ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿ.ವಿ ಕುಲಪತಿಯಿಂದ ಸಿಬ್ಬಂದಿಗೆ ಕಿರುಕುಳ; ಸೆನೆಟ್‌ ಸದಸ್ಯನಿಂದ ದೂರು

Last Updated 9 ಫೆಬ್ರುವರಿ 2023, 5:00 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಾಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರು ಸಿಬ್ಬಂದಿ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸಿ ಕಿರುಕುಳ ನೀಡುತ್ತಿದ್ದಾರೆ. ಲಾಭದಾಯಕ ಹುದ್ದೆಯಲ್ಲಿರುವ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಿ.ವಿ. ಆಡಳಿತ ಮಂಡಳಿ (ಸೆನೆಟ್‌) ಸದಸ್ಯ ಶರಣಗೌಡ ಸುಂಕೇಶ್ವರ ಹಾಳ ಅವರು ಕೊಟ್ಟಿರುವ ದೂರಿನ ಮೇರೆಗೆ ಉನ್ನತ ಶಿಕ್ಷಣ ಇಲಾಖೆಯು ವಿ.ವಿ.ಯಿಂದ ವಿಸ್ತೃತವಾದ ವರದಿ ಕೇಳಿದೆ.

ಶರಣಗೌಡ ಸುಂಕೇಶ್ವರ ಹಾಳ ಅವರು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹತ್ತು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಕುಲಪತಿ ಸ.ಚಿ. ರಮೇಶ ವಿರುದ್ಧ 30 ಅಂಶಗಳ ಆರೋಪ ಪಟ್ಟಿಯ ದೂರು ಕೊಟ್ಟಿದ್ದಾರೆ. ಈ ದೂರು ಆಧರಿಸಿ ಉನ್ನತ ಶಿಕ್ಷಣ ಇಲಾಖೆಯು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಿಗೆ ಫೆಬ್ರುವರಿ 2ರಂದು ಪತ್ರ ಬರೆದು, ವರದಿ ಕೇಳಿದೆ. ದೂರು ಹಾಗೂ ವರದಿ ಕೇಳಿದ ಎರಡೂ ಪ್ರತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಶರಣಗೌಡ ಸುಂಕೇಶ್ವರ ಹಾಳ ಅವರು ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಎಲ್ಲಾ ಅಂಶಗಳ ಕುರಿತು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ ಪೂರಕ ದಾಖಲೆಗಳೊಂದಿಗೆ ವಿಸ್ತೃತವಾದ ವರದಿಯನ್ನು ಸಲ್ಲಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರಿಗೆ ಪತ್ರ ಬರೆದು ಸೂಚಿಸಿದ್ದಾರೆ.

ಫೆ. 21ರಂದು ರಮೇಶ ಅವರ ಅವಧಿ ಮುಗಿಯಲಿದೆ. ಆದರೆ, ಮತ್ತೆ ಅವರು ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಈ ದೂರು ಮಹತ್ವ ಪಡೆದಿದೆ.

ದೂರಿನಲ್ಲಿ ಏನಿದೆ?:

ಕನ್ನಡ ವಿಶ್ವವಿದ್ಯಾಲಯದ ಅಧಿನಿಯಮ ಹಾಗೂ ಪರಿನಿಯಮಗಳು, ಸರ್ಕಾರದ ಸುತ್ತೋಲೆಗೆ ವಿರುದ್ಧವಾಗಿ ನಿಯಮ ಉಲ್ಲಂಘಿಸಿ ಕುಲಪತಿ ಪ್ರೊ.ಸ.ಚಿ. ರಮೇಶ ಆಡಳಿತ ನಡೆಸುತ್ತಿದ್ದಾರೆ. ಈ ಕುರಿತು ಪತ್ರಿಕೆಗಳು ವರದಿ ಪ್ರಕಟಿಸಿವೆ. ವೈಯಕ್ತಿಕ ದ್ವೇಷವನ್ನು ಆಡಳಿತದಲ್ಲಿ ತಂದು ಶೈಕ್ಷಣಿಕ ವಾತಾವರಣ ಹಾಳುಗೆಡವಿದ್ದಾರೆ. ಅನೇಕ ಸಿಬ್ಬಂದಿಗೆ ವೈಯಕ್ತಿಕ ದ್ವೇಷದಿಂದ ಕಿರುಕುಳ ಕೊಟ್ಟಿದ್ದಾರೆ, ನೌಕರರನ್ನು ಬೆದರಿಸಿದ್ದಾರೆ. ಕುಲಪತಿ ಮೇಲಿನ ಹಲವು ಆರೋಪಗಳ ಕುರಿತು ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದರೂ ಅದರ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಕೆಲ ಸಿಬ್ಬಂದಿ ವಿರುದ್ಧ ಠಾಣೆಗೆ ದೂರು ಕೊಟ್ಟಿರುವುದರಿಂದ ಅವರು ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ. ಕುಲಸಚಿವರು, ಡೀನ್‌ರ ಅವಧಿ ಮುಗಿದರೂ ಅವರನ್ನೇ ಮುಂದುವರೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕನ್ನಡ ವಿ.ವಿ. ಕುಲಪತಿ ಹುದ್ದೆಯಲ್ಲಿದ್ದವರು ಲಾಭದಾಯಕ ಹುದ್ದೆಯಲ್ಲಿರುವಂತಿಲ್ಲ. ಆದರೆ, ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿ ಅಧ್ಯಾಪಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಅಧ್ಯಾಪಕರಿಂದ ಷೇರು ರೂಪದಲ್ಲಿ ₹26 ಲಕ್ಷ ಸಂಗ್ರಹಿಸಿದ್ದಾರೆ. ಸಂಘದ ಸಭೆ ನಡೆಸಿ, ವಾರ್ಷಿಕ ಲೆಕ್ಕಪತ್ರ ಕೊಟ್ಟಿಲ್ಲ. ಅಧ್ಯಾಪಕರ ಸಂಘದವರು ಸಭೆಗೆ ಒತ್ತಾಯಿಸಿದರೂ ನಡೆಸಿಲ್ಲ. ತಮ್ಮನ್ನು ಪ್ರಶ್ನಿಸುವ ನೌಕರರು, ಅಧ್ಯಾಪಕರ ಸಂಘದವರಿಗೆ ನೋಟಿಸ್‌ ಕೊಟ್ಟಿದ್ದಾರೆ. ಇವರು ತಮ್ಮ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗಿರುವುದರಿಂದ ಇವರ ಅವಧಿ ಮತ್ತೆ ವಿಸ್ತರಿಸಬಾರದು. ಇವರ ನೇಮಕವೂ ನಿಯಮಕ್ಕೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಈ ಕುರಿತು ರಮೇಶ ಅವರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.

ಪ್ರಭಾರ ಹಣಕಾಸು ಅಧಿಕಾರಿ ನೇಮಕ

ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಭಾರ ಹಣಕಾಸು ಅಧಿಕಾರಿಯನ್ನು ನೇಮಿಸಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ವಿಜಯನಗರ ಜಿಲ್ಲಾ ಸಹಾಯಕ ನಿಯಂತ್ರಕರಾಗಿ ನಿಯೋಜನೆಗೊಂಡಿರುವ ದಿನೇಶ್‌ ಕೆ. ಅವರನ್ನು ರಮೇಶ ನಾಯಕ ಅವರ ಜಾಗಕ್ಕೆ ನೇಮಕ ಮಾಡಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಪ್ರಭಾರ ಹಣಕಾಸು ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT