ಶನಿವಾರ, ಜನವರಿ 28, 2023
15 °C
ಆರೋಪದಲ್ಲಿ ಹುರುಳಿಲ್ಲ, ಆದರೂ ಸಮಗ್ರ ತನಿಖೆ – ಮುಖ್ಯಮಂತ್ರಿ

ಮತದಾರರ ಮಾಹಿತಿ ಕಳವಿಗೆ ಮುಖ್ಯಮಂತ್ರಿ ಬೊಮ್ಮಾಯಿ ಕಾರಣ: ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಖಾಸಗಿ ಸಂಸ್ಥೆಯೊಂದಕ್ಕೆ ಮತದಾರರ ಪಟ್ಟಿ ಪರಿಷ್ಕರಣೆಯ ಅನುಮತಿ ನೀಡಿ, ಮತದಾರರ ಮಾಹಿತಿ ಕಳವಿಗೆ ಬೆಂಗಳೂರು ಉಸ್ತುವಾರಿ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರಣರಾಗಿದ್ದಾರೆ’ ಎಂದು ಆರೋಪಿಸಿರುವ ಪ್ರತಿಪಕ್ಷ ಕಾಂಗ್ರೆಸ್, ‘ಮುಖ್ಯಮಂತ್ರಿ ಸ್ಥಾನಕ್ಕೆ ಅವರು ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದೆ.

‘ಮುಖ್ಯಮಂತ್ರಿ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸಬೇಕು. ಇಡೀ ಪ್ರಕರಣದ ಬಗ್ಗೆ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದೂ ಒತ್ತಾಯಿಸಿರುವ ಕಾಂಗ್ರೆಸ್‌ ನಾಯಕರು, ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ್ದಾರೆ.

ಈ ಬೆನ್ನಲ್ಲೇ, ಬಿಬಿಎಂಪಿ ವಿಶೇಷ ಆಯುಕ್ತ ಎಸ್. ರಂಗಪ್ಪ ಅವರು ನೀಡಿದ ದೂರಿನ ಅನ್ವಯ ಚಿಲುಮೆ
ಸಂಸ್ಥೆಯ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಈ ಪ್ರಕರಣದ ಬಗ್ಗೆ ಕೂಲಂಕಶ ವಿಚಾರಣೆ ನಡೆಸಲು ನಾಲ್ವರು ವಿಶೇಷ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ತಿಳಿಸಿದ್ದಾರೆ.

ಈ ಆರೋಪವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಬೊಮ್ಮಾಯಿ , ‘ಕಾಂಗ್ರೆಸ್ ನಾಯಕರು ಸಂಬಂಧ ಇಲ್ಲದ್ದನ್ನು ಕೇಳುತ್ತಿದ್ದಾರೆ. ಆದರೂ, ಇಡೀ ಪ್ರಕರಣದ ಸಮಗ್ರ ತನಿಖೆಗೆ ಸೂಚನೆ ನೀಡುತ್ತೇನೆ. ನಿಜ ಹೊರಗೆ ಬರಲಿ’ ಎಂದಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೊತೆ ಗುರುವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ‘ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಮತದಾರರ ಜಾಗೃತಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಗೆ ಇದೇ ಆ. 20ರಂದು ಅನುಮತಿ ನೀಡಲಾಗಿತ್ತು. ಈ ಸಂಸ್ಥೆಯವರು ಮತದಾರರ ಮಾಹಿತಿ ಪಡೆಯಲು ತಮ್ಮ ಸಿಬ್ಬಂದಿಗೆ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಎಂಬ ಗುರುತಿನ ಚೀಟಿ ನೀಡಿದ್ದಾರೆ. ಸರ್ಕಾರಿ, ಅರೆ ಸರ್ಕಾರಿ ಸಿಬ್ಬಂದಿ ಹೊರತಾಗಿ ಬೇರೆಯವರು ಬಿಎಲ್ಒ ಆಗಲು ಸಾಧ್ಯವಿಲ್ಲ’ ಎಂದರು.

‘ಚಿಲುಮೆ ಎಂಟರ್ ಪ್ರೈಸಸ್ ಪ್ರೈ.ಲಿ ಹಾಗೂ ಡಿಎಪಿ ಹೊಂಬಾಳೆ ಪ್ರೈ.ಲಿ ಎಂಬ ಸಂಸ್ಥೆಗಳೂ ಇದರಲ್ಲಿ ಭಾಗಿಯಾಗಿವೆ. ಈ ಸಂಸ್ಥೆ ಡಿಜಿಟಲ್ ಸಮೀಕ್ಷಾ ಎಂಬ ಆ್ಯಪ್‌ನಲ್ಲಿ ದತ್ತಾಂಶಗಳನ್ನು ಸಂಗ್ರಹಿಸಿದೆ. ಬಿಎಲ್ಒ ಗುರುತಿನ ಚೀಟಿ ಹೊಂದಿದವರು ಸರ್ಕಾರದ ಅಧಿಕಾರಿಗಳೆಂದು ಬಿಂಬಿಸಿ ಪ್ರತಿ ಮತದಾರನ ಜಾತಿ, ಲಿಂಗ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತಿತರ ಮಾಹಿತಿ ಸಂಗ್ರಹಿಸಿದೆ. ಈ ಸಂಸ್ಥೆಗಳ ನಿರ್ದೇಶಕ ಕೃಷ್ಣಪ್ಪ ರವಿಕುಮಾರ್, ಸರ್ಕಾರದ ಹಿರಿಯ ಸಚಿವರೊಬ್ಬರ ಆಪ್ತ. ಈ ಎಲ್ಲ ಕಂಪನಿಗಳು ಆ ಸಚಿವರ ಮಲ್ಲೇಶ್ವರ ಕ್ಷೇತ್ರದಲ್ಲಿ ಸ್ಥಾಪನೆಯಾಗಿವೆ. ಅವು ಮತದಾರರ ಮಾಹಿತಿ ಕಳವು, ಮಾಹಿತಿ ದುರ್ಬಳಕೆ, ನಂಬಿಕೆ ದ್ರೋಹ, ಪಿತೂರಿ ಅಪರಾಧ ಎಸಗಿವೆ’ ಎಂದು ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೆಸರು ಉಲ್ಲೇಖಿಸದೆ ಆರೋಪಿಸಿದರು.

‘ಬೊಮ್ಮಾಯಿ ಹಾಗೂ ಸಚಿವರ ಮಾತು ಕೇಳಿಕೊಂಡು ಬಿಬಿಎಂಪಿ ಮುಖ್ಯ ಆಯುಕ್ತರು ಈ ನೀಚ ಕೆಲಸಕ್ಕೆ ಕೈಹಾಕಿದ್ದಾರೆ. ಈ ಸಂಚು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ಬೇರೆ ಕಡೆಗಳಲ್ಲೂ ನಡೆಯುತ್ತಿದೆ. ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ನ. 16‌ರಂದು ಸರ್ಕಾರ ಹಿಂಪಡೆದಿದೆ. ಆದರೆ, ಅದಕ್ಕೆ ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ. ಬದಲಿಗೆ, ಈ ಸಂಸ್ಥೆ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ವಿಫಲವಾಗಿದ್ದು, ಯಾರೂ ಕೂಡ ಈ ಸಂಸ್ಥೆಗೆ ತಮ್ಮ ಮಾಹಿತಿ ಹಂಚಿಕೊಳ್ಳಬಾರದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ‌ಹೇಳಿ ದ್ದಾರೆ. ಆದರೆ, ಸಂಸ್ಥೆಯು ಈಗಾಗಲೇ ಸಾವಿರಾರು ಸಿಬ್ಬಂದಿ ಮೂಲಕ ಮತದಾ ರರ ಮಾಹಿತಿ ಸಂಗ್ರಹಿ ಸಿದ್ದು, ಈ ಅಕ್ರಮಕ್ಕೆ ಬೊಮ್ಮಾಯಿ ನೇರ ಹೊಣೆ’ ಎಂದರು.

ಆರೋಪ ಹಾಸ್ಯಾಸ್ಪದ: ಬೊಮ್ಮಾಯಿ
‘ಕಾಂಗ್ರೆಸ್ ಆರೋಪ ಹಾಸ್ಯಾಸ್ಪದ. ಆದರೂ, ಈ ಆರೋಪದ ಕುರಿತು ಪೊಲೀಸ್ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

‘ಕಾಂಗ್ರೆಸ್ ಪಕ್ಷ ವೈಚಾರಿಕವಾಗಿ ದಿವಾಳಿ ಆಗಿದೆ. ಚುನಾವಣಾ ಆಯೋಗವು ಮತಜಾಗೃತಿಗೆ ‘ಸ್ವೀಪ್’ ಎನ್ನುವ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಈ ಕಾರ್ಯಕ್ಕೆ ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಕೆಲವು ಸರ್ಕಾರೇತರ ಸಂಸ್ಥೆಗಳನ್ನು ಬಳಸಿಕೊಳ್ಳುತ್ತವೆ. ಮತದಾರರ ಮಾಹಿತಿ ಸೋರಿಕೆಯಾಗಿದೆ ಎನ್ನುವುದರಲ್ಲಿ ಹುರುಳಿಲ್ಲ. ಈ ಬಗ್ಗೆ ತನಿಖೆಗೆ ಕ್ರಮ ವಹಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದರು.

‘ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ₹ 130 ಕೋಟಿ ಖರ್ಚು ಮಾಡಿ, ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಿತು. ಜಾತಿ, ಉಪಜಾತಿ, ಮರಿಜಾತಿಗಳ ಮಾಹಿತಿ ಸಂಗ್ರಹಿಸಿ, ದಾಖಲೆ ಸಿದ್ಧಪಡಿಸಲಾಯಿತು. ಇದನ್ನು ಗುಪ್ತವಾಗಿ ಇರಿಸಿಕೊಂಡು ಚುನಾವಣೆ ನಡೆಸಲಾಯಿತು. ಆದರೂ ಸೋತ ಕಾಂಗ್ರೆಸ್ ಪಕ್ಷ, ಈಗ ಅನಗತ್ಯವಾಗಿ ಆರೋಪ ಮಾಡುತ್ತಿದೆ. ಈ ಪ್ರಕರಣದಲ್ಲಿ ಶಿಕ್ಷೆ ಆಗಬೇಕಾದರೆ ಮೊದಲು ಸಿದ್ದರಾಮಯ್ಯ ಹಾಗೂ ಅವರ ಸರ್ಕಾರಕ್ಕೆ ಆಗಬೇಕು’ ಎಂದರು. 

ಮಾನನಷ್ಟ ಮೊಕದ್ದಮೆ: ಅಶ್ವತ್ಥನಾರಾಯಣ
‘ಹೊಂಬಾಳೆ ಎನ್ನುವ ಯಾವುದೋ ಒಂದು ಸಂಸ್ಥೆಯ ಹೆಸರು ಹಿಡಿದುಕೊಂಡು ನನ್ನ ಮೇಲೆ ನಿರಾಧಾರ ಆರೋಪ ಮಾಡುತ್ತಿದ್ದಾರೆ. ಪದೇ ಪದೇ ನನ್ನ ಹೆಸರಿಗೆ ಮಸಿ ಬಳಿಯಲು ಹೊಂಚು ಹಾಕುತ್ತಿರುವ ಅವರೆಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

‘ಕಾಂಗ್ರೆಸ್‌ ನಾಯಕರು ಹೇಳುತ್ತಿರುವ ಹೊಂಬಾಳೆ ಸಂಸ್ಥೆಗೂ ನಮ್ಮ ಸೋದರನ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಕೆಲಸ. ಅದರಲ್ಲಿ ಮುಖ್ಯಮಂತ್ರಿಯಾಗಲಿ, ನನಗಾಗಲಿ ಏನೂ ಇಲ್ಲ. ಯಾರಾದರೂ ತಪ್ಪು ಮಾಡಿದ್ದರೆ ಕಾಂಗ್ರೆಸ್ಸಿನವರು ಆಯೋಗಕ್ಕೆ ದೂರು ಕೊಡಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದರು.

‘ಆಪರೇಷನ್ ಕಮಲದ ಮುಂದುವರಿದ ಭಾಗ’
‘ಆಪರೇಷನ್ ಕಮಲ’ದ ಮುಂದುವರಿದ ಭಾಗವಾದ ‘ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಗಂಭೀರ ಅಪರಾಧ ಪ್ರಕರಣ’ ಎಂದು ಸಿದ್ದರಾಮಯ್ಯ ಹೇಳಿದರು.

‘ಈ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ಚುನಾವಣಾ ಆಯೋಗ ಈ ಹೀನಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನಗಳಿವೆ. ಕೇಂದ್ರ ಚುನಾವಣಾ ಆಯೋಗ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್ ಕೃತ್ಯವನ್ನೇ ಬಿಜೆಪಿ ಮಾಡುತ್ತಿದೆ’
‘ಮತದಾರರ ಜಾಗೃತಿ ಹೆಸರಿನಲ್ಲಿ ಮತದಾರರ ದತ್ತಾಂಶ ಕದಿಯುವ ಕೃತ್ಯಕ್ಕೆ ಬಿಜೆಪಿ ಇಳಿದಿದೆ. ಈ ಹಿಂದೆ ಕಾಂಗ್ರೆಸ್ ಮಾಡಿದ್ದ ಕೃತ್ಯವನ್ನೇ ಈಗ ಬಿಜೆಪಿ ಮಾಡುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

‘ಸರ್ಕಾರದ ದುಡ್ಡಿನಲ್ಲಿ ಬಿಜೆಪಿಯು ಚುನಾವಣಾ ಅಕ್ರಮಕ್ಕೆ ಮುಂದಾಗಿದ್ದು, ಮತದಾರರ ಮಾಹಿತಿಯನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬೇನಾಮಿ ಹೆಸರಿನ ಸಚಿವರ ಸಂಸ್ಥೆಯೇ ಇದನ್ನು ಮಾಡುತ್ತಿದೆ. ಈ ಹಿಂದೆ ಬಿಬಿಎಂಪಿಯಲ್ಲಿ ಅಕ್ರಮ ಮಾಡಿ ಮಧ್ಯರಾತ್ರಿ ಕಡತಗಳಿಗೆ ಬೆಂಕಿ ಹಾಕಿದ್ದು ಇದೇ ಕಂಪನಿ’ ಎಂದು ದೂರಿದರು.

ಚಿಲುಮೆಗೆ ನೀಡಿದ್ದ ಅನುಮತಿ ರದ್ದು: ಚುನಾವಣಾ ಆಯೋಗ
 ಮತದಾರರ ಜಾಗೃತಿ ಅಭಿಯಾನ ನಡೆಸಲು ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು, ಆ ಸಂಸ್ಥೆಯ ಬಗ್ಗೆ ದೂರು ಬಂದ ಕೂಡಲೇ ರದ್ದುಪಡಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಎಂಬ ಗುರುತಿನ ಚೀಟಿಯನ್ನು ದುರುಪಯೋಗ ಮಾಡಿಕೊಂಡ ಬಗ್ಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ವೈಟ್‌ಫೀಲ್ಡ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದರೆ ನಿಯಮಾನುಸಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿ, ಬಿಬಿಎಂಪಿಯು ಯಾವುದೇ ಸಂಸ್ಥೆಗೆ ಸಮೀಕ್ಷೆ ನಡೆಸಲು ಅನುಮತಿ ನೀಡಿಲ್ಲ ಎಂದೂ ಅವರು ಹೇಳಿದ್ದಾರೆ.

‘ಚಿಲುಮೆ’, ಲೋಕೇಶ್ ವಿರುದ್ಧ ಎಫ್‌ಐಆರ್‌
ಅನುಮತಿಯಿಲ್ಲದೇ ಬೂತ್‌ಮಟ್ಟದ ಅಧಿಕಾರಿಗಳ (ಬಿಎಲ್‌ಒ) ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡು ಮನೆಗಳಿಗೆ ತೆರಳಿ ಮತದಾರರ ಗುರುತಿನ ಚೀಟಿ, ‘ಆಧಾರ್‌’ ಸಂಗ್ರಹಿಸಿ ಆ್ಯಪ್‌ವೊಂದಕ್ಕೆ ಮತದಾರರ ವೈಯಕ್ತಿಕ ಮಾಹಿತಿ ಅಪ್‌ಲೋಡ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ ‘ಚಿಲುಮೆ’ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಆ ಸಂಸ್ಥೆಯ ಕೆ.ಎಂ.ಲೋಕೇಶ್‌ ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬಿಬಿಎಂಪಿ ವಿಶೇಷ ಆಯುಕ್ತ ಎಸ್‌. ರಂಗಪ್ಪ (ಆಡಳಿತ ಹಾಗೂ ಚುನಾವಣೆ ಶಾಖೆ) ಈ ದೂರು ನೀಡಿದ್ದಾರೆ.

‘2018ರ ಡಿ.22ರಂದು ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಯ ಜಾಗೃತಿ ಹಾಗೂ ಆಧಾರ್ ಸಂಖ್ಯೆ ಲಿಂಕ್‌ ಮಾಡಲು ಷರತ್ತು ವಿಧಿಸಿ ಅನುಮತಿ ನೀಡಲಾಗಿತ್ತು. ಬಿಎಲ್‌ಒ ಹಾಗೂ ಮತದಾರರ ನೋಂದಣಾಧಿಕಾರಿಗಳ ಸಹಯೋಗಕ್ಕೆ ಸೂಚಿಸಲಾಗಿತ್ತು. ಆದರೆ, ಸಂಸ್ಥೆಯು ಷರತ್ತು ಉಲ್ಲಂಘಿಸಿದ್ದರಿಂದ ಇದೇ ನ.2ರಂದು ಅನುಮತಿ ರದ್ದು ಪಡಿಸಲಾಗಿತ್ತು. ಆದರೂ, ಸಂಸ್ಥೆ ಹಾಗೂ ಲೋಕೇಶ್‌ ಅನುಮತಿ ಯಿಲ್ಲದೆ ಬಿಎಲ್‌ಒ ಹೆಸರಿನಲ್ಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ಮನೆಮನೆಗೆ ತೆರಳಿ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿದ್ದಾರೆ. ಮತದಾರರ ವೈಯಕ್ತಿಕ ಮಾಹಿತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ರಂಗಪ್ಪ ಉಲ್ಲೇಖಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು