ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಹಂತದ ಪಠ್ಯದ ಮೂಲಕ ಮಕ್ಕಳಿಗೆ ವಿಷಪ್ರಾಶನ: ಕೆ.ಆರ್‌.ರಮೇಶ್ ಕುಮಾರ್ ಕಿಡಿ

Last Updated 31 ಮೇ 2022, 12:20 IST
ಅಕ್ಷರ ಗಾತ್ರ

ಬೆಂಗಳೂರು:‌ ‘ತಾವು ಉಂಡ ನಂಜನ್ನು ಮುಂದಿನ ಜನಾಂಗಕ್ಕೂ ಉಣಿಸಬೇಕೆಂದು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಪ್ರಾಥಮಿಕ ಹಂತದ ಪಠ್ಯಪುಸ್ತಕದಲ್ಲಿಯೇ ವಿಷಪ್ರಾಶನ ಮಾಡಲು ಹೊರಟಿದೆ. ಚಕ್ರತೀರ್ಥರಿಗೆ, ಚಕ್ರವರ್ತಿಗಳಿಗೆ, ಪ್ರತಾಪ ಸಿಂಹರುಗಳಿಗೆ ಜಗತ್ತಿನ ಇತಿಹಾಸದ ಅರಿವು ಇದೆಯೋ ಇಲ್ಲವೋ ಗೊತ್ತಿಲ್ಲ’ ಎಂದು ಕಾಂಗ್ರೆಸ್‌ ಶಾಸಕ ಕೆ.ಆರ್‌. ರಮೇಶ್ ಕುಮಾರ್ ಕಿಡಿಕಾರಿದ್ದಾರೆ.

‘ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪಠ್ಯಪುಸ್ತಕಗಳ ಮರು ಪರಿಷ್ಕರಣೆಗಾಗಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ತರಾತುರಿಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳು ರಾಜ್ಯದ ನಾಗರಿಕರ ಪ್ರಜ್ಞೆಯನ್ನು ತೀವ್ರವಾಗಿ ನೋಯಿಸಿದೆ. ಈ ವಿಚಾರದಲ್ಲಿ ಉಂಟಾಗಿರುವ ಎಲ್ಲ ಗೊಂದಲಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಕ್ಷಣ ಇತಿಶ್ರೀ ಹಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಸಮಕಾಲೀನ ಸಮಾಜದ ಅನೇಕ ಜ್ವಲಂತ ಸಮಸ್ಯೆಗಳ ವಿಷಯದಲ್ಲಿ ಅತ್ಯಂತ ಜವಾಬ್ದಾರಿ ಹಾಗೂ ಸಾಂವಿಧಾನಿಕ ಪ್ರಜ್ಞೆವುಳ್ಳವರಾಗಿ ಇಡೀ ನಾಡು ಹೆಮ್ಮೆಪಡತಕ್ಕಂಥ ನಮ್ಮ ಹೆಮ್ಮೆಯ ಸಾಕ್ಷಿಪ್ರಜ್ಞೆಗಳಾದ ದೇವನೂರ ಮಹಾದೇವ ಮತ್ತು ಬರಗೂರು ರಾಮಚಂದ್ರಪ್ಪ ಅವರ ಅಭಿಪ್ರಾಯಗಳನ್ನೂ ಧಿಕ್ಕರಿಸಿ ಅವರ ಬಗ್ಗೆಯೂ ಹಗುರವಾಗಿ ಮಾತನಾಡುವುದು ಅಕ್ಷಮ್ಯ, ಅಪರಾಧ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ರಚಿತವಾದ ಪಠ್ಯಪುಸ್ತಕಗಳ ಪುನರ್‌ಪರಿಷ್ಕರಣೆ ಮಾಡಬೇಕಾಗಿದ್ದಲ್ಲಿ ಒಂದು ಜವಾಬ್ದಾರಿಯುತ ಸರ್ಕಾರ ತನ್ನ ಕನಿಷ್ಠ ವಿವೇಚನೆ ತೋರಿಸಬೇಕಾಗಿತ್ತು. ಪುನರ್‌ರಚಿತ ಸಮಿತಿಯಲ್ಲಿರುವ ಸದಸ್ಯರು ಉದ್ದೇಶಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಬ್ರಾಹ್ಮಣರೇ ಆಗಿರುತ್ತಾರೆ. ಬುದ್ಧ, ಬಸವ, ಅಂಬೇಡ್ಕರ್‌ರವರ ಆಲೋಚನೆಗಳನ್ನು ವಿರೋಧಿಸುವವರೇ ಆಗಿರುತ್ತಾರೆ. ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ರೋಹಿತ್ ಚಕ್ರತೀರ್ಥ ಅವರ ಶೈಕ್ಷಣಿಕ ಹಿನ್ನೆಲೆಯಾಗಲಿ ಅಥವಾ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾರಸ್ವತ ಲೋಕಗಳಲ್ಲಿ ಅವರ ಸ್ಥಾನಮಾನದ ಬಗ್ಗೆ ಎಲ್ಲವೂ ನಿಗೂಢವಾಗಿದೆ. ಕುವೆಂಪು ಬಗ್ಗೆಯೂ ಅಗೌರವ ತೋರಿಸುವ ಕುತ್ಸಿತ ಕ್ರಿಮಿಗಳು ವಿರಾಜಮಾನರಾಗುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ’ ಎಂದು ‌ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸಮಿತಿಯ ಪ್ರಯತ್ನಗಳು ಬಹುಶಃ ಇತಿಹಾಸವನ್ನು ತಿರುಚಲು ಎಳೆ ಪ್ರಾಯದ ಮಕ್ಕಳೇ ಸೂಕ್ತ ವೇದಿಕೆ ಎಂದು ಮುಂದೆ ಹೊರಟಂತೆ ಕಾಣುತ್ತದೆ. ಗಾಂಧಿಯನ್ನು ಬಲಿ ತೆಗೆದುಕೊಂಡ ದೇಶ ಭಕ್ತರಿಗೆ ಸಹಜವಾಗಿಯೇ ಕೇಶವ ಬಲಿರಾಂ ಹೆಡಗೇವಾರ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಕಾಣುವುದು ಸಮಂಜಸವಾಗಿಯೇ ಇದೆ’ ಎಂದೂ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT