ಗುರುವಾರ , ಅಕ್ಟೋಬರ್ 22, 2020
28 °C
ಧರಣಿ ನಿರತರನ್ನು ಭೇಟಿ ಮಾಡಿ ಉಪ ಮುಖ್ಯಮಂತ್ರಿ

ಕಾಲೇಜು ಆರಂಭವಾದ ತಕ್ಷಣ ಉಪನ್ಯಾಸಕರ ನೇಮಕಾತಿ ಆದೇಶ: ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೌನ್ಸೆಲಿಂಗ್‌ ಮುಗಿಸಿಕೊಂಡು ನೇಮಕಾತಿ ಅದೇಶದ ನಿರೀಕ್ಷೆಯಲ್ಲಿರುವ ಎಲ್ಲ ಉಪನ್ಯಾಸಕರಿಗೆ ರಾಜ್ಯದಲ್ಲಿ ಕಾಲೇಜುಗಳು ಆರಂಭವಾದ ತಕ್ಷಣ ನೇಮಕಾತಿ ಆದೇಶ ನೀಡಲು ಸರ್ಕಾರ ನಿರ್ಧರಿಸಿದೆ’ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ನೇಮಕಾತಿ ಪತ್ರ ನೀಡಬೇಕೆಂದು ಒತ್ತಾಯಿಸಿ ಪಿಯುಸಿ ಮಂಡಳಿ ಎದುರು ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವವರನ್ನು ಗುರುವಾರ ಭೇಟಿಯಾದ ಅವರು, ‘ಆರ್ಥಿಕ ಇಲಾಖೆಯ ಕೆಲವು ಆಕ್ಷೇಪಗಳ ಕಾರಣಕ್ಕೆ ನೇಮಕಾತಿ ಆದೇಶ ನೀಡುವುದು ವಿಳಂಬವಾಗಿದೆ. ಇದಕ್ಕೆ ಕೋವಿಡ್‌ ಕೂಡ ಒಂದು ಪ್ರಮುಖ ಕಾರಣ. ಆರ್ಥಿಕ ಇಲಾಖೆ ಎತ್ತಿದ್ದ ಆಕ್ಷೇಪಗಳನ್ನು ಮುಖ್ಯಮಂತ್ರಿಯವರೇ ನಿವಾರಿಸಿ, ಕಾಲೇಜುಗಳು ಆರಂಭವಾದ ಕೂಡಲೇ ನೇಮಕಾತಿ ಆದೇಶ ನೀಡುವಂತೆ ಸೂಚಿಸಿದ್ದಾರೆ’ ಎಂದರು.

‘ದಿನೇದಿನೆ ಕೋವಿಡ್‌ ಹೆಚ್ಚುತ್ತಿರುವುದರಿಂದ ಕಾಲೇಜುಗಳು ಆರಂಭವಾಗುವುದು ಇನ್ನೂ ತಡವಾಗಬಹುದು. ಹೀಗಾಗಿ ಈಗಲೇ ಆದೇಶ ಪತ್ರಗಳನ್ನು ನೀಡಬೇಕು’ ಎಂದು ಧರಣಿನಿರತರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಉಪ ಮುಖ್ಯಮಂತ್ರಿ, ‘ಕಾಲೇಜುಗಳನ್ನು ಅರಂಭ ಮಾಡಿ ಎಂದು ಈಗಾಗಲೇ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ, ರಾಜ್ಯ ಸರ್ಕಾರ ಸಿದ್ಧತೆ ಮಾಡುತ್ತಿದೆ. ಮೂಲಸೌಕರ್ಯಗಳ ತಯಾರಿ ಮಾಡಿಕೊಳ್ಳುತ್ತಿದೆ. ನಿಮಗೆ ಅನುಮಾನವೇ ಬೇಡ. ಕಾಲೇಜುಗಳು ಖಂಡಿತವಾಗಿಯೂ ಆರಂಭವಾಗುತ್ತವೆ. ಸರ್ಕಾರದ ಮೇಲೆ ನಂಬಿಕೆ ಇಡಿ’ ಎಂದು ಮನವಿ ಮಾಡಿದರು.

ಸರ್ಕಾರ ನಿಮ್ಮ ಪರವಾಗಿದೆ: ‘ಶೈಕ್ಷಣಿಕ ವರ್ಷ ನಿಲ್ಲಬಾರದು ಎಂಬ ಉದ್ದೇಶದಿಂದ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು, ಸಿಇಟಿ, ನೀಟ್‌ ಯಶಸ್ವಿಯಾಗಿ ನಡೆಸಿದೆ. ಯಾವುದೇ ಕಾರಣಕ್ಕೂ ಅಕಾಡೆಮಿಕ್‌ ವರ್ಷ ನಿಲ್ಲುವುದಿಲ್ಲ. ಶೈಕ್ಷಣಿಕ ಚಟುವಟಿಕೆ ನಿರಾತಂಕವಾಗಿ ನಡೆಯಲೇಬೇಕು. ಜತೆಗೆ ನಮ್ಮ ಸರ್ಕಾರವು ಶಿಕ್ಷಕರು, ಉಪನ್ಯಾಸಕರ ಪರವಾಗಿದೆ. ನಿಮ್ಮ ಬೇಡಿಕೆಯನ್ನು ಸ್ವತಃ ಮುಖ್ಯಮಂತ್ರಿ ಒಪ್ಪಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಹೇಳಿದರು.

‘ಆರ್ಥಿಕ ಇಲಾಖೆ ಎತ್ತಿದ್ದ ಆಕ್ಷೇಪಗಳ ನಡುವೆಯೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸುರೆಶ್‌ ಕುಮಾರ್‌ ಅವರ ಒತ್ತಾಸೆಯಿಂದ ಕೋವಿಡ್‌ ನಡುವೆಯೇ ಕೌನ್ಸೆಲಿಂಗ್‌ ನಡೆಸಲಾಗಿದೆ. ಉದ್ಯೋಗ ಸ್ಥಳವನ್ನೂ ತೋರಿಸಲಾಗಿದೆ. ಒಂದು ವರ್ಷದೊಳಗೆ ನೇಮಕಾತಿ ಆದೇಶ ಬೇಕು ಎನ್ನುವ ನಿಮ್ಮ ಆತಂಕ ಸರ್ಕಾರಕ್ಕೆ ಅರ್ಥವಾಗುತ್ತದೆ. ಯಾವುದೇ ಆತಂಕ ನಿಮಗೆ ಬೇಡ. ನಂಬಿಕೆ ಇಡಿ; ಧರಣಿ ಕೈಬಿಡಿ. ತರಗತಿಗಳು ಆರಂಭ ಆಗುತ್ತಿದ್ದಂತೆಯೇ ನೇಮಕಾತಿ ಆದೇಶ ನಿಮ್ಮನ್ನು ತಲುಪುತ್ತವೆ’ ಎಂದೂ ಭರವಸೆ ನೀಡಿದರು.

‘ಕೋವಿಡ್‌ ಕಾರಣದಿಂದ ದೇಶದ ಯಾವುದೇ ರಾಜ್ಯದಲ್ಲೂ ನೇಮಕಾತಿಗಳು ನಡೆಯುತ್ತಿಲ್ಲ. ರಾಜ್ಯದಲ್ಲೂ ಎಲ್ಲ ಇಲಾಖೆಗಳಲ್ಲಿ ಹೊಸ ನೇಮಕಾತಿಯನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಎಲ್ಲ ಅಡ್ಡಿಗಳನ್ನು ಬದಿಗೊತ್ತಿ ಒಪ್ಪಿಕೊಂಡಿದೆ’ ಎಂದೂ ವಿವರಿಸಿದರು.

ನಿರ್ದೇಶಕರ ಜತೆ ಮಾತುಕತೆ: ಇದೇ ವೇಳೆ, ಪಿಯುಸಿ ಮಂಡಳಿ ನಿರ್ದೇಶಕಿ ಸ್ನೇಹಾಲ್‌ ಅವರ ಜತೆ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಮಾತುಕತೆ ನಡೆಸಿದರು.

ಧರಣಿ ಕೈಬಿಡಿ: ಸುರೇಶ್ ಕುಮಾರ್

‘ಪಿಯು ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಬಗ್ಗೆ ಸರ್ಕಾರಕ್ಕೆ ಕಾಳಜಿಯಿದೆ. ಕಾಲೇಜುಗಳು ಆರಂಭವಾದ ಕೂಡಲೇ ನೇಮಕಾತಿ ಆದೇಶ ನೀಡಲಾಗುವುದು. ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಕ್ವಾರಂಟೈನ್‌ನಲ್ಲಿರುವ ಆಸ್ಪತ್ರೆಯಿಂದಲೇ ಧರಣಿ ನಿರತರ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಕೂಡಾ ಈಗಾಗಲೇ ಭರವಸೆ ನೀಡಿದ್ದು, ಯಾವುದೇ ಆತಂಕಕ್ಕೆ ಅವಕಾಶವಿಲ್ಲ. ಸರ್ಕಾರದ ಭರವಸೆಯ ಕಾರಣ ಧರಣಿ ಕೈಬಿಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು