ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ ಕಾಯಿನ್‌ ಹಗರಣ: ಕಾಂಗ್ರೆಸ್‌ ಮುಖಂಡರದ್ದು ಊಹಾಪೋಹದ ಮಾತು; ಪ್ರತಾಪ ಸಿಂಹ

Last Updated 14 ನವೆಂಬರ್ 2021, 8:47 IST
ಅಕ್ಷರ ಗಾತ್ರ

ಮೈಸೂರು: ‘ಬಿಟ್ ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ಮುಖಂಡರು ಬರೀ ಊಹಾಪೋಹದ ಮಾತುಗಳನ್ನಾಡುತ್ತಿದ್ದಾರೆ’ ಎಂದು ಸಂಸದ ಪ್ರತಾಪ ಸಿಂಹ ದೂರಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಂದೆಡೆ ಗಾಳಿಸುದ್ದಿ ಹರಡಿದರೆ, ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ದೆಹಲಿಯಲ್ಲಿ ಕುಳಿತು ಏನೇನೋ ಮಾತನಾಡುತ್ತಾರೆ. ₹7 ಸಾವಿರ ಕೋಟಿ ಹಗರಣ ನಡೆದಿದ್ದರೆ, ಹಣ ಕಳೆದುಕೊಂಡವರು ಯಾರು? ಯಾವ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಸವಾಲೆಸೆದರು.

‌‘ಬಿಟ್‌ ಕಾಯಿನ್ ಹಗರಣ ಜನರಿಗೆ ಕಾಲ್ಪನಿಕ ವಿಷಯದಂತೆ ಕಾಣಿಸುತ್ತಿದೆ. 13 ಬಾರಿ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಈ ಹಗರಣದ ಬಗ್ಗೆ ಸ್ವಲ್ಪ ಅರಿವಾದರೂ ಇರುತ್ತೆ. ಅದನ್ನಾದರೂ ಜನರಿಗೆ ಹೇಳಿ. ಅದರ ಬದಲು ಮುಖ್ಯಮಂತ್ರಿ ಬದಲಾಗುತ್ತಾರೆ, ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಕೆಳಗಿಳಿಸುತ್ತಾರೆ ಎಂದು ಮಾಧ್ಯಮಗಳ ಮೂಲಕ ಸುಳ್ಳು ಹರಡಬೇಡಿ’ ಎಂದರು.

ಸಿದ್ದರಾಮಯ್ಯ ಏನಾದರೂ ಆಧಾರ ಇಟ್ಟುಕೊಂಡು ಮಾತನಾಡಿದರೆ ನಾವು ಬೆಲೆ ಕೊಡುತ್ತೇವೆ. ಯಾವುದೇ ಆಧಾರವಿಲ್ಲದೆ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಮುಖಂಡರಿಗೆ ಕನಿಷ್ಠ ನೈತಿಕತೆಯೂ ಇಲ್ಲ. ಕಾಂಗ್ರೆಸ್‌ ಏನೇ ಅಪಪ್ರಚಾರ ಮಾಡಿದರೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ನಮ್ಮ ಸಿ.ಎಂ ಭವಿಷ್ಯದ ಚಿಂತೆ ನಿಮಗೇಕೆ’ ಎಂದು ಪ್ರಶ್ನಿಸಿದರು.

ಪ್ರಿಯಾಂಕ್‌ ಖರ್ಗೆ ಹೆಸರಲ್ಲೂ ಸ್ವಂತಿಕೆ ಇಲ್ಲ: ಶಾಸಕ ಪ್ರಿಯಾಂಕ್‌ ಖರ್ಗೆ ತಮ್ಮನ್ನು ‘ಪೇಪರ್‌ ಟೈಗರ್‌’ ಎಂದಿರುವುದಕ್ಕೆ ಪ್ರತಿಕ್ರಿಯಿಸಿ, ‘ಪತ್ರಿಕೋದ್ಯಮದ ಮೂಲಕ ಸಿಂಹ ಗರ್ಜನೆ ಮಾಡಿ ಬಂದವ ನಾನು. ಪೇಪರ್‌ ಟೈಗರ್‌ ಎಂದು ಕರೆದರೆ ಏನೂ ಬೇಜಾರಿಲ್ಲ. ‘ಮರಿ ಖರ್ಗೆ’ಯ ಹೆಸರಿಗೂ ಸ್ವಂತಿಕೆ ಇಲ್ಲ. ರಾಜೀವ್‌ ಗಾಂಧಿ ತಮ್ಮ ಮಗಳಿಗೆ ಇಟ್ಟಿರುವ ಹೆಸರು ಅದು. ಆ ಹೆಸರು ಗಂಡಿನದ್ದೋ, ಹೆಣ್ಣಿನದ್ದೋ ಎಂಬುದೂ ಗೊತ್ತಾಗುತ್ತಿಲ್ಲ. ಅವರ ಮಾತಿಗೆಲ್ಲ ಬೆಲೆ ಕೊಡಲ್ಲ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT