ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದಿಂದ ದ್ವೇಷದ ರಾಜಕಾರಣ: ‘ಕೈ’ ನಾಯಕರ ಪ್ರತಿಭಟನೆ

Last Updated 13 ಜೂನ್ 2022, 9:06 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಫಲವಾಗಿ ಜಾರಿ ನಿರ್ದೇಶನಾಲಯ (ಇಡಿ) ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ಮುಖಂಡ ರಾಹುಲ್‌ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ’ ಎಂದು ಆರೋಪಿಸಿ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿ ಲಾಲ್ ಬಾಗ್ ಗೇಟ್ ಬಳಿ ರಾಜ್ಯ ಕಾಂಗ್ರೆಸ್‌ನಿಂದ ಸೋಮವಾರ ಬೃಹತ್‌ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಸಭೆಯ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಶಾಸಕರಾದ ಕೆ.ಜೆ. ಜಾರ್ಜ್, ಆರ್.ವಿ. ದೇಶಪಾಂಡೆ, ಎನ್‌.ಎ. ಹ್ಯಾರಿಸ್, ರಂಗನಾಥ್, ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೇಲೆ ಜಾರಿ ನಿರ್ದೇಶನಾಲಯವನ್ನು (ಇಡಿ) ಚೂ ಬಿಟ್ಟಿದೆ. ವಿಚಾರಣೆ ನೆಪದಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಹೆದರಿಸಲು ಹೊರಟಿದೆ‘ ಎಂದು ವಾಗ್ದಾಳಿ ನಡೆಸಿದರು.

‘ಮೋದಿ ಸರ್ಕಾರ ಸ್ವತಂತ್ರ ಸಂಸ್ಥೆಗಳನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ಸಿಬಿಐ, ಇಡಿ, ಐಟಿ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನ ತನ್ನ ತಾಳಕ್ಕೆ ಕುಣಿಯುವಂತೆ ಮಾಡಿಕೊಂಡಿದೆ. ವಿರೋಧ ಪಕ್ಷದ ಮೇಲೆ ಚೂಬಿಡುವ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಬಂದ ನಂತರ ಯಾರೂ ಈ ರೀತಿ ಕೈಗೊಂಬೆ ಮಾಡಿಕೊಂಡ ನಿರ್ದರ್ಶನಗಳಿಲ್ಲ. ಯಾರು ವಿರುದ್ಧವಾಗಿದ್ದಾರೋ ಅಂಥವರ ಮೇಲೆ ಸಿಬಿಐ, ಐಟಿ ದಾಳಿ ಮಾಡಿಸುತ್ತಿದೆ‘ ಎಂದು ಆರೋಪಿಸಿದರು.

‘ಯೋಜನಾ ಆಯೋಗವನ್ನು ತೆಗೆದುಹಾಕಿ ನೀತಿ ಕಮಿಷನ್ ರಚಿಸಿದ್ದಾರೆ. ಸಂವಿಧಾನದ ಎಲ್ಲಾ ಸಂಸ್ಥೆಗಳನ್ನೂ ಕೈಗೊಂಬೆಗಳನ್ನಾಗಿ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವವನ್ನ ಹತ್ತಿಕ್ಕುವ ಕೆಲಸ ಮಾಡಿದೆ. ಎಂದಾದರೂ ಹೆಡಗೇವಾರ್‌ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರಾರಾ? ಆರ್‌ಎಸ್‌ಎಸ್ ಮುಖಂಡರು ಬ್ರಿಟಿಷರ ಜೊತೆ ಸೇರಿಕೊಂಡು ಸಂಚು ರೂಪಿಸಿದ್ದರು. ಕ್ವಿಟ್ ಇಂಡಿಯಾ ಚಳವಳಿ ಹತ್ತಿಕ್ಕಲು ಕೈಜೋಡಿಸಿದ್ದರು. ಬಿಜೆಪಿಯವರು ಎಲ್ಲಾದರೂ ತ್ಯಾಗ, ಬಲಿದಾನ ಮಾಡಿದ್ದಾರಾ‘ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಶೇ 40 ಕಮಿಷನ್ ಆರೋಪ ಬಂದಿತ್ತು. ಖುದ್ದು ಮೋದಿಗೂ ದೂರು ನೀಡಲಾಗಿತ್ತು. ಆಗ ಯಾರ ಮೇಲಾದರೂ ದಾಳಿ ಮಾಡಿದ್ರಾ. ಕಮಿಷನ್ ದಂಧೆಯಲ್ಲಿ ಭಾಗಿಯಾದವರ ಮೇಲೆ ದಾಳಿಯಾಗಿದೆಯಾ? ಈಗ ನಮ್ಮ ಮೇಲೆ ಚೂ ಬಿಟ್ಟಿದ್ದಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಯಾವುದೂ ಇಲ್ಲ. ಹೆದರಿಸಬಹುದೆಂದು ಭಾವಿಸಿದರೆ ನಮ್ಮವರು ಆತ್ಮಸ್ಥೈರ್ಯ ಕಳೆದುಕೊಳ್ಳೋದಿಲ್ಲ. ಇದು ಸಾಂಕೇತಿಕ ಮುಷ್ಕರವಷ್ಟೇ. ಇಡೀ ದೇಶದಲ್ಲಿ ಕೋಟ್ಯಾಂತರ ಕಾರ್ಯಕರ್ತರು ಬೀದಿಗೆ ಬರುತ್ತಾರೆ. ಬಿಜೆಪಿ ಸರ್ಕಾರ ನಡೆಯದಂತೆ ಮಾಡುತ್ತಾರೆ. ಸರ್ಕಾರಿ ಕಚೇರಿಗಳನ್ನು ಬಂದ್ ಮಾಡುತ್ತಾರೆ. ಹೀಗಾಗಿ, ಬಿಜೆಪಿಯವರು ದ್ವೇಷದ ರಾಜಕಾರಣ ಇಲ್ಲಿಗೆ ನಿಲ್ಲಿಸಬೇಕು. ಹುಚ್ಚು ಸಾಹಸ ಮೊದಲು ಬಿಡಬೇಕು. ಇಲ್ಲದೇ ಇದ್ದರೆ ಪಕ್ಷದ ಕಾರ್ಯಕರ್ತರು ತಕ್ಕ ಶಾಸ್ತಿ ಮಾಡುತ್ತಾರೆ. ಕೇಂದ್ರ ಸರ್ಕಾರ ಶಾಶ್ವತವಾಗಿ ಗೂಟ ಹೊಡೆದುಕೊಂಡು ಕೂರಲು ಸಾಧ್ಯವಿಲ್ಲ’ ಎಂದು ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಸಂವಿಧಾನ ವಿರೋಧಿ ಕ್ರಮವನ್ನು ಮೊದಲು ಕೈಬಿಡಿ. ಎಷ್ಟು ದಿನ ದ್ವೇಷದ ರಾಜಕಾರಣ ನಡೆಯಲಿದೆ. ನಾವೆಲ್ಲರೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜೊತೆ ಇರುತ್ತೇವೆ’ಎಂದರು.

ಬಿ.ಕೆ. ಹರಿಪ್ರಸಾದ್ ಮಾತನಾಡಿ, ‘ಸೋನಿಯಾ ಗಾಂಧಿ ಅವರಿಗೆ ಬಿಜೆಪಿ ಅನಗತ್ಯ ತೊಂದರೆ ಕೊಡುತ್ತಿದೆ. ನರೇಂದ್ರ ಮೋದಿ, ಅಮಿತ್ ಷಾರವರೇ ನಿಮ್ಮಷ್ಟು ಅನುಭವ ಇಲ್ಲದೇ ಇರಬಹುದು. ನಮ್ಮದು ದೇಶಕ್ಕೆ ದೇಹವೊಡ್ಡಿ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ಕಾಂಗ್ರೆಸ್ ಪಕ್ಷ ರೌಡಿಗಳ ಪಕ್ಷವಲ್ಲ. ನಿಮ್ಮದು ಕುತಂತ್ರಿಗಳ ಪಕ್ಷ. ದೇಶದ ಸ್ವಾತಂತ್ರ್ಯ ತಂದುಕೊಟ್ಟ ಕುಟುಂಬಕ್ಕೆ ತೊಂದರೆ ಕೊಡಬೇಡಿ. ಇನ್ನು ಎರಡು ವರ್ಷ ಮಾತ್ರ ನಿಮ್ಮ ಆಟ ನಡೆಯಲಿದೆ’ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಮಾತನಾಡಿ, ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ನಾಯಕರ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಿರುಕುಳ ಕೊಡುತ್ತಿದೆ. ಚುನಾವಣೆ ಎದುರಾಗುತ್ತಿರುವ ಕಾರಣ ಉದ್ದೇಶಪೂರ್ವಕವಾಗಿ ನೋಟಿಸ್ ಕೊಡಲಾಗಿದೆ. ನಮ್ಮ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನಾಯಕರು, ಕಾರ್ಯಕರ್ತರು ಇಂತಹ ಗೊಡ್ಡು ಬೆದರಿಕೆಗೆ ಬಗ್ಗುವುದಿಲ್ಲ. ನಮ್ಮ‌ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವ ಪಕ್ಷ ಕಾಂಗ್ರೆಸ್. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಿದೆ. 2024ರಲ್ಲಿ ಕೇಂದ್ರದಲ್ಲೂ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ‘ಬಿಜೆಪಿ ಪ್ರತಿಪಕ್ಷ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇಡಿ, ಐಟಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಹುಲ್‌ ಗಾಂಧಿ, ಸೋನಿಯಾ ಅವರ ಆತ್ಮ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್‌ನವರು ಹೆದರುವುದಿಲ್ಲ ಕುಗ್ಗುವುದಿಲ್ಲ. ಸ್ವಾತಂತ್ರ್ಯ ಸೇನಾನಿಗಳು ಆರಂಭಿಸಿದ ಪತ್ರಿಕೆ ನ್ಯಾಷನಲ್ ಹೆರಾಲ್ಡ್. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷ್ ವಿರುದ್ಧ ಅಸ್ತ್ರವಾಗಿತ್ತು. ಇದನ್ನು ಉಳಿಸಿಕೊಳ್ಳಲು ಸೋನಿಯಾ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಯಾವುದೇ ಹಣ ವರ್ಗಾವಣೆಯಾಗಿಲ್ಲ. ಆದರೂ, ಇಡಿ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆದಿದೆ. ಇದು ಜನ ವಿರೋಧಿ ಸರ್ಕಾರ. ಇದನ್ನು ಮೊದಲು ಕಿತ್ತೊಗೆಯಬೇಕು‘ ಎಂದರು.

ಶಾಸಕ ಯು.ಟಿ ಖಾದರ್, ‘ಇದು ಜನಜಾಗೃತಿ ಹೋರಾಟ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ನಿರಪರಾಧಿಯಾಗಿ ಬರುತ್ತಾರೆ. ನಾವು ಬುಲ್ಡೋಜರ್ ತಂದಿದ್ದು ದೇಶ ಕಟ್ಟುವುದಕ್ಕೆ. ಬಿಜೆಪಿ ದೇಶದ ಜನರನ್ನು ಹೊಡೆಯಲು ಬುಲ್ಡೋಜರ್ ಬಳಸುತ್ತಿದೆ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT