ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್‌ನಿಂದ 2ನೇ ಅಭ್ಯರ್ಥಿ ಕಣಕ್ಕೆ

ಗೊಂದಲದಲ್ಲಿ ಜೆಡಿಎಸ್‌, 3ನೇ ಅಭ್ಯರ್ಥಿ ಅಂತಿಮಗೊಳಿಸದ ಬಿಜೆಪಿ
Last Updated 30 ಮೇ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ದಿಢೀರ್‌ ನಿರ್ಧಾರ ಕೈಗೊಂಡಿರುವ ಕಾಂಗ್ರೆಸ್‌, ಪಕ್ಷದ ನಾಯಕ ಕೆ. ರೆಹಮಾನ್‌ ಖಾನ್‌ ಅವರ ಮಗ ಮನ್ಸೂರ್‌ ಅಲಿ ಖಾನ್‌ ಅವರಿಗೆ ಟಿಕೆಟ್‌ ನೀಡಿದೆ. ಪಕ್ಷದ ಮೊದಲನೇ ಅಭ್ಯರ್ಥಿ ಜೈರಾಂ ರಮೇಶ್‌ ಅವರೊಂದಿಗೆ ಖಾನ್‌ ಕೂಡ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಒಂದು ಸ್ಥಾನ ಪಡೆಯಲು 45 ಶಾಸಕರ ಬೆಂಬಲ ಅಗತ್ಯವಿದೆ. ವಿಧಾನಸಭೆಯಲ್ಲಿ ಮೂರೂ ಪಕ್ಷಗಳ ಬಲಾಬಲದ ಆಧಾರದಲ್ಲಿ ಬಿಜೆಪಿ ಎರಡು ಮತ್ತು ಕಾಂಗ್ರೆಸ್‌ ಒಂದು ಸ್ಥಾನ
ವನ್ನು ನಿರಾಯಾಸವಾಗಿ ಗೆಲ್ಲಬಹುದು. ಜೆಡಿಎಸ್‌ ಪಕ್ಷಕ್ಕೆ ಒಂದು ಸ್ಥಾನ ಗೆಲ್ಲುವಷ್ಟು ಮತಗಳಿಲ್ಲ. ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್‌ ಸಿದ್ಧತೆ ನಡೆಸುತ್ತಿದೆ. ಮೂರನೇ ಅಭ್ಯರ್ಥಿಯಾಗಿ ಉದ್ಯಮಿಗಳಾದ ಪ್ರಕಾಶ್‌ ಶೆಟ್ಟಿ ಅಥವಾ ಲಹರಿ ವೇಲು ಅವರನ್ನು ಕಣಕ್ಕಿಳಿಸಲು ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿದೆ. ಈ ಮಧ್ಯೆಯೇ ಕಾಂಗ್ರೆಸ್‌ ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಹೊಸ ದಾಳ ಉರುಳಿಸಿದೆ.

ಇಕ್ಕಟ್ಟಿಗೆ ಸಿಲುಕಿಸಲು ತಂತ್ರ: ಜೆಡಿಎಸ್‌ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕಾಗಿಯೇ ಕಾಂಗ್ರೆಸ್‌ ತನ್ನ ಎರಡನೇ ಅಭ್ಯರ್ಥಿಯನ್ನಾಗಿ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಿದೆ. ಜೆಡಿಎಸ್‌ ಮನ್ಸೂರ್‌ ಅಲಿ ಖಾನ್‌ ಅವರಿಗೆ ಬೆಂಬಲ ನೀಡದಿದ್ದರೆ ಆ ಪಕ್ಷ ಅಲ್ಪಸಂಖ್ಯಾತರ ವಿರೋಧಿ ಎಂಬ ಸಂದೇಶ ರವಾನಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ನಾಯಕರಲ್ಲಿದೆ.

ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕಸರತ್ತು ನಡೆಸುತ್ತಿರುವ ಕುಪೇಂದ್ರ ರೆಡ್ಡಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರನ್ನು ಭೇಟಿಮಾಡಿ ಕಾಂಗ್ರೆಸ್‌ನ ಹೆಚ್ಚುವರಿ ಮತಗಳನ್ನು ತಮಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಬೆಂಬಲ ಕೋರಲಿಲ್ಲ. ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಪಕ್ಷದಿಂದಲೇ ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ತಂತ್ರ ಹೂಡಿದರು ಎಂಬ ಮಾತೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಕುಪೇಂದ್ರ ರೆಡ್ಡಿಯೇ ಅಭ್ಯರ್ಥಿ: ಕುಪೇಂದ್ರ ರೆಡ್ಡಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ನಿರ್ಧಾರವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಕೈಗೊಂಡಿದ್ದಾರೆ. ಸೋಮವಾರ ಸಂಜೆ ಕೆಲ ಪ್ರಮುಖರ ಜತೆ ಚರ್ಚೆ ನಡೆಸಿದ ಅವರು, ಮಂಗಳವಾರ ನಾಮಪತ್ರ ಸಲ್ಲಿಸುವಂತೆ ರೆಡ್ಡಿ ಅವರಿಗೆ ಸೂಚಿಸಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಪ್ರವಾಸಕ್ಕೆ ತೆರಳುವ ಮುನ್ನವೇ ಅಭ್ಯರ್ಥಿ ಕುರಿತು ಚರ್ಚಿಸಲಾಗಿತ್ತು. ಬಿಜೆಪಿಯ ಬೆಂಬಲ ಪಡೆದು ರೆಡ್ಡಿ ಅವರನ್ನು ರಾಜ್ಯಸಭೆಗೆ ಆಯ್ಕೆಮಾಡುವ ಯೋಚನೆ ಜೆಡಿಎಸ್‌ ವರಿಷ್ಠರಲ್ಲಿದೆ’ ಎಂದು ಮೂಲಗಳು ಹೇಳಿವೆ.

ನಿರ್ಮಲಾ, ಜಗ್ಗೇಶ್‌ ಇಂದು ನಾಮಪತ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಚಿತ್ರನಟ ಜಗ್ಗೇಶ್‌ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಮಂಗಳವಾರ ನಾಮಪತ್ರ ಸಲ್ಲಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT