ಶನಿವಾರ, ಮೇ 28, 2022
30 °C
ವಿಜಯನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ

ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ. ದೇಶದಲ್ಲಿ ಮೊದಲ ಭ್ರಷ್ಟಾಚಾರ ಪ್ರಕರಣವಾಗಿದ್ದು ಕಾಂಗ್ರೆಸ್‌ ಅವಧಿಯಲ್ಲಿ. ಇತ್ತೀಚಿನ ಪಂಚರಾಜ್ಯಗಳ ಚುನಾವಣೆಯಲ್ಲಿ ಸೋತ ನಂತರ ಇನ್ನಷ್ಟು ದಿಕ್ಕೆಟ್ಟಿದೆ. ಅವರ ಕಾಲದ ಹಗರಣಗಳು ಈಗಲೂ ಜೀವಂತವಾಗಿವೆ. ಹಾಸಿಗೆ, ದಿಂಬು ಕೂಡ ಬಿಟ್ಟಿಲ್ಲ. ಎಲ್ಲ ಇಲಾಖೆಗಳಲ್ಲಿ ಹಗರಣ ಮಾಡಿದ್ದಾರೆ. ಎಲ್ಲ ಪ್ರಕರಣಗಳಲ್ಲಿ ಸತ್ಯ ಹೊರಬರುತ್ತದೆ. ಅವರ ಮುಖವಾಡ ಕಳಚಿ ಬೀಳುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಹೇಳಿದರು.

ವಿಜಯನಗರದಲ್ಲಿ ಶನಿವಾರ ಆರಂಭವಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ‘ವಿಜಯನಗರದ ನೆಲ ಬಹಳ ಗಟ್ಟಿ. ಇಲ್ಲಿ ಏನೇ ಸಂಕಲ್ಪ ಮಾಡಿದರೂ ಅದು ಈಡೇರುತ್ತದೆ. ವಿಜಯದ ಸಂಕಲ್ಪ ಕೈಗೊಂಡು 2023ರ ಚುನಾವಣೆಯಲ್ಲಿ ಪಕ್ಷದ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಜನರ ಬಳಿ ಹೋಗುತ್ತೇವೆ. ನಮ್ಮದು ಸಕಾರಾತ್ಮಕ ರಾಜಕಾರಣ. ಜನರ ವಿಶ್ವಾಸ ಗಳಿಸಿ ಪುನಃ ಅಧಿಕಾರಕ್ಕೆ ಬರುತ್ತೇವೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣವನ್ನು ಕಾಂಗ್ರೆಸ್‌ ದೊಡ್ಡದಾಗಿ ಬಿಂಬಿಸುತ್ತಿದೆ. ಆದರೆ, ಅವರ ಕಾಲದಲ್ಲಿ ಡಿವೈಎಸ್ಪಿ  ಗಣಪತಿ ಅವರು ವಿಡಿಯೊ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕನಿಷ್ಠ ಎಫ್‌ಐಆರ್‌ ಕೂಡ ದಾಖಲಿಸಿರಲಿಲ್ಲ. ನಮ್ಮ ಸರ್ಕಾರ, ಸಂತೋಷ್‌ ಸಾವಿನ ನಂತರ ತಕ್ಷಣವೇ ಎಫ್‌ಐಆರ್‌ ದಾಖಲಿಸಿತ್ತು’ ಎಂದರು.

ಕಾರ್ಯಕಾರಿಣಿಯಲ್ಲಿ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದರು. ಮುಖ್ಯಮಂತ್ರಿ ಆದಿಯಾಗಿ ಹಲವು ಮುಖಂಡರು ತಮ್ಮ ಭಾಷಣದ ಹೆಚ್ಚಿನ ಸಮಯವನ್ನು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿಗೆ ಮೀಸಲಿಟ್ಟರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಗಳಿಸುವ ವಿಜಯದ ಸಂಕಲ್ಪವನ್ನೂ ಅವರು ಮಾಡಿದರು.

ಪಕ್ಷದ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ‘ಬಿಜೆಪಿ ವಿರುದ್ಧ ಕಾಂಗ್ರೆಸ್‌ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ನಡೆದ ಅರ್ಕಾವತಿ ಹಗರಣದ ತನಿಖೆ ನಡೆಸಿದರೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಜೈಲಿಗೆ ಹೋಗುತ್ತಾರೆ. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಎಲ್ಲರೂ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಅವರಿಗೆ ಬಿಜೆಪಿಯನ್ನು ಟೀಕಿಸುವ ನೈತಿಕ ಹಕ್ಕಿಲ್ಲ’ ಎಂದರು.

ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಸಂಸದ ಡಿ.ವಿ. ಸದಾನಂದಗೌಡ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಪಕ್ಷದ ಸಹ ಕಾರ್ಯದರ್ಶಿ ಡಿ.ಕೆ.ಅರುಣಾ, ಶಾಸಕರಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಇದ್ದರು.

ಈಶ್ವರಪ್ಪ ಗೈರು, ಬಿಜೆಪಿ ಟೋಪಿ ಧರಿಸದ ಯಡಿಯೂರಪ್ಪ: ಕಾರ್ಯಕಾರಿಣಿಗೆ ಶಾಸಕ ಕೆ.ಎಸ್‌. ಈಶ್ವರಪ್ಪ ಗೈರಾಗಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪಕ್ಷದ ಧ್ವಜಾರೋಹಣದಲ್ಲಿ ಕಾರ್ಯಕರ್ತರೊಬ್ಬರು ಶಾಸಕ ಬಿ.ಎಸ್‌. ಯಡಿಯೂರಪ್ಪನವರಿಗೆ ಬಿಜೆಪಿಯ ಟೋಪಿ ಹಾಕಲು ಮುಂದಾದರು. ಆದರೆ, ಅವರು ಅದನ್ನು ನಿರಾಕರಿಸಿದರು. ಉಳಿದ ಎಲ್ಲ ಮುಖಂಡರು ಟೋಪಿ ಧರಿಸಿದ್ದರು.

ಬೆಳಿಗ್ಗೆಯಿಂದ ಎಲ್ಲೆಡೆ ಓಡಾಡಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಎಲ್ಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಆದರೆ, ಸಭಾ ಕಾರ್ಯಕ್ರಮದ ವೇದಿಕೆಗೆ ಬರಲಿಲ್ಲ. ನಿರೂಪಕರು ಅವರನ್ನು ಕರೆದರೂ ಕೂಡ ಬರದೇ ಕಾರ್ಯಕಾರಿಣಿ ಸದಸ್ಯರೊಂದಿಗೆ ಕುಳಿತರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು