ಮಂಗಳವಾರ, ಜೂನ್ 28, 2022
28 °C
‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ’

ಯಡಿಯೂರಪ್ಪ ಮನಸ್ಸಿಗೆ ಘಾಸಿ ಆದಂತೆ ಕಾಣುತ್ತಿದೆ: ಕಂದಾಯ ಸಚಿವ ಆರ್‌. ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರ ಮನಸ್ಸಿಗೆ ನೋವು ಆದಂತೆ ಕಾಣುತ್ತಿದೆ. ಹೀಗಾಗಿ, ಅವರು ಹೈಕಮಾಂಡ್ ಹೇಳಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿರಬಹುದು. ಆದರೆ, ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದು ಕಂದಾಯ ಸಚಿವ ಆರ್‌. ಅಶೋಕ್ ತಿಳಿಸಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಘಟಕದ ಅಧ್ಯಕ್ಷ ನಳಿಕುಮಾರ್‌, ಸಿ.ಟಿ. ರವಿ ಸೇರಿದಂತೆಇನ್ನೂ ಹಲವು ನಾಯಕರು ಯಾವುದೇ ಕಾರಣಕ್ಕೆ ನಾಯಕತ್ವದ ಬದಲಾವಣೆ ಇಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ’ ಎಂದರು.

‘ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನ, ದೆಹಲಿಗೆ ಪ್ರಯಾಣ, ಮುಂದೇ ನಾವೇ ಮುಖ್ಯಮಂತ್ರಿ ಹೀಗೆ ಈ ರೀತಿಯ ಪದೇ ಪದೇ ಸುದ್ದಿ, ನಾಯಕತ್ವದ ಪ್ರಶ್ನೆಯ ವಿಷಯ ಬಿಂಬಿತ ಆಗಿರುವುದನ್ನು ನೋಡಿ ಮುಖ್ಯಮಂತ್ರಿ ಮನಸ್ಸಿಗೆ ನೋವು ಆದಂತೆ ಕಾಣುತ್ತಿದೆ’ ಎಂದೂ ಅಶೋಕ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ದಕ್ಷ ಆಡಳಿತ: ಮುಖ್ಯಮಂತ್ರಿಯಿಂದ ರಾಜೀನಾಮೆ ಕೊಡಿಸುವ ಉದ್ದೇಶವಿಲ್ಲ -ಜೋಶಿ

‘ನೀವೆಲ್ಲ (ಮಾಧ್ಯಮಗಳು) ಬಿಂಬಿಸುವ ಸಚಿವ ಸಿ.ಪಿ. ಯೋಗೇಶ್ವರ ಕೂಡಾ ಯಡಿಯೂರಪ್ಪ ಅವರೇ ನಮ್ಮ ನಾಯಕರು. ನಮ್ಮ ಮುಖ್ಯಮಂತ್ರಿ ಎಂದಿದ್ದಾರೆ. ಯಡಿಯೂರಪ್ಪ ಅವರು ಅವಧಿ ಪೂರ್ಣಗೊಳಿಸುವ ಪೂರ್ತಿ ವಿಶ್ವಾಸವಿದೆ. ಅವರ ನಾಯಕತ್ವದಲ್ಲಿ ಅಚಲ ವಿಶ್ವಾಸ ಇದೆ. ಕೇಂದ್ರದ ನಾಯಕರ ಆಶೀರ್ವಾದ ಅವರ ಮೇಲಿದೆ. ರಾಜ್ಯ ಘಟಕದ ಅಧ್ಯಕ್ಷ ಸಹಕಾರವೂ ಅವರಿಗಿದೆ’ ಎಂದರು.

‘ಪಕ್ಷದ ಉಸ್ತುವಾರಿ ಅರುಣ್‌ ಸಿಂಗ್‌ ಕೂಡಾ ಈ ಬಗ್ಗೆ ಯಡಿಯೂರಪ್ಪ ಅವರಿಗೆ ಸ್ಪಷ್ಟವಾಗಿ ಹೇಳದ್ದಾರೆ. ನನ್ನ ಜೊತೆ ಮಾತನಾಡಿದಾಗ ಕರ್ನಾಟಕದಲ್ಲಿ ಯಾಕೆ ಪದೇ ಪದೇ ಈ ಪ್ರಶ್ನೆ ಬರುತ್ತದೆ ಎಂದು ಅರುಣ್‌ ಸಿಂಗ್‌ ಕೇಳಿದ್ದಾರೆ. ಆ ರೀತಿ ಬದಲಾವಣೆ ಮಾಡುವ ವಿಷಯ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ನಾಯಕತ್ವದ ಬದಲಾವಣೆಯ ಕುರಿತಾದ ಎಲ್ಲ ಗೊಂದಲಗಳಿಗೆ ಇತಿಶ್ರೀ ಹಾಡಬೇಕಿದೆ. ನಾನೂ ಸೇರಿದಂತೆ ಮಂತ್ರಿ ಮಂಡಲದ ಎಲ್ಲ ಸದಸ್ಯರು ಯಡಿಯೂರಪ್ಪ ಅವರ ಜೊತೆಗೇ ಇದ್ದೇವೆ’ ಎಂದು ಸ್ಪಸ್ಟಪಡಿಸಿದರು.

‘ರಾಜ್ಯದಲ್ಲಿ ಕೋವಿಡ್‌ ನಿಭಾಯಿಸಲು ನಮ್ಮ ಮುಖ್ಯಮಂತ್ರಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನೆರೆಯ ಮಹಾರಾಷ್ಟ್ರದ ಮುಖ್ಯಮಂತ್ರಿ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಕೂಡಾ ಹೊರಗಡೆಗೇ ಬರುತ್ತಿಲ್ಲ. ಆದರೆ, ನಮ್ಮ ಮುಖ್ಯಮಂತ್ರಿ ಕೋವಿಡ್‌ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ದಿನದಲ್ಲಿ 4–5 ಸಭೆ ಮಾಡುವ ಮೂಲಕ ಜನರ ಕಷ್ಟದಲ್ಲಿ ಭಾಗಿಯಾಗುತ್ತಿದ್ದಾರೆ’ ಎಂದರು.

‘ಬೇರೆ ರಾಜ್ಯಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ರೋಗಿಗಳೇ ಸ್ವಂತ ಖರ್ಚು ಮಾಡಬೇಕು. ಆದರೆ, ನಮ್ಮಲ್ಲಿ ಸರ್ಕಾರದಿಂದ ಹಣ ಪಾವತಿಸುವ ತೀರ್ಮಾನವನ್ನು ಮುಖ್ಯಮಂತ್ರಿ ತೆಗೆದುಕೊಂಡಿದ್ದಾರೆ. ಎರಡು ಬಾರಿ ಆರ್ಥಿಕ ಪ್ಯಾಕೇಜ್‌ ಘೋಷಿಸಿದ್ದಾರೆ. ಇಷ್ಟೆಲ್ಲ ಇದ್ದಾರೂ ನಾಯಕತ್ವದ ಪ್ರಶ್ನೆ ಬಂದಾಗ ಭಾವನೆಗಳಿಗೆ ಘಾಸಿ ಆಗುತ್ತದೆ. ಸರ್ಕಾರಲ್ಲಿ ಏನೋ ಆಗಿದೆ ಎಂಬ ರೀತಿಯಲ್ಲಿ ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಈ ಎಲ್ಲ ವಿಷಯಗಳಿಗೆ ಅಂತ್ಯ ಹಾಡಬೇಕಿದೆ. ನಾನು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಆ ಕೆಲಸವನ್ನು ಮಾಡುತ್ತೇವೆ’ ಎಂದರು.

‘ಮುಖ್ಯಮಂತ್ರಿಯ ಮನಸ್ಸಿಗೆ ನೋವಾಗಿರಬೇಕು. ನಮ್ಮಲ್ಲೆರ ನಾಯಕ ಅವರು. ರಾಜ್ಯದ ಮೂಲೆ ಮೂಲೆಗಳಿಗೂ ಹೋಗಿ ಅವರು ಪಕ್ಷ ಕಟ್ಟಿದ್ದಾರೆ. ಅವರ ಕಡೆಗೆ ಬೆರಳು ತೋರಿಸಲು ಯಾರಿಂದಲೂ ಸಾಧ್ಯ ಇಲ್ಲ. ಅವರ ಜೊತೆ 40 ವರ್ಷಗಳಿಂದ ಪಕ್ಷದಲ್ಲಿ ನಾನೂ ಕೆಲಸ ಮಾಡಿದ್ದೇನೆ. ಈ ಎಲ್ಲ ಗೊಂದಲಗಳಗೆ ಅಂತ್ಯ ಹಾಡಿ ಪಕ್ಷದ ವರ್ಚಸ್ಸು ಬೆಳಸುವುದು ನಮ್ಮ ಗುರಿ’ ಎಂದು ಅಶೋಕ್ ಹೇಳಿದರು.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು