ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ–ಸಿದ್ದರಾಮಯ್ಯ ತಿಕ್ಕಾಟದಿಂದ ಧರಣಿ: ಆರ್.ಅಶೋಕ

Last Updated 19 ಫೆಬ್ರುವರಿ 2022, 21:39 IST
ಅಕ್ಷರ ಗಾತ್ರ

ಮಂಗಳೂರು: ವಿಧಾನಸಭೆಯಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚಿಸುವ ಬದಲು ಧರಣಿ ನಡೆಸುತ್ತಿದ್ದಾರೆ. ಡಿಕೆಶಿ ಹಿಜಾಬ್ ಪರ ಇಲ್ಲ. ಸಿದ್ದರಾಮಯ್ಯ ಕೇಸರಿ ಪರ ಇಲ್ಲ. ಅವರಿಬ್ಬರ ತಿಕ್ಕಾಟದಲ್ಲಿ ಧರಣಿ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಶನಿವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಶ್ವರಪ್ಪ ಹೇಳಿಕೆ ಅವರಿಗೆ ಕೇವಲ ನೆಪ. ಕಾಂಗ್ರೆಸ್‌ಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲ. ಹಿಜಾಬ್ ವಿರುದ್ಧ ಮಾತನಾಡಿದರೆ ವೋಟ್ ಹೋಗುತ್ತದೆ ಎನ್ನುವ ಭಯ. ಅಧಿವೇಶನಕ್ಕೆ ಕೋಟ್ಯಂತರ ರೂಪಾಯಿ ಖರ್ಚಿದೆ. ಅದು ಜನತೆಯ ತೆರಿಗೆ ಹಣ. ಕಾಂಗ್ರೆಸ್‌ನವರು ಇಲ್ಲಿ ನಿದ್ದೆ ಮಾಡುವ ಮೂಲಕ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.

‘ಕಾಂಗ್ರೆಸ್‌ನವರಿಗೆ ಬುದ್ಧಿ, ಮಾನ ಮರ್ಯಾದೆ ಇದ್ದರೆ ಜನರ ವಿಷಯವಾಗಿ ಧ್ವನಿ ಎತ್ತಲಿ. ಅದನ್ನು ಬಿಟ್ಟು ಡಿ.ಕೆ.ಶಿವಕುಮಾರ್ ಅವರು ಈಶ್ವರಪ್ಪ ಮೇಲೆತೋಳು ಏರಿಸೋದು. ಹೊಡೆದಾಡೋದು, ಇದಕ್ಕೆ ವಿಧಾನಸಭೆಗೆ ಬರುವುದೇ? ಕೆಂಗಲ್‌ ಹನುಮಂತಯ್ಯ ಬಡವರಿಗಾಗಿ ವಿಧಾನಸೌಧ ಕಟ್ಟಿರುವುದು, ಕುಸ್ತಿ ಆಡೋಕೆ ಅಲ್ಲ ಎಂದರು.

ಡಿಕೆಶಿ ಗೂಂಡಾ, ಸಿದ್ದರಾಮಯ್ಯ ಜಾತಿವಾದಿ: ಈಶ್ವರಪ್ಪ

ಶಿವಮೊಗ್ಗ: ‘ಪಕ್ಷದ ಕಾರ್ಯಕರ್ತರು ಸರಿಯಾಗಿ ಕೆಲಸ ಮಾಡಿದರೆ ಗೂಂಡಾ ಡಿ.ಕೆ.ಶಿವಕುಮಾರ್, ಜಾತಿವಾದಿ ಸಿದ್ದರಾಮಯ್ಯ ಬಂದರೂ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ’ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಶನಿವಾರ ಭದ್ರಾವತಿ ಕ್ಷೇತ್ರದ ಜೆಡಿಎಸ್‌ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು,‘ಜಾತಿ ಕುಲದ ಲೆಕ್ಕಾಚಾರ ಬದಿಗಿಟ್ಟು ಕೆಲಸ ಮಾಡಬೇಕು.ಎಲ್ಲರೂ ಹಿಂದೂಗಳು, ಹಿಂದುತ್ವ ಗೆಲ್ಲಿಸುತ್ತೇವೆ ಎನ್ನಬೇಕು. ಆಗ ಜನರೇ ಗೂಂಡಾ, ಜಾತಿವಾದಿಗಳನ್ನು ಪಕ್ಕಕ್ಕೆ ಸರಿಸುತ್ತಾರೆ’ ಎಂದು ಕರೆ ನೀಡಿದರು.

‘ಜನರಿಗೆ ಅನ್ಯಾಯ ಮಾಡುತ್ತಿದ್ದೇವೆ’

ಹುಬ್ಬಳ್ಳಿ: ‘ಸಚಿವ ಈಶ್ವರಪ್ಪ ರಾಜೀನಾಮೆ ನೀಡಲ್ಲ ಅಂತಾರೆ, ಕಾಂಗ್ರೆಸ್ ರಾಜೀನಾಮೆ ಪಡೆಯದೇ ಬಿಡಲ್ಲ ಅನ್ನುತ್ತಿದೆ. ಸದನದಲ್ಲಿ ನಡೆಯುತ್ತಿರುವ ಬಿಜೆಪಿ– ಕಾಂಗ್ರೆಸ್ ಗದ್ದಲದಿಂದಾಗಿ ಸದನ ಕಲಾಪಗಳು ನಡೆಯುತ್ತಿಲ್ಲ. ನಾವು ಜನರಿಗೆ ಅನ್ಯಾಯ‌ ಮಾಡುತ್ತಿದ್ದೇವೆ. ನಾನು ಸಭಾಪತಿಯಾಗಿ ಅಲ್ಲ, ಸಾಮಾನ್ಯ ಪ್ರಜೆಯಾಗಿ ಮಾತನಾಡುತ್ತಿದ್ದೇನೆ. ನಾವು ಜನರಿಗೆ ಮೋಸ, ಅವಮಾನ, ಕೆಟ್ಟದ್ದು ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ನಾನೂ ಸಹ ವಿರೋಧ ಪಕ್ಷದವರ ಮನವೊಲಿಸಲು ಸಾಕಷ್ಟು ಯತ್ನಿಸಿದ್ದೇನೆ. ಇವರ ಗದ್ದಲದಿಂದ ಬಹಳಷ್ಟು ನೋವಾಗಿದೆ. ಸದನದಲ್ಲಿ ಹೀಗೆ ಮಾಡುತ್ತಿರುವುದರಿಂದ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಾಳಾಗುತ್ತಿದೆ’ ಎಂದರು.

ಪ್ರತಿಭಟನೆಗಳು ಸಹಜ; ಅದೇ ಪರಿಹಾರವಲ್ಲ –ವಿಶ್ವನಾಥ್

ಮೈಸೂರು: ‘ರಾಷ್ಟ್ರಧ್ವಜ ಕುರಿತಂತೆ ಸಚಿವ ಕೆ.ಎಸ್‌.ಈಶ್ವರಪ್ಪ ನಿಜಕ್ಕೂ ಏನು ಮಾತನಾಡಿದ್ದಾರೆ, ಯಾವ ವಿಚಾರವನ್ನು ಉಲ್ಲೇಖಿಸಿ ಹೇಳಿದ್ದಾರೆ ಎಂಬುದನ್ನು ಮಾಧ್ಯಮಗಳು ಸ್ಪಷ್ಟವಾಗಿ ತಿಳಿಸಬೇಕು’ ಎಂದು ವಿಧಾನಪರಿಷತ್‌ ಸದಸ್ಯಎಚ್‌.ವಿಶ್ವನಾಥ್‌ ಪ್ರತಿಪಾದಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಶ್ವರಪ್ಪ ಏನು ಮಾತನಾಡಿದ್ದಾರೆ ಎಂದು ಜನರಿಗೆ ಗೊತ್ತಿಲ್ಲ. ಆ ರೀತಿ ಹೇಳಿದ್ದರೆ ಅದು ತಪ್ಪು. ಆದರೆ ಚುನಾವಣೆ ಗಮನದಲ್ಲಿರಿಸಿಕೊಂಡು, ಕಾಂಗ್ರೆಸ್‌ ಅದೇ ವಿಚಾರದ ಅಹೋರಾತ್ರಿ ಧರಣಿ ನಡೆಸುವುದು ಸರಿಯಲ್ಲ’ ಎಂದರು.

‘ಜನಪ್ರತಿನಿಧಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ಇಂತಹ ಹಲವು ಘಟನೆಗಳು ಸದನದಲ್ಲಿ ನಡೆದುಹೋಗಿವೆ. ಜನತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆಗಳು ಸಹಜ. ಆದರೆ ಅದೇ ಉದ್ಯೋಗವೂ ಅಲ್ಲ, ಪರಿಹಾರವೂ ಅಲ್ಲ’ ಎಂದು ಅಭಿಪ್ರಾಯಪಟ್ಟರು.

‘ಅಹೋರಾತ್ರಿ ಧರಣಿ ಯಾವ ಸಂಸ್ಕೃತಿ’ (ದಾವಣಗೆರೆ ವರದಿ): ‘ವಿಧಾನಸಭೆಗೆ ಹೋಗುವುದು ಗಲಾಟೆ ಮಾಡಲು ಅಲ್ಲ; ಅಭಿವೃದ್ಧಿ ಚರ್ಚಿಸಲು. ಅದನ್ನು ಬಿಟ್ಟು ಕಲಾಪಕ್ಕೆ ಅಡಚಣೆ ಮಾಡುವುದು, ಅಹೋರಾತ್ರಿ ಧರಣಿ ಕೂರುವುದುಯಾವ ಸಂಸ್ಕೃತಿ’ ಎಂದು ಸಚಿವ ಬಿ.ಸಿ.ಪಾಟೀಲ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸುವುದಾಗಿ ಕೆ.ಎಸ್‌.ಈಶ್ವರಪ್ಪ ಅವರು ಹೇಳಿಯೇ ಇಲ್ಲ. ಅದನ್ನು ಅವರೇ ಸ್ಪಷ್ಟಪಡಿಸಿದ್ದಾರೆ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT