ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಡುತೋಪು ಮರಳಿ ಪಡೆಯಲು ಸಿಎಂಗೆ ಸಿದ್ದರಾಮಯ್ಯ ಪತ್ರ

Last Updated 21 ನವೆಂಬರ್ 2020, 11:52 IST
ಅಕ್ಷರ ಗಾತ್ರ

ಶಿವಮೊಗ್ಗ: ನೆಡುತೋಪುಗಳಿರುವ ಅರಣ್ಯ ಪ್ರದೇಶವನ್ನು ಖಾಸಗಿ ಕಂಪನಿಗಳಿಗೆ ನೀಡಲು ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

‌ಭದ್ರಾವತಿ ಎಂಪಿಎಂ ಕಾರ್ಖಾನೆಗೆ ಕಚ್ಚಾ ಸಾಮಗ್ರಿ ಪೂರೈಸಲು ನೀಡಲಾಗಿದ್ದ 30 ಸಾವಿರ ಹೆಕ್ಟೇರ್ ಅರಣ್ಯ ಖಾಸಗಿಗೆ ನೀಡುವುದರ ವಿರುದ್ಧ ಮಲೆನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಭಟನೆಗಳು ಆರಂಭವಾಗಿದೆ. ಪ್ರಗತಿಪರರು, ಪರಿಸರ ಹೋರಾಟಗಾರರು, ಜನಸಾಮಾನ್ಯರೂ ಆತಂಕ ವ್ಯಕ್ತಪಡಿಸಿ, ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೂ, ಸರ್ಕಾರ ಮಲೆನಾಡಿನ ಜನಜೀವನ, ಭವಿಷ್ಯದ ಜತೆಗೆ ಆಟವಾಡುತ್ತಿದೆ ಎಂದು ದೂರಿದ್ದಾರೆ.

1980ರಲ್ಲಿ ಭದ್ರಾವತಿ ಎಂಪಿಎಂ ಕಾರ್ಖಾನೆಗೆ 40 ವರ್ಷಗಳ ಸೀಮಿತ ಅವಧಿಗೆ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಸೇರಿದ ಅರಣ್ಯ ಪ್ರದೇಶ ಲೀಸ್‌ಗೆ ನೀಡಲಾಗಿತ್ತು. ಲೀಸ್ ಅವಧಿ ಮುಗಿದ ಕೂಡಲೇ ಈ ಪ್ರದೇಶ ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಪ್ರಸಕ್ತ ವರ್ಷ ಆಗಸ್ಟ್‌ನಲ್ಲಿ ಲೀಸ್ ಅವಧಿ ಮುಗಿದಿದೆ. ಎಂಪಿಎಂ ಕಾರ್ಖಾನೆ ಸ್ಥಗಿತವಾಗಿ ವರ್ಷಗಳೇ ಕಳೆದಿವೆ. ಹಾಗಾಗಿ, ನಿಯಮಾನುಸಾರ ನೆಡುತೋಪುಗಳನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ನೆಡುತೋಪಿಗೆ ಅವಕಾಶ ಕೊಟ್ಟಿದ್ದ ಕಾರಣ ಸಾಕಷ್ಟು ಅನಾಹುತಗಳಾಗಿವೆ. ಮಲೆನಾಡು, ಪಶ್ಚಿಮಘಟ್ದಟ ಕಾಡುಗಳಲ್ಲಿನ ಜನಜೀವನ ಮೊದಲಿನ ರೀತಿ ಇಲ್ಲ. ಪಶ್ಚಿಮಘಟ್ಟ ಪರಿಸರದ ಮೇಲೆ ನಾನಾ ರೀತಿಯ ಆಕ್ರಮಣಗಳಿಂದ ಸಂಕಷ್ಟ ಎದುರಾಗಿದೆ. ಭೂಕುಸಿತ ಸಮಸ್ಯೆ ತೀವ್ರತರವಾಗಿದೆ. ಮತ್ತೆ ಖಾಸಗಿಗೆ ನೀಡಿದರೆ ಸಮಸ್ಯೆ ಬಿಗಡಾಯಿಸಲಿದೆ ಎಂದು ಎಚ್ಚರಿಸಿದ್ದಾರೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಹೋರಾಟ ಸಮಿತಿ ಭೇಟಿ ಮಾಡಿದಾಗ ಶಿವಮೊಗ್ಗ ಸಂಸದರು ಒಪ್ಪಿದರೆ ನಮ್ಮದೇನು ತಕರಾರು ಇಲ್ಲ ಎಂದಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಯಥಾಸ್ಥಿತಿ ಮುಂದುವರಿಸಲು ತೀರ್ಮಾನ ಕೈಗೊಂಡಿರುವುದು ಅನುಮಾನ ಗಟ್ಟಿಯಾಗಲು ಕಾರಣವಾಗಿದೆ. ತಕ್ಷಣ ಭೂಮಿ ವಶಕ್ಕೆ ಪಡೆಯಬೇಕು. ಅಲ್ಲಿ ಸಹಜ ಕಾಡು ಬೆಳೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT