ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರದ ವಿರುದ್ಧ 'ಶೇ 40'ರ ಅಸ್ತ್ರ: ಕಾಂಗ್ರೆಸ್‌ ಕಹಳೆ

2023ರ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ನಿಂದ ‘ಪಂಚ ಸೂತ್ರ’
Last Updated 28 ಮಾರ್ಚ್ 2022, 19:34 IST
ಅಕ್ಷರ ಗಾತ್ರ

ಬೆಂಗಳೂರು:‌ ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪದ ಅಸ್ತ್ರ ಪ್ರಯೋಗಿಸಿ, ರಾಜ್ಯದಾದ್ಯಂತ ಜನಾಭಿಪ್ರಾಯ ಮೂಡಿಸಿ, 2023ರ ವಿಧಾನಸಭೆ ಚುನಾವಣೆ ಗೆದ್ದು ಅಧಿಕಾರಕ್ಕೆ ಏರಲು ರಾಜ್ಯ ಕಾಂಗ್ರೆಸ್‌ ರಣಕಹಳೆ ಊದಿದೆ.

ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸೋಮವಾರ ನಡೆದ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಪ್ರಚಾರ ಸಮಿತಿ ನೂತನ ಅಧ್ಯಕ್ಷ ಎಂ.ಬಿ. ಪಾಟೀಲ ಅವರ ಪದಗ್ರಹಣ ಕಾರ್ಯಕ್ರಮದುದ್ದಕ್ಕೂ ‘ಕೈ’ ನಾಯಕರು ಬಿಜೆಪಿ ವಿರುದ್ಧ ಒಗ್ಗೂಡಿ ವಾಗ್ದಾಳಿ ನಡೆಸಿದರು. ಗುತ್ತಿಗೆದಾರರ ಸಂಘ ಪ್ರಧಾನಿಗೆ ನೀಡಿದ ದೂರನ್ನು ಪದೇ ಪದೇ ಉಲ್ಲೇಖಿಸುತ್ತಲೇ, ‘ಶೇ 40 ಕಮಿಷನ್‌ ಸರ್ಕಾರ’ ಎಂದು ಹಂಗಿಸಿದರು.

ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ‘ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರ ಶೇ 40ರಷ್ಟು ಲಂಚದ ಸರ್ಕಾರ‘ ಎಂದರು. ‘ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಇಲ್ಲಿಗೆ (ರಾಜ್ಯಕ್ಕೆ) ಬರುವ ಮಾಹಿತಿ ಇದೆ. ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಸಚಿವರ ವಿರುದ್ಧ ಅವರು ಕ್ರಮ ಕೈಗೊಳ್ಳಬೇಕು' ಎಂದರು.

ಪ್ರಧಾನಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

‘ರಾಜ್ಯದಲ್ಲಿ ಪಕ್ಷದ ವಿವಿಧ ಹಂತದ ಜವಾಬ್ದಾರಿಯನ್ನು ಯುವಕರಿಗೆ ನೀಡಬೇಕು. ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಬಲ ತುಂಬಬೇಕು‘ ಎಂದು ರಾಜ್ಯದ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.

***

ಕಾಂಗ್ರೆಸ್‌ ಅವಧಿಯಲ್ಲಿ ಸಂಪಾದಿಸಿದ್ದ ಆಸ್ತಿಯನ್ನು ಮೋದಿ ಮತ್ತು ಶಾ ಸರ್ಕಾರ ಮಾರುತ್ತಿದೆ. ಏನಾದರೂ ಮಾಡಲಿ, ಬಿಜೆಪಿ ಸರ್ಕಾರವನ್ನು ಜನರ ಮೂಲಕವೇ ಓಡಿಸಬೇಕು

- ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿರೋಧ ಪಕ್ಷದ ನಾಯಕ


ರಾಜ್ಯವನ್ನು ಜಾತಿ, ಧರ್ಮದ ಹೆಸರಲ್ಲಿ ಒಡೆಯುವ ಯತ್ನ ನಡೆಯುತ್ತಿದೆ. ಸರ್ಕಾರ ವಿರುದ್ಧ ಶೇ 40 ಲಂಚದ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ ನೀಡಲಿದೆ

- ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಪ್ರಧಾನಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಮಾನ, ಮರ್ಯಾದೆ ಇದ್ದರೆ ಗುತ್ತಿಗೆದಾರರ ಸಂಘ ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿ ಈ ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕಿತ್ತು

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ


ಚುನಾವಣೆಗೆ ‘ಪಂಚಸೂತ್ರ’

‘ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಅಭಿವೃದ್ಧಿ ಈ ಪಂಚಸೂತ್ರಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಜನಾರ್ಶೀವಾದ ಪಡೆಯಲು ಪಕ್ಷ ಸಿದ್ಧತೆ ನಡೆಸಿದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎಂ.ಬಿ. ಪಾಟೀಲ ಹೇಳಿದರು.

’ರಾಜ್ಯದಲ್ಲಿ ಸಚಿವರು ಶೇ 40 ಲಂಚ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರೇ ನೇರವಾಗಿ ಪತ್ರ ಬರೆದಿದ್ದರೂ ಪ್ರಧಾನಿ ಕ್ರಮ ತೆಗೆದುಕೊಳ್ಳದೆ ಮೌನವಾಗಿರುವುದು ನೋಡಿದರೆ ಮೌನಂ ಸಮ್ಮತಿ ಲಕ್ಷಣಂ ಎಂದೇ ಭಾವಿಸಬೇಕಾಗುತ್ತದೆ. ಬಿಜೆಪಿಯವರದ್ದು ಭಾವನಾತ್ಮಕ ರಾಜಕಾರಣ. ಆದರೆ, ನಾವು (ಕಾಂಗ್ರೆಸ್‌) ಜನರ ಬದುಕಿನ ವಿಷಯಗಳನ್ನು ಮುಂದಿಟ್ಟುಕೊಂಡು ಸಕಾರಾತ್ಮಕ ರಾಜಕಾರಣ ಮಾಡುತ್ತೇವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT