ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ವಿಧಾನಸಭಾ ಉಪ ಚುನಾವಣೆ: ಕಾಂಗ್ರೆಸ್‌, ಬಿಜೆಪಿ ಶಕ್ತಿ ಪ್ರದರ್ಶನ

12 ನಾಮಪತ್ರ ಸಲ್ಲಿಕೆ
Last Updated 8 ಅಕ್ಟೋಬರ್ 2021, 20:44 IST
ಅಕ್ಷರ ಗಾತ್ರ

ವಿಜಯಪುರ: ಅ.30ರಂದು ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಶುಕ್ರವಾರ ಕಾಂಗ್ರೆಸ್‌, ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಿಂದಗಿ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಯಿತು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ ಹಾಗೂ ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್‌.ಈಶ್ವರಪ್ಪ, ವಿ. ಸೋಮಣ್ಣ, ಬೈರತಿ ಬಸವರಾಜ್‌, ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಎರಡೂ ಪಕ್ಷಗಳ ಪ್ರತ್ಯೇಕ ಸಾರ್ವಜನಿಕ ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಪಾಲ್ಗೊಂಡಿದ್ದರು.

12 ನಾಮಪತ್ರ ಸಲ್ಲಿಕೆ:ರಮೇಶ ಭೂಸನೂರ(ಬಿಜೆಪಿ), ಅಶೋಕ‌ ಮನಗೂಳಿ(ಕಾಂಗ್ರೆಸ್‌), ನಾಜಿಯಾ ಅಂಗಡಿ(ಜೆಡಿಎಸ್‌), ಡಾ.ಸುನೀಲ್‌ಕುಮಾರ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮಿತಿ), ವಿಕ್ರಮ್‌ ಪಂಡಿತ(ರಾಷ್ಟ್ರೀಯ ಸಮಾಜ ಪಕ್ಷ) ಹಾಗೂ ದೀಪಿಕಾ ಎಸ್., ಜಿಲಾನಿ ಮುಲ್ಲಾ, ಅಬ್ದುಲ್‌ ರಹಿಮಾನ್‌ ದುಂಡಸಿ(ಪಕ್ಷೇತರ) ಸೇರಿದಂತೆ ಒಟ್ಟು ಎಂಟು ಅಭ್ಯರ್ಥಿಗಳು 12 ನಾಮಪತ್ರ ಸಲ್ಲಿಸಿದ್ದಾರೆ. ಅ.11ರಂದು ನಾಮಪತ್ರ ಪರಿಶೀಲನೆ ಹಾಗೂ ಅ.13 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

***

‘ಜಾತ್ಯತೀತತೆ ಉಳಿಸಲು ಬೆಂಬಲಿಸಿ:ಎಚ್.ಡಿ.‌ ಕುಮಾರಸ್ವಾಮಿ

ರಾಮನಗರ: ‘ಜಾತ್ಯತೀತತೆ ಉಳಿಸಲು ಅಲ್ಪಸಂಖ್ಯಾತರು ಜೆಡಿಎಸ್ ಇಲ್ಲವೇ ಕಾಂಗ್ರೆಸ್ ಬೆಂಬಲಿಸಿ ಎಂದು ಮುಕ್ತವಾಗಿ ಹೇಳಿದ್ದೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.‌ ಕುಮಾರಸ್ವಾಮಿ ಹೇಳಿದರು.

‘ಎಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ ಇದೆಯೋ ಅಲ್ಲಿ‌ ಕಾಂಗ್ರೆಸ್, ಎಲ್ಲಿ ಬಿಜೆಪಿಗಿಂತ ಜೆಡಿಎಸ್ ಮುಂದೆ ಇದೆಯೋ ಅಲ್ಲಿ ಜೆಡಿಎಸ್ ಬೆಂಬಲಿಸಿ ಎಂದು ಕೋರಿದ್ದೇನೆ. ಸಿದ್ದರಾಮಯ್ಯ ಥರ ಕೀಳುಮಟ್ಟದ ರಾಜಕಾರಣ ಮಾಡುತ್ತಿಲ್ಲ’ ಎಂದು ಟೀಕಿಸಿದರು.

ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವ ಸಾಧ್ಯತೆ ಇದೆ. ಹಾನಗಲ್ ನಲ್ಲೂ ಪೈಪೋಟಿ ನೀಡಲಿದ್ದೇವೆ ಎಂದರು.

***

ಮುಂದಿನ ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಎರಡು ಹೋಳಾಗಲಿದೆ. ಈವರೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ನಾನು ಸಿಎಂ ನಾನು ಸಿಎಂ ಎನುತ್ತಿದ್ದರು. ಒಬ್ಬರು ಎಡಕ್ಕೆ ಎಳೆದರೆ, ಇನ್ನೊಬ್ಬರು ಬಲಕ್ಕೆ ಎಳೆಯುತ್ತಾರೆ. ಇದೀಗ ಅನಿವಾರ್ಯವಾಗಿ ಒಂದಾಗಿದ್ದಾರೆ

- ಕೆ.ಎಸ್.ಈಶ್ವರಪ್ಪ, ಸಚಿವ

ಬಿಜೆಪಿಯವರು ನಮ್ಮ ಶಾಸಕರನ್ನು ಆಪರೇಷನ್ ಮಾಡಿ, ವಾಮಮಾರ್ಗದಿಂದ ಅಧಿಕಾರಿ ಹಿಡಿದರು. ಉತ್ತಮ ಆಡಳಿತ ನೀಡಲಾಗದೇ ಯಡಿಯೂರಪ್ಪ ಅವರನ್ನು ಮನೆಯಲ್ಲಿ ಇರಿಸಿದರು. ಈಗ ಯಾವ ಏಟು ಹೊಡೆಯುತ್ತಿದ್ದಾರೆ ನೀವೇ ನೋಡುತ್ತಿದ್ದಿರಿ

– ಡಿ.ಕೆ.ಶಿವಕುಮಾರ್‌, ಅಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT