ಮಾನಹಾನಿ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ: ಸದಾನಂದ ಗೌಡ ನಡೆಗೆ ಕಾಂಗ್ರೆಸ್ ಟೀಕೆ

ಬೆಂಗಳೂರು: ಮಾನಹಾನಿ ಸುದ್ದಿ ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಕೇಂದ್ರ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರ ನಡೆಯನ್ನು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಕಾಲೆಳೆದಿದೆ.
‘ತಮ್ಮವರಿಂದಲೇ #ಬ್ಲ್ಯಾಕ್ ಮೇಲ್ ಜನತಾ ಪಾರ್ಟಿ ಎಂದು ಕರೆಸಿಕೊಂಡ ಬಿಜೆಪಿಯಲ್ಲಿ ಬ್ಲ್ಯಾಕ್ ಮೇಲ್ ಭರ್ಜರಿಯಾಗಿ ನಡೆಯುತ್ತಿರುವಂತಿದೆ. ಕಂಡವರ ಬೆಡ್ ರೂಮಲ್ಲಿ ಕ್ಯಾಮೆರಾ ಇಡುವ ಚಾಳಿ ಹೊಂದಿರುವ ರಾಜ್ಯದ ಬಿಜೆಪಿ ನಾಯಕರು, ಡಿ.ವಿ ಸದಾನಂದ ಗೌಡ ಅವರನ್ನೂ ಬ್ಲ್ಯಾಕ್ ಮೇಲ್ ಮಾಡುತ್ತಿರುವಂತಿದೆ. ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯ ಹೊಂದಿದವರು ಒಬ್ಬರೂ ಇಲ್ಲ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಕಳ್ಳನ ಮನಸು ಹುಳ್ಳು ಹುಳ್ಳಗೆ ಎಂಬಂತೆ ಸದಾನಂದ ಗೌಡ ಅವರು ಸಿಡಿ ಬಿಡುಗಡೆ ಆಗದಂತೆ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತಂದ ಬಿಜೆಪಿಗರಲ್ಲಿ ಇವರು ಏಳನೆಯವರು! ಬಿಜೆಪಿಯವರಿಗೇ ಏಕೆ ಈ ಪರಿ ಸಿಡಿ ಭಯ ಎಂಬುದೇ ಯಕ್ಷಪ್ರಶ್ನೆ. ತಡೆಯಾಜ್ಞೆ ತರುವ ಮೂಲಕ ತಮ್ಮದೂ ಸಿಡಿ ಇದೆ ಎಂದು ಗೌಡರು ಸ್ವಯಂ ಒಪ್ಪಿಕೊಂಡಂತಾಗಿದೆ’ ಎಂದು ವ್ಯಂಗ್ಯವಾಡಿದೆ.
ಸಿದ್ದರಾಮಯ್ಯ, ‘ಕುಂಬಳ ಕಾಯಿ ಕಳ್ಳ ಎಂದರೆ, ಸದಾನಂದಗೌಡ ಅವರು ಹೆಗಲು ಮುಟ್ಟಿ ನೋಡಿಕೊಳ್ಳುವುದೇಕೆ’ ಎಂದು ಪ್ರಶ್ನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.