ಗುರುವಾರ , ಜುಲೈ 7, 2022
25 °C

ಮುಖ್ಯಮಂತ್ರಿ ಪದವಿಗಾಗಿ ಮೇಕೆದಾಟು ಪಾದಯಾತ್ರೆ: ಪ್ರಲ್ಹಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪಾದಯಾತ್ರೆ ಮಾಡಿದರೆ ಮುಖ್ಯಮಂತ್ರಿ ಪದವಿ ಸಿಗಬಹುದು ಎನ್ನುವ ಆಸೆಯಿಂದಾಗಿ ಕಾಂಗ್ರೆಸ್‌ ಮುಖಂಡರು ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ’ಹಿಂದೆ ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ಮಾಡಿ ಮುಖ್ಯಮಂತ್ರಿಯಾದರು. ಅದರಂತೆ ಈಗ ಮೇಕೆದಾಟು ಪಾದಯಾತ್ರೆ ಮೂಲಕ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಈ ಯಾತ್ರೆ ಪೂರ್ಣಗೊಳ್ಳುವುದು ಸಿದ್ದರಾಮಯ್ಯ ಅವರಿಗೇ ಇಷ್ಟವಿಲ್ಲ. ದೆಹಲಿಗೆ ಕರೆದು ರಾಹುಲ್ ಗಾಂಧಿ ತಾಕೀತು ಮಾಡಿದ್ದರಿಂದ ಅವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ’ ಎಂದರು.

‘ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಸುಮ್ಮನಿದ್ದ ಕಾಂಗ್ರೆಸ್‌ ಈಗ ನೀರಿನ ನೆಪದಲ್ಲಿ ಪಾದಯಾತ್ರೆ ಮಾಡುತ್ತಿದೆ. ಸಾಕಷ್ಟು ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಆ ಪಕ್ಷ ಇನ್ನಷ್ಟು ವರ್ಷಗಳ ಕಾಲ ವಿರೋಧ ಪಕ್ಷವಾಗಿಯೇ ಇರಬೇಕು. ಇದಕ್ಕೆ ಅವರು ಒಗ್ಗಿಕೊಂಡು ಇದೇ ರೀತಿ ಧರಣಿ ಹಾಗೂ ಪಾದಯಾತ್ರೆ ಮಾಡಿಕೊಂಡು ಇರಲಿ’ ಎಂದರು.

ಬೆಂಬಲ: ರಾಜ್ಯದಲ್ಲಿ ಎಸ್‌ಡಿಪಿಐ ರಾಜಕೀಯ ಪಕ್ಷವೆಂದು ನೋಂದಣಿ ಮಾಡಿಕೊಂಡಿರುವ ಕಾರಣ ಅದನ್ನು ನಿಷೇಧ ಮಾಡಲು ತಾಂತ್ರಿಕ ಕಾರಣಗಳು ಅಡ್ಡಿಯಾಗಿವೆ. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ನಿಷೇಧಕ್ಕೆ ನನ್ನ ಬೆಂಬಲವಿದೆ ಎಂದರು.

ನಿರಂತರ ಪ್ರಯತ್ನ: ಉಕ್ರೇನ್‌ನಲ್ಲಿ ಕ್ಲಿಷ್ಟಕರ ಪರಿಸ್ಥಿತಿ ನಡುವೆಯೂ ಈಗಾಗಲೇ ಹಲವು ಭಾರತೀಯರನ್ನು ವಿಶೇಷ ವಿಮಾನದ ಮೂಲಕ ತಾಯ್ನಾಡಿಗೆ ಕರೆ ತರಲಾಗಿದೆ. ಅಲ್ಲಿರುವ ಎಲ್ಲರನ್ನೂ ಆದಷ್ಟು ಬೇಗನೆ ವಾಪಸ್‌ ಕರೆತರಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಜೋಶಿ ಹೇಳಿದರು.

ರಷ್ಯಾ ಅಧ್ಯಕ್ಷರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದಾಗಲೂ ಭಾರತೀಯರ ರಕ್ಷಣೆ ವಿಚಾರವನ್ನೇ ಪ್ರಮುಖವಾಗಿ ಒತ್ತಿ ಹೇಳಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಸುರಕ್ಷತೆ ಮತ್ತು ಆಹಾರಕ್ಕೆ ಯಾವುದೇ ತೊಂದರೆಯಾಗಂತೆ ಕ್ರಮ ವಹಿಸಲಾಗುತ್ತಿದೆ ಎಂದರು.

ಉಕ್ರೇನ್‌ನಲ್ಲಿ ಸಿಲುಕಿರುವ ಧಾರವಾಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳ ಪೋಷಕರು ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲರನ್ನೂ ‌ಕರೆತರಲು ಸರ್ವರೀತಿಯ ಪ್ರಯತ್ನ ಮಾಡಲಾಗುತ್ತಿದೆ. ನಾವು ಅಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿದೆ. ರಷ್ಯಾ ಕ್ಷಿಪಣಿ ದಾಳಿ ಕೂಡ ನಡೆಸುತ್ತಿರುವ ಕಾರಣ ನಾವು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಿದೆ ಎಂದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು