ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಗೆ ಸೋಲಿನ ಉಡುಗೊರೆ ನೀಡಿದ ಬಿಜೆಪಿ: ಆರ್.ಧ್ರುವನಾರಾಯಣ

Last Updated 20 ಜೂನ್ 2022, 9:42 IST
ಅಕ್ಷರ ಗಾತ್ರ

ಮಡಿಕೇರಿ: ಮೈಸೂರಿಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ನಾಯಕರು ವಿಧಾನಪರಿಷತ್ತಿನ ಪದವೀಧರ ಕ್ಷೇತ್ರದ ಚುನಾವಣೆಯ ಸೋಲಿನ ಉಡುಗೊರೆ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ತಿಳಿಸಿದರು.

‘ನಿರುದ್ಯೋಗಿ ಪದವೀಧರರರು ಬಿಜೆಪಿ ವಿರುದ್ಧ ಆಕ್ರೋಶಗೊಂಡಿರುವುದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ. ಮತದಾರರೇ ಸೂಕ್ತ ಉತ್ತರ ಕೊಟ್ಟಿರುವುದರಿಂದ ಪ್ರಧಾನಿ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿಲ್ಲ’ ಎಂದು ಇಲ್ಲಿ ಸೋಮವಾರ ಸುದ್ದಿಗಾರರಿಗೆ ಹೇಳಿದರು.

‘ಈ ಹಿಂದೆ ಪ್ರಧಾನಿ ಬಂದಿದ್ದಾಗ ಮೈಸೂರನ್ನು ಪ್ಯಾರೀಸ್ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಹೊಸ ಯೋಜನೆಯನ್ನು ಅವರು ನೀಡಿಲ್ಲ. ಸದ್ಯ, ಅಖಿಲ ಭಾರತ ವಾಕ್‌– ಶ್ರವಣ ಸಂಸ್ಥೆಯ (ಆಯುಷ್‌)ವಿಸ್ತರಣೆಯ ಯೋಜನೆ ಯುಪಿಎ ಸರ್ಕಾರದ ಅವಧಿಯಲ್ಲಿ ರೂಪಿತವಾಗಿತ್ತು. ಆಗ ₹ 134 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು. ಆ ಯೋಜನೆಯನ್ನು ಈಗ ಉದ್ಘಾಟಿಸುತ್ತಿದ್ದಾರೆ’ ಎಂದು ಹೇಳಿದರು.

ಅಗ್ನಿಪಥ್ ಯೋಜನೆ ಜಾರಿಗೆ ಮುನ್ನ ರಕ್ಷಣಾ ಸಮಿತಿಯ ಉಪಸಮಿತಿಗಳಲ್ಲಿ ಸಾಕಷ್ಟು ಚರ್ಚೆಯಾಗಬೇಕಿತ್ತು. ಅದರ ಸಾಧಕ, ಬಾಧಕಗಳನ್ನು ಕುರಿತು ಜನರಿಗೆ ತಿಳಿಸಬೇಕಿತ್ತು. ಆದರೆ ಅದಾವುದನ್ನೂ ಮಾಡದ ಸರ್ಕಾರ ಸೇನಾ ವೆಚ್ಚವನ್ನು ಕಡಿತ ಮಾಡುವ ಏಕೈಕ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದು ಯುವಜನರ ಆಕ್ರೋಶಕ್ಕೆ ತುತ್ತಾಗಿದೆ. ಕೂಡಲೇ ಈ ಯೋಜನೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ, ‘ದೇಶವೇ ಹೊತ್ತಿ ಉರಿಯುವಾಗ ರಾಜನೊಬ್ಬ ಪಿಟೀಲು ಬಾರಿಸುತ್ತಿದ್ದಂತೆ ನರೇಂದ್ರ ಮೋದಿ ಪ್ರವಾಸ ಇದೆ’ ಎಂದು ವ್ಯಂಗ್ಯವಾಡಿದರು.

ದೇಶದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆಯುತ್ತಿವೆ. ರಾಹುಲ್‌ ಗಾಂಧಿಯ ಕುರಿತು ಭಯಗೊಂಡು ಅವರ ಮೇಲೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT