ಶನಿವಾರ, ಜುಲೈ 24, 2021
21 °C

ಹಣ, ಹೆಣದ ಮೇಲೆ ಕಾಂಗ್ರೆಸ್ ರಾಜಕೀಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: 'ಯಾವ ದೇಶದಲ್ಲೂ ಕೋವಿಡ್ ಮುಂದಿಟ್ಟುಕೊಂಡು ಯಾರೂ ರಾಜಕೀಯ ಮಾಡಿಲ್ಲ. ಆದರೆ, ನಮ್ಮ‌ ದೇಶದಲ್ಲಿ ಕಾಂಗ್ರೆಸ್‌ಗೆ ಅದೊಂದು ರಾಜಕೀಯ ಅಸ್ತ್ರವಾಗಿದೆ. ಹಣ ಮತ್ತು ಹೆಣದ ಮೇಲೆ ರಾಜಕೀಯ ಮಾಡುವ ಪ್ರವೃತ್ತಿ ಅವರದ್ದು' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪರಿಸ್ಥಿತಿಯ ಅರಿವಿಲ್ಲದೆ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಮೊದಲಿನಿಂದಲೂ ಇದೇ ಪ್ರವೃತ್ತಿ ಅವರಲ್ಲಿ ಬೆಳೆದು ಬಂದಿದೆ. ಅದರ ಪರಿಣಾಮ ಎರಡು ಅವಧಿಯಲ್ಲಿಯೂ ಸಮರ್ಥವಾಗಿ ವಿರೋಧ ಪಕ್ಷದಲ್ಲಿ ಇರಲು ಅವರಿಗೆ ಸಾಧ್ಯವಾಗಿಲ್ಲ. ರಾಹುಲ್ ಗಾಂಧಿ ಸಹ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ.‌ ಬಾಯಿಗೆ ಬಂದಂತೆ ಮಾತನಾಡುತ್ತಿರುವುದೇ ಅವರ ಹಿನ್ನೆಡೆಗೆ ಕಾರಣ' ಎಂದು ವಿಶ್ಲೇಷಿಸಿದರು.

'ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಎರಡನೇ ಬಾರಿ ಸೋಂಕು ತಗುಲಿದಾಗ, ಕಾಂಗ್ರೆಸ್ ಮುಖಂಡರು ಲಸಿಕೆಯೇ ಸರಿಯಿಲ್ಲ. ಅದಕ್ಕಾಗಿಯೇ ಅವರಿಗೆ ಸೋಂಕು ಮತ್ತೊಮ್ಮೆ ತಗುಲಿದೆ ಎಂದು‌ ಅಪಪ್ರಚಾರ ಮಾಡಿದರು. ಸಿ.ಎಂ. ಲಸಿಕೆ ಪಡೆದದ್ದರಿಂದಲೇ ಮೂರ್ನಾಲ್ಕು ದಿನಗಳಲ್ಲಿ ಗುಣಮುಖರಾಗಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು' ಎಂದರು.

'ಕೊರೊನಾ ಎರಡನೇ ಅಲೆ ನಿರೀಕ್ಷೆ ಮೀರಿ ವ್ಯಾಪಿಸಿದ್ದರಿಂದ, ಹತ್ತು ದಿನಗಳ ಕಾಲ ಸಮಸ್ಯೆ ಎದುರಿಸುವಂತಾಯಿತು.‌ ಅದನ್ನೇ ವೈಫಲ್ಯ ಎಂದು ಟೀಕಿಸುವುದು ಸರಿಯಲ್ಲ. ಈಗ ವೈದ್ಯಕೀಯ ಸೌಲಭ್ಯದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ' ಎಂದು ಪ್ರಶ್ನಿಸಿದರು.

'ಕೇಂದ್ರ ಸಚಿವ ಸಂಪುಟ ವಿಸ್ತರಣೆ ವಿಷಯ ನನಗೆ ಗೊತ್ತಿಲ್ಲ. ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿ ಆ ಕುರಿತು ಚರ್ಚಿಸುತ್ತಾರೆ. ಸಚಿವ ಸಂಪುಟ ವಿಸ್ತರಣೆ ನನ್ನ ಮಟ್ಟದಲ್ಲಿ ನಡೆಯುವ ಕಾರ್ಯವೂ ಅಲ್ಲ. ಸುರೇಶ ಅಂಗಡಿ ಅವರ ನಿಧನದಿಂದ ಖಾಲಿ ಇರುವ ಸಚಿವ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವುದು ಸಹ ನನ್ನ ಕೆಲಸವಲ್ಲ' ಎಂದರು.

'ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಅವರನ್ನು ಭೇಟಿ ಮಾಡಿದ್ದಾರೆ ಎಂದರೆ, ಮುಖ್ಯಮಂತ್ರಿಯನ್ನೇ ಬದಲಾವಣೆ ಮಾಡುತ್ತಾರೆ ಎನ್ನುವುದು ಸರಿಯಲ್ಲ. ಅಲ್ಲಿಯ ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಊಹಾಪೋಹ' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು