೆ ಬಂದಿವೆ. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಅಗತ್ಯ ಬದಲಾವಣೆಗಳನ್ನು ಮಾಡಬೇಕು. ಈ ಬಗ್ಗೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಬೇಕು’ ಎಂದು ಬೊಮ್ಮಾಯಿ ಅವರು ಗಡ್ಕರಿಗೆ ಅವರಿಗೆ ಹೇಳಿದರು.

ಒಳಚರಂಡಿಗೆ ವ್ಯವಸ್ಥೆ: ‘ಎಕ್ಸ್‌ಪ್ರೆಸ್‌ ಹೆದ್ದಾರಿಯ ಉದ್ದಕ್ಕೂ ಎರಡೂ ಬದಿಗಳಲ್ಲಿ ಮಳೆ ನೀರಿನ ಒಳಚರಂಡಿ ವ್ಯವಸ್ಥೆಯಲ್ಲಿ ತೊಡಕುಗಳಿವೆ. ಇತ್ತೀಚಿನ ಮಳೆಯಿಂದ ಇದು ಗೊತ್ತಾಗಿದೆ. ಎಲ್ಲೆಲ್ಲಿ ನೀರು ನಿಂತಿದೆ. ಭವಿಷ್ಯದಲ್ಲಿ ಎಲ್ಲೆಲ್ಲಿ ನೀರು ನಿಂತು ಸಮಸ್ಯೆಗಳು ಸೃಷ್ಟಿಯಾಗಬಹುದು ಎಂಬುದನ್ನು ಅಂದಾಜು ಮಾಡಿ ಅದಕ್ಕೆ ಪೂರಕವಾಗಿ ಒಳಚರಂಡಿ ವ್ಯವಸ್ಥೆಗೆ ಹೊಸ ಯೋಜನೆಯನ್ನೇ ರೂಪಿಸಿ, ಜಾರಿಗೊಳಿಸಬೇಕು’ ಎಂದು ಗಡ್ಕರಿ ಅಧಿಕಾರಿಗಳಿಗೆ ಸೂಚಿಸಿದರು.

‘ಉಳಿದಂತೆ ಯೋಜನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ. ಆದರೆ, ಗ್ರಾಮಸ್ಥರ ಕೋರಿಕೆಯ ಮೇರೆಗೆ ಅಲ್ಲಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯವಸ್ಥೆ ಮಾಡಿಕೊಡಲಿದೆ’ ಎಂದೂ ಅವರು ಭರವಸೆ ನೀಡಿದರು.

ರಾಮನಗರದ ಹೊರವಲಯದಲ್ಲಿ ಹಾದು ಹೋಗುವ ಎಕ್ಸ್‌ಪ್ರೆಸ್‌ ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನೀರು ತುಂಬಿಕೊಂಡು ಪ್ರವಾಹವೇ ಸೃಷ್ಟಿಯಾಗಿತ್ತು. ರಸ್ತೆಗಳು, ಬಡಾವಣೆಗಳಲ್ಲಿ ನೀರು ನಿಂತು ಜನರು ತೊಂದರೆ ಪರದಾಡಿದ್ದರು. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ದೂರಿದ್ದರು.

ಹುಬ್ಬಳ್ಳಿ– ಧಾರವಾಡ ಬೈಪಾಸ್‌:

ಹುಬ್ಬಳ್ಳಿ– ಧಾರವಾಡದ ಮಧ್ಯೆ ಬೈಪಾಸ್‌ ಕಾಮಗಾರಿಯನ್ನು ಖಾಸಗಿಯವರಿಗೆ ಹಸ್ತಾಂತರಿಸಿದ್ದು, ಟೆಂಡರ್‌ ಪ್ರಕ್ರಿಯೆಯೂ ಮುಗಿದಿದೆ. ಇನ್ನು 2–3 ತಿಂಗಳಲ್ಲಿ ಕಾಮಗಾರಿ ಆರಂಭವಾಗುತ್ತದೆ ಎಂದು ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.

ಮುಖ್ಯವಾಗಿ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು, ಶಿರಾಡಿ ಘಾಟ್‌ ಸೇರಿ ಪ್ರಮುಖ ಹೆದ್ದಾರಿಗಳ ಬಗ್ಗೆ ಗಡ್ಕರಿ ಜತೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಮಾಲಿನ್ಯ ಮುಕ್ತ ಹೆದ್ದಾರಿಗಳಿಗೆ ಒತ್ತು

ಬೆಂಗಳೂರು:ನೈಸರ್ಗಿಕ ಇಂಧನ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಭಾರತದ ರಸ್ತೆಗಳು ಭವಿಷ್ಯದಲ್ಲಿ ಮಾಲಿನ್ಯ ರಹಿತವಾಗಲಿವೆ ಎಂದು ಕೇಂದ್ರ ಭೂಸಂಪರ್ಕ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ಕೇಂದ್ರ ಭೂ ಸಾರಿಗೆ ಸಚಿವಾಲಯ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುವಾರ ಆಯೋಜಿಸಿದ್ದ ‘ಮಂಥನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರಗಳು ಸೂಕ್ತ ಭೂಮಿ ಒದಗಿಸಿದರೆ ಕೇಂದ್ರ ಸರ್ಕಾರ ಸುವ್ಯವಸ್ಥಿತ ಟ್ರಕ್‌ ಟರ್ಮಿನಲ್‌ಗಳನ್ನು ನಿರ್ಮಿಸಿಕೊಡಲಿದೆ. ನಿರ್ಮಾಣದ ಗುಣಮಟ್ಟ ಸುಧಾರಿಸಬೇಕಾದರೆ ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬೇಕು. ಬಹುಮಾದರಿ ಸಾರಿಗೆಗೆ ಆದ್ಯತೆ ನೀಡಬೇಕು ಎಂದರು.

ಪಾಲುದಾರರು ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪರಸ್ಪರ ಒಪ್ಪಿಗೆಯೊಂದಿಗೆ ಕೆಲಸ ಮಾಡಬೇಕು.ಹೊಸ ತಂತ್ರಜ್ಞಾನ, ಆಧುನಿಕ ಉಪಕರಣಗಳು ಹಾಗೂ ಸಾಮಗ್ರಿಗಳ ಬಳಕೆ ಮಾಡಿಕೊಳ್ಳಬೇಕು. ದೀರ್ಘ ಬಾಳಿಕೆಯ ಕಾಂಕ್ರಿಟ್‌ ರಸ್ತೆಗಳಿಗೆ ಆದ್ಯತೆ ನೀಡಬೇಕು. ಇದರಿಂದ ಕನಿಷ್ಠ 25 ವರ್ಷಗಳು ನಿರ್ವಹಣಾ ವೆಚ್ಚ ಉಳಿಯಲಿದೆ. ಶೇ 90ರಷ್ಟು ಪ್ರಯಾಣಿಕರು, ಶೇ 70ರಷ್ಟು ಸರಕು ಸಾಗಣೆ ರಸ್ತೆಗಳನ್ನೇ ಅವಲಂಬಿಸಿವೆ. ಜಲಮಾರ್ಗ, ರೈಲ್ವೆ ಮತ್ತು ವಿಮಾನಯಾನ ಬಳಕೆಯ ಸಮಗ್ರ ಬಳಕೆಯ ಮೂಲಕ ಸರಕು ಸಾಗಣೆ ವೆಚ್ಚ ಶೇ 10ಕ್ಕೆ ಇಳಿಸಬೇಕು ಎಂದು ಕೋರಿದರು.

ಹೆದ್ದಾರಿ ಬದಿ ‘ಟ್ರೀ ಬ್ಯಾಂಕ್‌’

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಸಹಯೋಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಎರಡೂ ಕಡೆಗಳಲ್ಲಿ 80 ಲಕ್ಷ ಸಸಿಗಳನ್ನು ಬೆಳೆಸಲು ‘ಟ್ರೀ ಬ್ಯಾಂಕ್‌’ ಯೋಜನೆ ರೂಪಿಸಲಾಗಿದೆ. ಭಾರತದ ಹಸಿರು ಪ್ರದೇಶದ ವಿಸ್ತಾರಕ್ಕೆ ಕೈಜೋಡಿಸಲಾಗುವುದು. ಆ ಮೂಲಕ ಆಮ್ಲಜನಕಯುಕ್ತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಸಚಿವ ಗಡ್ಕರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT