ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಸಲಹೆ’

ಆರು ಕಮಾಂಡರ್ ಸೆಂಟರ್ ಸ್ಥಾಪನೆ– ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 6 ಅಕ್ಟೋಬರ್ 2022, 15:40 IST
ಅಕ್ಷರ ಗಾತ್ರ

ಬೆಂಗಳೂರು: ‘ವೈದ್ಯರ ತಂಡವು ಟೆಲಿಮೆಡಿಸಿನ್ ವ್ಯವಸ್ಥೆಯ ಮೂಲಕ ಆರೋಗ್ಯ ಕೇಂದ್ರಗಳಿಗೆ ಸಲಹೆ ಸೂಚನೆಗಳನ್ನು ನೀಡಲು ಆರು ಕಮಾಂಡರ್ ಸೆಂಟರ್‌ಗಳನ್ನು ನಿರ್ಮಿಸಿ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಉಪಕೇಂದ್ರ ಹಾಗೂ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ 50 ಹಾಸಿಗೆಗಳ ತೀವ್ರ ನಿಗಾ ಘಟಕವನ್ನು ಉದ್ಘಾಟಿಸಿ, ಮಾತನಾಡಿದರು.

‘100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ) ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ (ಸಿಎಚ್‌ಸಿ)ಈ ವರ್ಷ ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರತಿ ಕೇಂದ್ರಕ್ಕೆ ₹ 8 ಕೋಟಿ ವೆಚ್ಚ ಆಗಲಿದೆ. ಮೇಲ್ದರ್ಜೆಗೆ ಏರಿಸಲಾದ ಕೇಂದ್ರಗಳಿಗೆ ಟೆಲಿ ಮೆಡಿಸಿನ್ ಸೇವೆ ಸಂಪರ್ಕಿಸುವ ಯೋಜನೆ ರೂಪಿಸಲಾಗುತ್ತಿದೆ.ಪ್ರಾದೇಶಿಕವಾರು 6 ಕಮಾಂಡರ್ ಕೇಂದ್ರಗಳನ್ನು ನಿರ್ಮಿಸಿ, ಸಿಎಚ್‌ಸಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ಇವು 24X7 ಕಾರ್ಯನಿರ್ವಹಿಸಲಿವೆ. 81 ಪಿಎಚ್‍ಸಿ ಕೇಂದ್ರಗಳನ್ನು ಹೊಸದಾಗಿ ತೆರೆಯಲಾಗುವುದು’ ಎಂದು ತಿಳಿಸಿದರು.

‘ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ತಾಲ್ಲೂಕು ಮಟ್ಟದಲ್ಲಿ ರಾಜ್ಯದಾದ್ಯಂತ ನಡೆಸಲಾಗುವುದು.ಎಲ್ಲಾ ಬಡವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸಲಾಗುವುದು. ಬಾಲ್ಯದಿಂದಲೇ ಶ್ರವಣ ದೋಷ ಇರುವವರಿಗೆ ಕಾಕ್ಲಿಯರ್ ಇಂಪ್ಲಾಂಟ್ ನಡೆಸಲು ಬಜೆಟ್‌ನಲ್ಲಿ ₹500 ಕೋಟಿ ಮೀಸಲಿಡಲಾಗಿದೆ. ಇದಕ್ಕೆ ಸಚಿವ ಸಂಪುಟದ ಅನುಮೋದನೆ ದೊರೆತಿದೆ’ ಎಂದು ಹೇಳಿದರು.

‘4 ಸಾವಿರ ಅಂಗನವಾಡಿ ಕೇಂದ್ರಗಳನ್ನು ಈ ವರ್ಷವೇ ಪ್ರಾರಂಭಿಸುತ್ತೇವೆ. 2023ರ ಆ.15ರೊಳಗೆ ಎಲ್ಲಾ ಶಾಲೆಗಳಲ್ಲೂ ಶೌಚಾಲಯ ನಿರ್ಮಿಸಲಾಗುವುದು. ಇದಕ್ಕಾಗಿ ₹ 650 ಕೋಟಿ ಮೀಸಲಿಡಲಾಗಿದೆ’ ಎಂದರು.

ನ.1ರಿಂದ ‘ಯಶಸ್ವಿನಿ’ ಮರು ಜಾರಿ

‘ಸಹಕಾರ ಸಂಘಗಳ ಸದಸ್ಯರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆ ಒದಗಿಸುವ ‘ಯಶಸ್ವಿನಿ ಯೋಜನೆ’ಯನ್ನು ನವೆಂಬರ್‌ 1ರಿಂದ ಮರುಜಾರಿ ಮಾಡಲಾಗುವುದು.ಯೋಜನೆ ಮರುಜಾರಿಗೆ ಈಗಾಗಲೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಈ ಯೋಜನೆಯಿಂದಲಕ್ಷಾಂತರ ಜನರು ಲಾಭ ಪಡೆಯಲಿದ್ದಾರೆ. ಆಯುಷ್ಮಾನ್ ಕಾರ್ಡ್‌ಗಳಿಗೆ ಸಂಬಂಧಿಸಿದ ತೊಡಕುಗಳನ್ನೂ ನಿವಾರಿಸಿ, ಸರಳ ನಿಯಮಾವಳಿಗಳನ್ನು ಶೀಘ್ರದಲ್ಲಿ ಹೊರಡಿಸಲಾಗುವುದು’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT