ಬುಧವಾರ, ಸೆಪ್ಟೆಂಬರ್ 22, 2021
23 °C
ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳ ಎಲ್ಲ ಘಟಕಗಳು ಬಂದ್‌

PV Web Exclusive: ಶಾಖೋತ್ಪನ್ನ ವಿದ್ಯುತ್‌ ಈಗ ದುಬಾರಿ!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ರಾಯಚೂರು: ಶಾಖೋತ್ಪನ್ನದಿಂದ ವಿದ್ಯುತ್‌ ಪಡೆಯಲು ಕಲ್ಲಿದ್ದಲು ಮತ್ತು ನೀರಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕು ಎನ್ನುವ ಕಾರಣ ರಾಜ್ಯದ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳ ಘಟಕಗಳನ್ನೆಲ್ಲ ಎರಡು ತಿಂಗಳುಗಳಿಂದ ಕಾರ್ಯಸ್ಥಗಿತ ಮಾಡಿಸಲಾಗಿದೆ.

ಅಗ್ಗವಾಗಿ ಸಿಗುವ ಸೌರಶಕ್ತಿ, ಪವನಶಕ್ತಿ ಹಾಗೂ ಜಲಶಕ್ತಿ ಮೂಲಗಳಿಂದ ವಿದ್ಯುತ್‌ ಪಡೆಯಲು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್‌)ವು ಆದ್ಯತೆ ನೀಡಿದೆ. ಹವಾಮಾನ ವೈಪರೀತ್ಯ ಉಂಟಾಗಿ ನಿರೀಕ್ಷಿತ ಪ್ರಮಾಣದಲ್ಲಿ ಬಿಸಿಲು, ಗಾಳಿ, ಜಲಾಶಯಗಳಲ್ಲಿ ನೀರಿನ ಸಂಗ್ರಹ ಖಾಲಿಯಾದರೆ ಮಾತ್ರ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳ ಘಟಕಗಳನ್ನು ಪ್ರಾರಂಭಿಸಲು ಎಂದು ಕೊನೆಯ ಆಯ್ಕೆ ಮಾಡಿಕೊಳ್ಳಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಸೌರವಿದ್ಯುತ್‌ ಹಾಗೂ ಪವನವಿದ್ಯುತ್‌ ಜಾಲ ಬಹಳ ಹೆಚ್ಚಾಗಿದ್ದು, ಒಟ್ಟು 12,119 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಬಂದಿದೆ. ಸದ್ಯ ರಾಜ್ಯದಲ್ಲಿ 11,300 ಮೆಗಾವಾಟ್‌ ಪ್ರತಿದಿನದ ವಿದ್ಯುತ್‌ ಬೇಡಿಕೆಯಲ್ಲಿ ಶೇ 75 ರಷ್ಟು ಸೌರ ಮತ್ತು ಪವನ ವಿದ್ಯುತ್‌ ಮೂಲಗಳಿಂದ ಪೂರೈಕೆ ಆಗುತ್ತಿದೆ. ಮಳೆಗಾಲ ಮುಕ್ತಾಯ ಹಂತದಲ್ಲಿದ್ದು ಜಲವಿದ್ಯುತ್‌ ಕೇಂದ್ರಗಳನ್ನು ಕೂಡಾ ಹಂತಹಂತವಾಗಿ ಕಾರ್ಯಸ್ಥಗಿತ ಮಾಡಲಾಗುತ್ತಿದೆ. ಆದರೂ ಶಾಖೋತ್ಪನ್ನ ವಿದ್ಯುತ್‌ಗೆ ಬೇಡಿಕೆ ಇಲ್ಲ.

1,720 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌) ಸ್ಥಾಪನೆಯಾದ ನಾಲ್ಕು ದಶಕಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಲ್ಲ ಘಟಕಗಳನ್ನು ಜೂನ್‌ 5 ರಿಂದ ಸ್ಥಗಿತ ಮಾಡಲಾಗಿದೆ. 1,700 ಮೆಗಾವಾಟ್‌ ಸಾಮರ್ಥ್ಯದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಬಿಟಿಪಿಎಸ್‌)ದ ಮೂರು ಘಟಕಗಳು ಏಪ್ರಿಲ್‌ನಿಂದ ಸ್ಥಗಿತವಾಗಿವೆ. 1,600 ಮೆಗಾವಾಟ್‌ ಸಾಮರ್ಥ್ಯದ ಯರಮರಸ್‌ ಸೂಪರ್‌ಕ್ರಿಟಿಕಲ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ವೈಟಿಪಿಎಸ್‌) ಕೂಡಾ ದೀರ್ಘಕಾಲ ಸ್ಥಗಿತವಾಗಿತ್ತು. ಇದರ ನಿರ್ವಹಣೆಯನ್ನು ಈಚೆಗೆ ಖಾಸಗಿ ಕಂಪೆನಿಗೆ ವಹಿಸಿದ ಬಳಿಕ ಒಂದನೇ ಘಟಕ ಮಾತ್ರ ಕಾರ್ಯ ಮಾಡುತ್ತಿದೆ. ಉಡುಪಿ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಯುಪಿಸಿಎಲ್‌) ಅದಾನಿ ಕಂಪೆನಿ ಸಮೂಹದಲ್ಲಿದೆ.

ಉದ್ಯೋಗಿಗಳ ವರ್ಗಾವಣೆ: ವೈಟಿಪಿಎಸ್‌ ನಿರ್ವಹಣೆ ಗುತ್ತಿಗೆ ಪಡೆದಿರುವ ಹೈದರಾಬಾದ್‌ ಖಾಸಗಿ ಕಂಪೆನಿಯು ಈಗಾಗಲೇ ಕೆಲಸ ಪ್ರಾರಂಭಿಸಿದೆ. ಇದರಿಂದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ 500 ಕ್ಕೂ ಹೆಚ್ಚು ಕಾಯಂ ಉದ್ಯೋಗಿಗಳನ್ನು ಬೇರೆಬೇರೆ ವಿದ್ಯುತ್‌ ಉತ್ಪಾದನಾ ಕೇಂದ್ರಗಳಿಗೆ ಕೆಪಿಸಿಎಲ್‌ ವರ್ಗಾವಣೆ ಮಾಡಲಾಗಿದೆ. ನೂರಾರು ಹೊರಗುತ್ತಿಗೆ ನೌಕರರನ್ನು ಒಂದೂವರೆ ವರ್ಷಗಳ ಹಿಂದೆಯೇ ಕೆಲಸದಿಂದ ತೆಗೆದುಹಾಕಿದ್ದು, ಈಗಲೂ ಅವರು ಹೋರಾಟ ಮುಂದುವರಿಸಿದ್ದಾರೆ.

ಉದ್ಯೋಗ ಕಡಿತ: ಆರ್‌ಟಿಪಿಎಸ್‌ ಆಡಳಿತಾತ್ಮಕ ಹಾಗೂ ದಾಖಲೆ ಬರೆಯುವ ವಿಭಾಗಗಳಲ್ಲಿ ಮಾತ್ರ ಎಂದಿನಂತೆ ಕೆಲಸ ಮಾಡುತ್ತಿದ್ದಾರೆ. ಕಲ್ಲಿದ್ದಲು ಸಾಗಣೆ, ಸ್ವಚ್ಛತೆ ಹಾಗೂ ಬೂದಿ ಕ್ಲಿಯರ್‌ ಮಾಡುವುದು ಸೇರಿ ವಿವಿಧೆಡೆ ಕೆಲಸ ಮಾಡುತ್ತಿದ್ದ 1,500 ದಿನಗೂಲಿಗಳಿಗೆ ಕೆಲಸವಿಲ್ಲ. ವಿದ್ಯುತ್‌ ಉತ್ಪಾದನೆ ಸ್ಥಗಿತವಾಗಿದ್ದರಿಂದ ಕಲ್ಲಿದ್ದಲು ಹೊತ್ತ ಸರಕುಸಾಗಣೆ ರೈಲು ಬರುತ್ತಿಲ್ಲ. ಹಾರುಬೂದಿ ನಿರ್ವವಣೆಯೂ ಇಲ್ಲದೆ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ. ಹಾರುಬೂದಿ ಪಡೆದು ಇಟ್ಟಿಗೆ ತಯಾರಿಸುತ್ತಿದ್ದ ಕೈಗಾರಿಕೆಗಳು ಸ್ಥಗಿತವಾಗಿವೆ.

ಶಾಖೋತ್ಪನ್ನ ವಿದ್ಯುತ್‌ ಅಪ್ರಸ್ತುತ: ಉಚಿತವಾಗಿ ಸಿಗುವ ನವೀಕರಿಸಬಹುದಾದ ಶಕ್ತಿಯ ಮೂಲಗಳಾದ ಸೂರ್ಯ, ಗಾಳಿ ಹಾಗೂ ಜಲದಿಂದ ವಿದ್ಯುತ್‌ ಉತ್ಪಾದನೆ ಮಾಡುವ ಸಾಮರ್ಥ್ಯ ವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸಹೊಸ ಯೋಜನೆಗಳನ್ನು ಘೋಷಿಸಿವೆ. ಸೌರಶಕ್ತಿಯಿಂದ ವಿದ್ಯುತ್‌ ಉತ್ಪಾದಿಸಲು ಸಹಾಯಧನ ನೀಡುತ್ತಿವೆ. ಸೌರಶಕ್ತಿ ಆಧಾರಿತ ಉಪಕರಣಗಳು ಮಾರುಕಟ್ಟೆಗೆ ಬರುತ್ತಿದ್ದು, ಮುಂಬರುವ ದಿನಗಳಲ್ಲಿ ದುಬಾರಿ ಮೂಲವಾಗಿರುವ ಶಾಖೋತ್ಪನ್ನ ವಿದ್ಯುತ್‌ ಪ್ರಸ್ತುತತೆ ಕಳೆದುಕೊಳ್ಳಬಹುದು ಎನ್ನುವ ವಿಶ್ಲೇಷಣೆ ಅರಂಭವಾಗಿದೆ.

ವಿದ್ಯುತ್‌ ಉತ್ಪದನಾ ಸಾಮರ್ಥ್ಯ: ರಾಜ್ಯವು ವಿವಿಧ ಮೂಲಗಳಿಂದ ಒಟ್ಟು 23,604 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅದರಲ್ಲಿ ಶಾಖೋತ್ಪನ್ನದಿಂದ 7,680 (ಶೇ 32), ಜಲವಿದ್ಯುತ್‌ನಿಂದ 3,666 (ಶೇ 15), ಸೌರವಿದ್ಯುತ್‌ನಿಂದ 7,796 (ಶೇ 30), ಪವನವಿದ್ಯುತ್‌ನಿಂದ 4,823 (ಶೇ 22) ಹಾಗೂ ಬಯೋಮಾಸ್‌ನಿಂದ 140 (ಶೇ 06) ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಬಹುದಾಗಿದೆ.

ಸದ್ಯಕ್ಕೆ ವಿದ್ಯುತ್‌ ಬಳಕೆ: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್‌ 4 ರಂದು ರಾಜ್ಯದಲ್ಲಿ ಗರಿಷ್ಠ 7,735 ಮೆಗವಾಟ್‌ ವಿದ್ಯುತ್‌ ಬೇಡಿಕೆ ಇತ್ತು. ಅದರಲ್ಲಿ 409 ಮೆಗಾವಾಟ್‌ ಶಾಖೋತ್ಪನ್ನ ವಿದ್ಯುತ್‌, ಜಲವಿದ್ಯುತ್‌ 1,055 ಮೆಗವಾಟ್‌, ನವೀಕರಿಸಬಹುದಾದ ವಿದ್ಯುತ್‌ 3,570 ಮೆಗಾವಾಟ್‌ ಹಾಗೂ ಕೆಂದ್ರದ ಗ್ರಿಡ್‌ನಿಂದ 2,695 ಮೆಗವಾಟ್‌ ವಿದ್ಯುತ್‌ ಪಡೆದು ಪೂರೈಕೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು