ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೆಚ್ಚಳ: ‘ಲಾಕ್‌ಡೌನ್‌ ಬೇಡ ಎಂದರೆ ಸಹಕರಿಸಿ’–ಸಿಎಂ ಬಿಎಸ್‌ವೈ

ತಜ್ಞರ ಜೊತೆ ಸಿ.ಎಂ ಸಭೆ ಇಂದು
Last Updated 14 ಮಾರ್ಚ್ 2021, 20:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಮತ್ತೊಮ್ಮೆ ರಾಜ್ಯ ಲಾಕ್‌ಡೌನ್ ಆಗಬಾರದು, ಕರ್ಪ್ಯೂ ವಿಧಿಸಬಾರದು ಎಂದಿದ್ದರೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ರಾಜ್ಯ ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ ಪ‍್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಈ ಬಗ್ಗೆ ಚರ್ಚಿಸಲು ಅವರು ವಿಧಾನಸೌಧದಲ್ಲಿ ಸೋಮವಾರ ತಜ್ಞರ ಸಭೆ ಕರೆದಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌, ಕೋವಿಡ್‌ ತಾಂತ್ರಿಕ ಸಮಿತಿಯ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಯಡಿಯೂರಪ್ಪ, ‘ಸದ್ಯ ಲಾಕ್‌ಡೌನ್ ಚಿಂತನೆ ಇಲ್ಲ. ಜನರು ಮಾಸ್ಕ್ ಹಾಕಬೇಕು, ವೈಯಕ್ತಿಕ ಅಂತರ ಕಾಪಾಡಬೇಕು. ನಿಯಮ ಪಾಲಿಸಿದರೆ ಕೋವಿಡ್‌ ನಿಯಂತ್ರಿಸಬಹುದು. ಸೋಮವಾರ ನಡೆಯುವ ಸಭೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದರು.

‘ರಾಜ್ಯದಲ್ಲಿ ದಿನೇ ದಿನೇ ಕೋವಿಡ್‌ ಹೆಚ್ಚಾಗುತ್ತಿದೆ. ಲಾಕ್ ಡೌನ್ ಮಾಡದೆ, ಎಲ್ಲ ವ್ಯವಹಾರಗಳು ನಡೆಯಬೇಕೆಂದರೆ ಜನರ ಸಹಕಾರ ಅಗತ್ಯ. ಈಗಾಗಲೇ ಸಾಕಷ್ಟು ನಷ್ಟ (ಲಾಕ್‌ಡೌನ್‌ನಿಂದ) ಅನುಭವಿಸಿದ್ದೇವೆ. ಇನ್ನು ಮುಂದೆ ಮದುವೆ ಸಮಾರಂಭಗಳಿಗೆ ಇಂತಿಷ್ಟೇ ಜನರು ಇರಬೇಕು ಎಂದು ನಿಗದಿ ಮಾಡುತ್ತೇವೆ. ಮಹಾರಾಷ್ಟ್ರದಲ್ಲೂ ಕೋವಿಡ್‌ ಹೆಚ್ಚುತ್ತಿದೆ. ಹೀಗಾಗಿ ಗಡಿಗಳಲ್ಲಿಯೂ ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ. ಲಾಕ್ ಡೌನ್ ಮಾಡಲು ಅವಕಾಶ ಕೊಡದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದೂ ಅವರು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಹೆಚ್ಚುತ್ತಿರುವ ಕೊರೊನಾ ಕಾರಣಕ್ಕೆ ರಾಜ್ಯದಲ್ಲಿ ರಾತ್ರಿ ಕರ್ಫೂ ಜಾರಿ ಬಗ್ಗೆ ಈವರೆಗೆ ಯಾವುದೇ ಚರ್ಚೆ ಆಗಿಲ್ಲ. ಮುಖ್ಯಮಂತ್ರಿ ಕರೆದಿರುವ ಸಭೆಯಲ್ಲಿ ಯಾವ ವಿಷಯ ಚರ್ಚೆ ಆಗುತ್ತೋ ನೋಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT