ಮಂಗಳವಾರ, ಆಗಸ್ಟ್ 9, 2022
23 °C
ನವದೆಹಲಿಯಲ್ಲಿ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಜತೆಗೆ ರಾಹುಲ್‌ ಗಾಂಧಿ ಪ್ರತ್ಯೇಕ ಚರ್ಚೆ

ಚುನಾವಣೆಗೆ ಸಾಮೂಹಿಕ ನಾಯಕತ್ವ: ಕಾಂಗ್ರೆಸ್ ಹೈಕಮಾಂಡ್‌ ಸ್ಪಷ್ಟೋಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಬೆಂಗಳೂರು: ಕರ್ನಾಟಕ ವಿಧಾನಸಭೆಯ ಚುನಾವಣಾ ದಿನಾಂಕ ಘೋಷಣೆಗೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೇಡಿಕೆಗೆ ಕಾಂಗ್ರೆಸ್‌ ಹೈಕಮಾಂಡ್‌ ಮನ್ನಣೆ ನೀಡಿಲ್ಲ.

ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಜತೆಗೆ ಮಂಗಳವಾರ ಸುದೀರ್ಘವಾಗಿ ಚರ್ಚೆ ನಡೆಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ಇಬ್ಬರೂ ನಾಯಕರನ್ನು ಬುಧವಾರ ಪ್ರತ್ಯೇಕವಾಗಿ ಕರೆಸಿ ಸಮಾಲೋಚನೆ ನಡೆಸಿದರು. ಉಭಯ ನಾಯಕರು ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ರಾಹುಲ್‌ ಸೂಚಿಸಿದರು. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಇಬ್ಬರಿಗೂ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ ಎಂಬುದಾಗಿ ಭರವಸೆ ನೀಡಿದರು ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.

ನಾಯಕರೊಳಗಿನ ಭಿನ್ನಾಭಿಪ್ರಾ ಯದ ಬಗ್ಗೆ ರಾಹುಲ್ ಅವರ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಪಂಜಾಬ್‌ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಯಿತು. ಆದರೆ, ಇದರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಪಕ್ಷದಲ್ಲಿ ಮೂರು ಬಣಗಳು ಸೃಷ್ಟಿಯಾದವು. ಪಕ್ಷವು ಹೀನಾಯವಾಗಿ ಸೋತಿತು. ಅಂತಹ ತಪ್ಪನ್ನು ಕರ್ನಾಟಕದಲ್ಲಿ ಮಾಡಲು ಪಕ್ಷ ಸಿದ್ದವಿಲ್ಲ ಎಂದು ರಾಜ್ಯ ನಾಯಕರಿಗೆ ರಾಹುಲ್‌ ಸ್ಪಷ್ಟಪಡಿಸಿದರು.

ಎಐಸಿಸಿ ಸೂಚನೆ ಮೇರೆಗೆ ರಾಜ್ಯದಲ್ಲಿ ಸಮೀಕ್ಷೆ ನಡೆಸಿದ್ದ ಚುನಾ ವಣಾ ನೀತಿ ತಂತ್ರಜ್ಞ ಸುನೀಲ್ ಕನು ಗೋಲು, ಅವರು ಹೈಕಮಾಂಡ್ ಸಲ್ಲಿಸಿದ್ದ ವರದಿಯಲ್ಲಿ ‘ಬಿಜೆಪಿಯ ಪೈಪೋಟಿ ಎದುರಿಸಿ, ಕಾಂಗ್ರೆಸ್ ನೂರರ ಗಡಿ ದಾಟಬೇಕಿದ್ದರೆ ಪ್ರಚಾರ, ಕಾರ್ಯತಂತ್ರದ ಶೈಲಿಯನ್ನು ಪುನರ್‌ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

ಸಿದ್ದರಾಮಯ್ಯ ಬಣ ಹಾಗೂ ಶಿವಕುಮಾರ್ ಬಣಗಳ ನಡುವಿನ ಭಿನ್ನಮತದ ಬಗ್ಗೆಯೂ ಸಮೀಕ್ಷೆಯಲ್ಲಿ ಪ್ರಸ್ತಾಪಿಸಿರುವ ಅವರು, ಕಾರ್ಯಕರ್ತರ ಹಂತದಲ್ಲೂ ಎರಡು ಗುಂಪುಗಳು ಸೃಷ್ಟಿಯಾಗಿವೆ. ಸಮನ್ವಯದ ಕೊರತೆ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಬಗ್ಗೆ ಕೂಡಲೇ ಗಮನ ಹರಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಅಧಿಕಾರಕ್ಕೆ ಬರುವುದು ಕಷ್ಟ ಎಂದೂ ಹೇಳಿದ್ದರು.

‘ಕರ್ನಾಟಕದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಆಶಾದಾಯಕವಾಗಿದೆ. ಮೇಲ್ನೋಟಕ್ಕೆ ಪಕ್ಷದ ಪರವಾದ ವಾತಾವರಣ ಇದೆ. ಆದರೆ, ಬಿಜೆಪಿ ಭಾರಿ ಪೈಪೋಟಿ ನೀಡುತ್ತಿದೆ. ಬಿಜೆಪಿ ವಿರುದ್ಧ ಅಸ್ತ್ರ ಪ್ರಯೋಗಿಸಲು ಪ್ರಚಾರ ಹಾಗೂ ಕಾರ್ಯತಂತ್ರ ಹೇಗಿರಬೇಕು?’ ಎಂಬುದನ್ನು ಪಕ್ಷದ ನಾಯಕರಿಗೆ ಸುನೀಲ್ ವಿವರಿಸಿದ್ದಾರೆ. ಈ ಅಂಶಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ ನಾಯಕರು, ಪಕ್ಷ ಸಂಘಟನೆ ಬಲಪಡಿಸಿ, ಅಧಿಕಾರ ಗದ್ದುಗೆ ಹಿಡಿಯಲು ರೂಪಿಸಿಕೊಳ್ಳಬೇಕಾದ ಕಾರ್ಯತಂತ್ರ, ಅದರ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿದ್ದಾರೆ.

 

ಒಗ್ಗಟ್ಟಿನಿಂದ ಚುನಾವಣೆ:ಡಿಕೆಶಿ

‘ನಮ್ಮ ಪಕ್ಷದ ಪ್ರತಿಯೊಬ್ಬ ನಾಯಕರಿಗೂ ಒಂದೊಂದು ರೀತಿಯ ಬಲ ಇದೆ. ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರದ ಆಡಳಿತವನ್ನು ಕೊನೆಗಾಣಿಸಬೇಕಿದೆ. ಇದಕ್ಕಾಗಿ ಕಾರ್ಯತಂತ್ರ ರೂಪಿಸಿದ್ದೇವೆ. ಪಕ್ಷದ ವರಿಷ್ಠರು ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಆ ಪ್ರಕಾರವೇ, ಮುನ್ನಡೆಯುತ್ತೇವೆ’ ಎಂದರು.

ಸಿದ್ದರಾಮೋತ್ಸವದಲ್ಲಿ ರಾಹುಲ್‌ ಭಾಗಿ

ದಾವಣಗೆರೆಯಲ್ಲಿ ಆಗಸ್ಟ್‌ 3ರಂದು ನಡೆಯಲಿರುವ ‘ಸಿದ್ದರಾಮೋತ್ಸವ’ದಲ್ಲಿ ರಾಹುಲ್‌ ಗಾಂಧಿ ಪಾಲ್ಗೊಳ್ಳಲಿದ್ದಾರೆ. ‘ಕಾರ್ಯಕ್ರಮಕ್ಕೆ ಬರುವಂತೆ ನಾನು ನೀಡಿದ ಆಮಂತ್ರಣವನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ’ ಎಂದು ಸಿದ್ದರಾಮಯ್ಯ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು