ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 12,500 ಕಂಪ್ಯೂಟರ್

ಸರ್ಕಾರದ ಜೊತೆ ಕೈಜೋಡಿಸಿದ ಕಾಗ್ನಿಜೆಂಟ್, ರೋಟರಿ
Last Updated 26 ಫೆಬ್ರುವರಿ 2021, 11:15 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ‘ಶಿಕ್ಷಣಕ್ಕೆ ಸಹಾಯ’ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 12,500 (ಡಿ- ಬಾಂಡೆಡ್ ಡೆಸ್ಕ್‌ ಟಾಪ್) ಕಂಪ್ಯೂಟರ್‌ಗಳನ್ನು ನೀಡುವ ಕುರಿತಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕಾಗ್ನಿಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ರೋಟರಿ ಕ್ಲಬ್ ವೈಟ್‌ಫೀಲ್ಡ್ ಸೆಂಟ್ರಲ್ (ಜಿಲ್ಲೆ 1390) ಜೊತೆ ಒಪ್ಪಂದ ಮಾಡಿಕೊಂಡಿದೆ.

ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಉಪಸ್ಥಿತಿಯಲ್ಲಿ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ (ಡಿಸಿಟಿಇ) ಆಯುಕ್ತ ಆಯುಕ್ತ ಪ್ರದೀಪ್ ಪ್ರಭಾಕರ್, ಕಾಗ್ನಿಜೆಂಟ್ ಸಂಸ್ಥೆಯ ಬೆಂಗಳೂರು ಕೇಂದ್ರದ ಮುಖ್ಯಸ್ಥ ನವೀನ್ ರಾವ್ ಮತ್ತು ರೋಟರಿ ಕ್ಲಬ್‌ ಜಿಲ್ಲಾ ಗರ್ವನರ್ ನಾಗೇಂದ್ರ ಪ್ರಸಾದ್ ಒಪ್ಪಂದಕ್ಕೆ ಸಹಿ ಹಾಕಿದರು.

ಬಳಿಕ ಮಾತನಾಡಿದ ಅಶ್ವತ್ಥನಾರಾಯಣ, ‘ನಗರ- ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ನಡುವೆ ಡಿಜಿಟಲ್‌ ಅಂತರ ಆಳಿಸಿ ಹಾಕಲು ಈ ಕಾರ್ಯಕ್ರಮ ಪೂರಕವಾಗಲಿದೆ. ಇದರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು.

‘ಈ ಕಾರ್ಯಕ್ರಮದ ಅಡಿಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕಾರ್ಪೊರೇಟ್ ಕಂಪನಿಗಳು ಮತ್ತು ದಾನಿಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಕಲಿಕೆ ಬಗ್ಗೆ ತರಬೇತಿ ನೀಡಲಾಗುವುದು. ಬೋಧಕ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮಗಳು, ಡಿಜಿಟಲ್ ಬೋಧನೆಯ ಮೂಲಕ ಆಧುನಿಕ ವಿಧಾನದಲ್ಲಿ ಪ್ರಾಧ್ಯಾಪಕರು ಅಪ್‌ಗ್ರೇಡ್‌ ಆಗಲು ಇದರಿಂದ ಸಾಧ್ಯವಿದೆ. ಜತೆಗೆ, ಡಿಜಿಟಲ್ ಕಲಿಕೆ ವ್ಯವಸ್ಥೆಯನ್ನ ಅಳವಡಿಸಿಕೊಳ್ಳಲು ಸರ್ಕಾರಿ ಕಾಲೇಜುಗಳನ್ನು ಸಜ್ಜುಗೊಳಿಸುವ ಅಂಶವೂ ಸೇರಿದೆ’ ಎಂದರು.

30,000 ಕಂಪ್ಯೂಟರ್‌ ಅಗತ್ಯ: ‘ಸರ್ಕಾರಿ ಕಾಲೇಜುಗಳಿಗೆ ಸುಮಾರು 30 ಸಾವಿರ ಕಂಪ್ಯೂಟರ್‌ಗಳು ಅಗತ್ಯ ಇದ್ದು, ಈ ಪೈಕಿ ಕಾಗ್ನಿಜೆಂಟ್ ಸಂಸ್ಥೆ 12,500 ಕಂಪ್ಯೂಟರ್‌ಗಳನ್ನು ಒದಗಿಸಿದೆ. ಸುಮಾರು ₹ 50 ಕೋಟಿ ಯೋಜನೆ ಇದಾಗಿದೆ. ಡಿಜಿಟಲ್ ತಾರತಮ್ಯವನ್ನು ನಿವಾರಿಸುವ ಉದ್ದೇಶಕ್ಕೆ ಖಾಸಗಿ ಸಂಘ ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸುತ್ತಿರುವುದು ಸಂತಸದ ವಿಷಯ’ ಎಂದರು.

‘ಕಾಗ್ನಿಜೆಂಟ್ ಸಂಸ್ಥೆ ಡಿ-ಬಾಂಡೆಡ್, ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ಒದಗಿಸಲು ಸ್ವಯಂಪ್ರೇರಿತವಾಗಿ ಮುಂದೆ ಬಂದಿದೆ. ಇದರೊಂದಿಗೆ ವಿದ್ಯಾರ್ಥಿಗಳ ಬಳಕೆಗಾಗಿ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ರೋಟರಿ ಕ್ಲಬ್‌ನವರು ವಿಂಡೋಸ್ ಓಎಸ್ ಒದಗಿಸಲಿದ್ದಾರೆ. ನಂತರ ಕಂಪ್ಯೂಟರ್‌ಗಳನ್ನು ನಿಗದಿತ ಕಾಲೇಜುಗಳಿಗೆ ತಲುಪಿಸಲಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ನವೀನ್ ರಾವ್ ಮಾತನಾಡಿ, ‘ಕಾಲೇಜು ಶಿಕ್ಷಣ ಇಲಾಖೆಯ ನೇತೃತ್ವದ ಈ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ. ಡಿಜಿಟಲ್‌ ಕಲಿಕೆ ಉತ್ತೇಜಿಸುವ ಈ ಕಾರ್ಯಕ್ರಮ ಅರ್ಥಪೂರ್ಣವಾದದ್ದು’ ಎಂದರು. ‘ಡಿಜಿಟಲ್‌ ವೇದಿಕೆಯಲ್ಲಿರುವ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ ಮೂಲಕ ಕಲಿಯುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಕಾರ್ಯಕ್ರಮ ಪೂರಕ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತ’ ಎಂದು ನಾಗೇಂದ್ರ ಪ್ರಸಾದ್ ಹೇಳಿದರು.

ಪ್ರದೀಪ್ ಪ್ರಭಾಕರ್ ಅವರು ಯೋಜನೆ ಕುರಿತು ಮಾಹಿತಿ‌ ನೀಡಿದರು.‌ ಕಾಗ್ನಿಜೆಂಟ್ ಸಂಸ್ಥೆಯ ನಿರ್ದೇಶಕ (ಸಿಎಸ್‌ಆರ್) ದೀಪಕ್ ಪ್ರಭು, ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಹರಿಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT