ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗದು: ಸತೀಶ ಜಾರಕಿಹೊಳಿ

Last Updated 26 ಮಾರ್ಚ್ 2021, 19:20 IST
ಅಕ್ಷರ ಗಾತ್ರ

ಬೆಳಗಾವಿ: ‘ನನ್ನ ವಿರುದ್ಧ ಯಾರೂ ಷಡ್ಯಂತ್ರ ಮಾಡಲಾಗುವುದಿಲ್ಲ. ಹೀಗಾಗಿ, ಯಮಕನಮರಡಿ ಕ್ಷೇತ್ರದ ಜನರು ಹಾಗೂ ಅಭಿಮಾನಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಅಲ್ಲಿನ ಶಾಸಕ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ, ತಾವು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಜನಾಭಿಪ್ರಾಯ ಆಲಿಸಲು ಶುಕ್ರವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

‘ಹಾಗೊಂದು ವೇಳೆ ಯಾರದರೂ ನನ್ನ ವಿರುದ್ಧ ಷಡ್ಯಂತ್ರ ಮಾಡಿದರೆ, ನಾನೂ ಎರಡು ಹೆಜ್ಜೆ ಮುಂದಿರುತ್ತೇನೆ. ರಾಜಕಾರಣದಲ್ಲಿ ಅವೆಲ್ಲವೂ ಸ್ವಾಭಾವಿಕ. ಆದರೆ, ನಮ್ಮ ಪಕ್ಷದಲ್ಲಿ ಅಂತಹ ವಾತಾವರಣ ಇಲ್ಲ. ಯಾರ ಮೇಲೂ ಸಂಶಯಪಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.

‘ಟಿಕೆಟ್‌ಗಾಗಿ ಸರ್ಕಸ್ ಮಾಡುವುದನ್ನು ನೋಡಿದ್ದೀರಿ. ಆದರೆ, ನೀವೇ ಸ್ಪರ್ಧಿಸಬೇಕು ಎಂದು ಪಕ್ಷದ ಎಲ್ಲರೂ ಒಟ್ಟಾಗಿ ತಿಳಿಸಿ ಟಿಕೆಟ್‌ ಕೊಡುವುದನ್ನು ನೋಡಿದ್ದೀರಾ? ನನ್ನ ವಿಷಯದಲ್ಲಿ ಅದು ನಡೆದಿದೆ. ಶಾಸಕನಾದವನು ಸಂಸದನಾದರೆ ಅದು ರಾಜಕೀಯವಾಗಿ ಬಡ್ತಿ ಇದ್ದಂತೆ. ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ರಾಷ್ಟ್ರ ರಾಜಕಾರಣಕ್ಕೆ ಹೋಗಲು ಬಡ್ತಿ ಸಿಗುತ್ತಿರುವುದಕ್ಕೆ ನಿಮ್ಮ ಆಶೀರ್ವಾದ ಕಾರಣ. ನನಗೇ ಟಿಕೆಟ್ ಕೊಡಲು ಪಕ್ಷದವರೆಲ್ಲರೂ ನಿರ್ಧರಿಸಿದರು. ಈ ಶ್ರೇಯಸ್ಸು ಯಮಕನಮರಡಿ ಕ್ಷೇತ್ರದ ಜನರಿಗೆ ಸಲ್ಲಬೇಕು. ರಾಜ್ಯದಾದ್ಯಂತ ನಾನು ಹೆಸರು ಮಾಡಲು ಯಮಕನಮರಡಿ ಕಾರಣ’ ಎಂದು ಸ್ಮರಿಸಿದರು.

‘ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಇಡೀ ಕುಟುಂಬದವರು, ಸಂಬಂಧಿಕರು ಬಂದು ಪ್ರಚಾರ ಮಾಡುತ್ತಾರೆ. ಎಷ್ಟು ಖರ್ಚು ಮಾಡುತ್ತಾರೆ ನೋಡಿದ್ದೇವೆ. ಮುಂಬೈ, ಬೆಂಗಳೂರಿನಿಂದಲೂ ಬಂದು ಪ್ರಚಾರ ಮಾಡುತ್ತಾರೆ. ಆದರೆ, ನಾವು ಹೋದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಬರಲಿಲ್ಲ. ನಮ್ಮ ಕುಟುಂಬದವರೂ ಬರಲಿಲ್ಲ. ಆದರೂ ನೀವೆಲ್ಲರೂ ನನ್ನನ್ನು ಗೆಲ್ಲಿಸಿದಿರಿ. ನಿಮ್ಮ ಋಣ ಹಾಗೂ ಪ್ರೀತಿ ನನ್ನನ್ನು ಕಾಡುತ್ತಲೇ ಇರುತ್ತದೆ’ ಎಂದರು.

‘ರಾಷ್ಟ್ರ ರಾಜಕಾರಣಕ್ಕೆ ಹೋಗಲು ಇದೊಂದು ಅವಕಾಶ. ಹೋಗಬಹುದೇ’ ಎಂದು ಕೇಳಿದಾಗ, ನೆರೆದಿದ್ದವರು ಚಪ್ಪಾಳೆ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಅಭಿಮಾನಿಗಳು, ‘ನಿಮ್ಮನ್ನು ರಾಜ್ಯ ರಾಜಕಾರಣದಿಂದ ದೂರವಿಡಲು ಷಡ್ಯಂತ್ರ ನಡೆದಿದೆ. ಆ ಬಗ್ಗೆ ಎಚ್ಚರದಿಂದಿರಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT