ಗುರುವಾರ , ಜುಲೈ 7, 2022
23 °C
ತರಗತಿಯೊಳಗೆ ಮಾತ್ರವೇ ಹಿಜಾಬ್‌ ನಿರ್ಬಂಧ: ಅಡ್ವೊಕೇಟ್ ಜನರಲ್‌

‘ಹಿಜಾಬ್‌ ನಿರ್ಬಂಧ: ಸಿ.ಡಿ.ಸಿಗಳ ವಿವೇಚನಾಧಿಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ‘ಹಿಜಾಬ್‌ ಧರಿಸುವುದು ಬಿಡುವುದು ಮುಸ್ಲಿಂ ಮಹಿಳೆಯರ ಇಚ್ಛೆಗೆ ಬಿಟ್ಟ ವಿಚಾರ. ಆದರೆ, ಶಿಕ್ಷಣ ಸಂಸ್ಥೆಗಳ ಘನತೆ ಮತ್ತು ಶಿಸ್ತು ಕಾಪಾಡುವ ದೃಷ್ಟಿಯಿಂದ ಸರ್ಕಾರ ಅದನ್ನು ಧರಿಸಿ ತರಗತಿಯೊಳಗೆ ಬರದಂತೆ ಕಾಲೇಜು ಆಡಳಿತ ಮಂಡಳಿಗಳು (ಸಿಡಿಸಿ) ಕಟ್ಟಳೆ ಹೇರಿವೆ. ಇದು ಕೇವಲ ಶಿಕ್ಷಣ ಸಂಸ್ಥೆಗಳ ಅದರಲ್ಲೂ ತರಗತಿಗಳ ಒಳಗಿನ ಪ್ರವೇಶಕ್ಕೆ ಮಾತ್ರವೇ ಇರುವಂತಹ ನಿರ್ಬಂಧವಾಗಿದ್ದು, ಬೇರೆಡೆ ಅವರ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳುವ ಸ್ವಾತಂತ್ರ್ಯ ಇದ್ದೇ ಇದೆ’ ಎಂದು ಅಡ್ವೊಕೇಟ್ ಜನರಲ್‌ ಹೈಕೋರ್ಟ್‌ಗೆ ತಿಳಿಸಿದರು. 

ಹಿಜಾಬ್ ಧರಿಸಿ ತರಗತಿ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕೆಲ ಶಾಲೆ-ಕಾಲೇಜು ಆಡಳಿತ ಮಂಡಳಿಗಳ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಎಲ್ಲ ರಿಟ್ ಅರ್ಜಿಗಳ ವಿಚಾರಣೆಯನ್ನು, ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಜೆ.ಎಂ.ಖಾಜಿ ಅವರಿದ್ದ ಮೂವರು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.

ವಾದ ಮುಂದುವರಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ಹಿಜಾಬ್ ನಿರ್ಬಂಧ ಕುರಿತಂತೆ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಶಿಕ್ಷಣ ಸಂಸ್ಥೆಗಳ ಶಿಸ್ತಿನ ಹಿತದೃಷ್ಟಿಯಿಂದ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್‌ ಧರಿಸುವುದಕ್ಕೆ ಒಂದಷ್ಟು ಕಟ್ಟಳೆ ವಿಧಿಸಲಾಗಿದೆ. ಈ ನಿರ್ಬಂಧದ ಅಧಿಕಾರವೂ ಆಯಾ ಶಿಕ್ಷಣ ಸಂಸ್ಥೆಗಳ ಕಾಲೇಜು ಆಡಳಿತ ಮಂಡಳಿಗಳ (ಸಿಡಿಸಿ) ವಿವೇಚನೆಗೆ ಒಳಪಟ್ಟ ವಿಚಾರವಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಸಂವಿಧಾನದಲ್ಲಿ ಉಲ್ಲೇಖಿಸಲಾದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಆಚರಣೆಗೆ ಸಂಬಂಧಿಸಿದ ವಿಧಿಗಳನ್ನು ನಾವು ಏಕಕಾಲಕ್ಕೆ ಒಂದೇ ಹಳಿಯಲ್ಲಿ ತಳ್ಳಿಕೊಂಡು ಹೋಗುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ 19 (1) (ಎ) ಮತ್ತು ಧಾರ್ಮಿಕ ಆಚರಣೆಯ 25ನೇ ವಿಧಿಗಳನ್ನು ಬೇರೆ ಬೇರೆಯಾಗಿಯೇ ನೋಡಬೇಕು. ಹಿಜಾಬ್‌ ಧರಿಸಿಕೊಂಡು ಬರುವುದನ್ನು ನಿಷೇಧಿಸುವ ಮೂಲಕ ಸಂವಿಧಾನದ 15ನೇ ವಿಧಿಯನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ’ ಎಂದರು. 

‘ಸಾಂಸ್ಥಿಕ ಶಿಸ್ತುಗಳನ್ನು ಪಾಲಿಸುವ ಸಂದರ್ಭದಲ್ಲಿ ವೈಯಕ್ತಿಕ ಆಚರಣೆಗಳಿಗೆ ಅವಕಾಶವಿರುವುದಿಲ್ಲ. ಆದರೆ, ಶಾಲೆವರೆಗೂ ಹಿಜಾಬ್‌ ಹಾಕಿಕೊಂಡು ಬರಲು ಅಭ್ಯಂತರವಿಲ್ಲ. ಆದಾಗ್ಯೂ, ಹಿಜಾಬ್ ಧರಿಸುವುದನ್ನು ಮಹಿಳೆಯ ಆಯ್ಕೆಗೇ ಬಿಡಬೇಕು. ಕಡ್ಡಾಯಗೊಳಿಸಬಾರದು. ಕೆಲವರು ಹಿಜಾಬ್ ಧರಿಸಲು ಇಷ್ಟಪಡದೇ ಇರಬಹುದು. ಇಂತಹ ಸಂದರ್ಭದಲ್ಲಿ ಸಂವಿಧಾನದ 25ನೇ ವಿಧಿಯ ಅನುಸಾರ ಹಿಜಾಬ್ ಧರಿಸುವುದು ಧಾರ್ಮಿಕ ಅಗತ್ಯ ಆಚರಣೆ ಎಂದು ಹೇಳಿದರೆ ಅದು 19(1)(ಎ) ಅಡಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗುತ್ತದೆ’ ಎಂದು ವಿಶ್ಲೇಷಿಸಿದರು.

ಉಡುಪಿ ಪಿ.ಯು ಶಿಕ್ಷಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಆರ್. ವೆಂಕಟರಮಣಿ, ‘ಸಾರ್ವಜನಿಕ ಪ್ರದೇಶಕ್ಕೂ ಶಾಲೆಯ ಆವರಣದೊಳಗಿನ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ವಿದ್ಯಾರ್ಥಿಗಳು ಶಿಕ್ಷಣದ ಉದ್ದೇಶಕ್ಕಾಗಿ ಶಿಸ್ತು, ಸುವ್ಯವಸ್ಥೆ ಪಾಲನೆ ಮಾಡಬೇಕು. ಈ ವಿಷಯದಲ್ಲಿ ವಿದ್ಯಾರ್ಥಿಗಳು ಸ್ವತಂತ್ರ ಪ್ರಜ್ಞೆಯನ್ನು ಹೊಂದಿರಬೇಕು. ಒಂದು ಧರ್ಮ ದೊಡ್ಡದು ಮತ್ತೊಂದು ಚಿಕ್ಕದು ಎಂಬುದಿಲ್ಲ’ ಎಂದರು. 

ವಿಲೇವಾರಿ: ‘ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿರುವ ಕ್ರಮ ಸರಿಯಿಲ್ಲ’ ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ ನಾವದಗಿ, ‘ಈ ಸಂಸ್ಥೆಗಳಿಗೆ ಸರ್ಕಾರ ಯಾವುದೇ ಆದೇಶ ನೀಡಿಲ್ಲ. ಆಯಾ ಶಿಕ್ಷಣ ಸಂಸ್ಥೆಗಳೇ ವಸ್ತ್ರಸಂಹಿತೆ ನಿಗದಿ ಮಾಡುತ್ತವೆ. ಸರ್ಕಾರ ಸಮವಸ್ತ್ರ ನಿಗದಿಪಡಿಸಿಲ್ಲ’ ಎಂದು ಸ್ಪಷ್ಟಪಡಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ. ವಿಚಾರಣೆಯನ್ನು ಬುಧವಾರಕ್ಕೆ (ಫೆ.23) ಮುಂದೂಡಲಾಗಿದೆ.

* ಅರ್ಜಿದಾರರು ಹಾಗೂ ಪ್ರತಿವಾದಿಗಳು ತಮ್ಮ ವಾದವನ್ನು ಕ್ಷಿಪ್ರವಾಗಿ ಮಂಡಿಸಿ. ಲಿಖಿತ ಆಕ್ಷೇಪಣೆಗಳನ್ನು ತ್ವರಿತವಾಗಿ ಸಲ್ಲಿಸಿ. ಸಾಧ್ಯವಾದರೆ ಈ ವಾರವೇ ಪ್ರಕರಣವನ್ನು ಇತ್ಯರ್ಥಪಡಿಸೋಣ.

-ಋತುರಾಜ್‌ ಅವಸ್ಥಿ, ಮುಖ್ಯ ನ್ಯಾಯಮೂರ್ತಿ

ಅಡ್ವೊಕೇಟ್‌ ಜನರಲ್‌ ಹೇಳಿದ್ದು

* ಕುರಾನ್‌ನಲ್ಲಿರುವ ಅಂಶಗಳ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಸಾರ್ವಜನಿಕ ಪ್ರದೇಶಗಳಲ್ಲಿನ ಆಚರಣೆಗಳನ್ನು ಶಿಕ್ಷಣ ಸಂಸ್ಥೆಗಳ ಒಳಗೂ ಆಚರಿಸುತ್ತೇವೆ ಎನ್ನುವುದು ಸರಿಯಲ್ಲ.

* ವಿದ್ಯಾರ್ಥಿಗಳಲ್ಲಿ ಶಿಸ್ತು ತರಲು ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ಕೆಲ ನಿಯಮಗಳನ್ನು ಹೊಂದಿರುತ್ತವೆ. ಅವು ಹೇಗೆ ಆಡಳಿತ ಹೇಗೆ ನಡೆಸಬೇಕು ಎಂಬ ವಿಚಾರಗಳಲ್ಲಿ ತಲೆ ತೂರಿಸಬಾರದು. ಹಕ್ಕುಗಳ ಉಲ್ಲಂಘನೆಯಾದಾಗ ಮಾತ್ರವೇ ಮಧ್ಯಪ್ರವೇಶಿಸಬಹುದು.

ನ ಮುಂಹ್‌ ಚುಪಾಕೆ ಜೀಯೊ...!

ನಾವದಗಿ ಅವರು ತಮ್ಮ ವಾದ ಮುಕ್ತಾಯಗೊಳಿಸುವ ಮುನ್ನ 1970ರ ದಶಕದ ಬಾಲಿವುಡ್‌ನ ಹಿಂದಿ ಚಲನಚಿತ್ರ ‘ಹಮ್‌ರಾಜ್‌‘ನ ಹಾಡಿನ ಸಾಲುಗಳನ್ನು ಭಾವುಕರಾಗಿ ಉದ್ಧರಿಸಿದರು.

ಸಾಹಿರ್‌ ಲೂಧಿಯಾನ್ವಿ ವಿರಚಿತ ಮತ್ತು ಖ್ಯಾತ ಗಾಯಕ ಮಹೇಂದ್ರ ಕಪೂರ್ ಹಾಡಿರುವ, ‘ನ ಮುಂಹ್‌ ಚುಪಾಕೆ ಜೀಯೊ, ಔರ್‌ ನ ಸರ್ ಝುಕಾ ಕೆ ಜೀಯೊ, ಗಮೋಂ ಕಾ ದೌರ್‌ ಭಿ ಆಯೇ ತೊ ಮುಸ್ಕುರಾ ಕೆ ಜೀಯೊ (ಮುಖ ಮುಚ್ಚಿಕೊಂಡು ಬದುಕಬೇಡ, ತಲೆತಗ್ಗಿಸಿ ಬದುಕಬೇಡ, ದುಃಖದ ಘಳಿಗೆಗಳು ಎದುರಾದರೂ ಹಸನ್ಮುಖಿಯಾಗಿಯೇ ಬದುಕು) ಎಂಬ ಸಾಲುಗಳನ್ನು ಹೇಳಿ ತಮ್ಮ ಆಸನದಲ್ಲಿ ಕುಳಿತರು.

ಆಚರಣೆ–ಸಂಪ್ರದಾಯ ಭಿನ್ನಭಿನ್ನ

‘ಧಾರ್ಮಿಕವಾದ ಕಡ್ಡಾಯ ಆಚರಣೆಗಳಿಗೂ ಮತ್ತು ಧಾರ್ಮಿಕ ಸಂಪ್ರದಾಯಗಳಿಗೂ ವ್ಯತ್ಯಾಸವಿದೆ’ ಎಂದು ಶಿಕ್ಷಣ ಸಂಸ್ಥೆಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಎಸ್ ನಾಗಾನಂದ್ ಹೇಳಿದರು.

‘ಬ್ರಾಹ್ಮಣ ಸಮುದಾಯದ ಆಚರಣೆಗಳ ಪ್ರಕಾರ ದಿನದಲ್ಲಿ ಮೂರೂ ಹೊತ್ತು ಸಂಧ್ಯಾವಂದನೆ ಮಾಡಬೇಕು. ಇದನ್ನೇ ನೆಪವನ್ನಾಗಿಸಿಕೊಂಡು ನಾನು, ವಾದ ಮಾಡುವ ಸಮಯದಲ್ಲಿ ಸ್ವಾಮಿ, ಸಂಧ್ಯಾವಂದನೆ ಸಮಯವಾಯಿತು, ಮುಗಿಸಿಕೊಂಡು ಬಂದು ವಾದ ಮಾಡುತ್ತೇನೆ ತಡೆಯಿರಿ ಎಂದು ಹೇಳಬಹುದೇ, ಒಂದು ವೇಳೆ ನನ್ನ ಈ ಮನವಿಯನ್ನು ನ್ಯಾಯಾಲಯ ಒಪ್ಪಲಿಲ್ಲವೆಂದಾದರೆ ಅದು ನನ್ನ ಧಾರ್ಮಿಕ ಅಗತ್ಯ ಆಚರಣೆಯ ಹಕ್ಕನ್ನು ಉಲ್ಲಂಘನೆ ಎಂದು ವಾದಿಸಬಹುದೇ’ ಎಂದು ಪ್ರಶ್ನಿಸಿದರು.

‘ಹಿಂದೂ ಧರ್ಮದ ಕೆಲವು ಸಮುದಾಯದವರು ತಾಳಿಯನ್ನು ಬಳಸುವುದಿಲ್ಲ, ಮತ್ತೂ ಕೆಲವು ಕಡೆ ಕಾಲುಂಗುರ ಧರಿಸುವುದಿಲ್ಲ. ಇನ್ನೂ ಕೆಲವು ಸಮುದಾಯದ ಮದುವೆಗಳಲ್ಲಿ ಸಪ್ತಪದಿಯನ್ನೇ ತುಳಿಯುವುದಿಲ್ಲ. ಧಾರ್ಮಿಕ ಆಚರಣೆಗಳು ಹಾಗೂ ಸಂಪ್ರದಾಯಗಳನ್ನು ನಾವು ಗೌರವಿಸುತ್ತೇವೆ. ಹಾಗೆಂದು ಅವನ್ನು ಎಲ್ಲೆಡೆ ಆಚರಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.

‘ಹಿಜಾಬ್‌ ತೆಗೆದಿಡಲು ವ್ಯವಸ್ಥೆ ಕಲ್ಪಿಸಿ’

ಬೆಂಗಳೂರು: ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಸೂಚಿಸಿ‌ದ ವಸ್ತ್ರ ಸಂಹಿತೆ ಅಳವಡಿಸಿಕೊಂಡ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸಿ ಬರುವ ವಿದ್ಯಾರ್ಥಿನಿಯರು, ಹಿಜಾಬ್‌ ತೆಗೆದು ತರಗತಿ ಪ್ರವೇಶಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.

ಈ ಬಗ್ಗೆ ಮಂಗಳವಾರ ಸುತ್ತೋಲೆ ಹೊರಡಿಸಿರುವ ಇಲಾಖೆ, ‘ಹೈಕೋರ್ಟ್‌ ಮಧ್ಯಂತರ ಆದೇಶದಲ್ಲಿ, ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಸೂಚಿಸಿ‌ದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸಿ ವಿದ್ಯಾರ್ಥಿನಿಯರು ತರಗತಿ ಪ್ರವೇಶಿಸದಂತೆ ಸೂಚಿಸಿದೆ. ಹೀಗಾಗಿ, ಹಿಜಾಬ್‌ ಧರಿಸಿ ಬಂದವರು ಅದನ್ನು ತೆಗೆದು ತರಗತಿಗೆ ತೆರಳಲು ಅನುಕೂಲ ಆಗುವಂತೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಬೇಕು ಎಂದು ಎಲ್ಲ ಶಾಲಾ, ಕಾಲೇಜುಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಇಲಾಖೆ ಸೂಚಿಸಿದೆ.

ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಪೀಠವು ಜ. 10ರಂದು ಮಧ್ಯಂತರ ಆದೇಶ ನೀಡಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು